Advertisement

Teacher: ಅನಕ್ಷರಸ್ಥರಿಗೆ ಅಕ್ಷರ ಬಿತ್ತಿದ ನಾರಾಯಣಸ್ವಾಮಿ

02:44 PM Sep 23, 2023 | Team Udayavani |

ಚಿಂತಾಮಣಿ: ಶಿಕ್ಷಕರಾದವರು ಬಹುಪಾಲು ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಬೋಧನೆಗೆ ಸೀಮಿತರಾಗಿ ಬಿಡುತ್ತಾರೆ. ಆದರೆ ಚಿಂತಾಮಣಿಯ ಶಿಕ್ಷಕ ಡಾ. ಆರ್‌. ನಾರಾಯಣಸ್ವಾಮಿ ತಮ್ಮ ಶಿಕ್ಷಕ ವೃತ್ತಿಯ ಜತೆಗೆ ಸಮಾಜದಲ್ಲಿನ ಅಸಂಖ್ಯಾತ ಅನಕ್ಷರಸ್ಥರರನ್ನು ಸಾಕ್ಷರನ್ನಾಗಿ ಮಾಡುವ ಹಾಗೂ ಶಾಲೆ ಸಮುದಾಯದಕ್ಕೆ ನೈರ್ಮಲ್ಯದ ಪಾಠ ಹೇಳಿಕೊಟ್ಟು ರಾಜ್ಯದ ಗಮನ ಸೆಳೆದವರು. ಇವರು ಶಾಲೆ, ಸಮುದಾಯದಲ್ಲಿ ಮಾಡಿದ ನೈರ್ಮಲ್ಯದ ಪಾಠಕ್ಕೆ, ಅನಕ್ಷರಸ್ಥರನ್ನ ಸಾಕ್ಷರರನ್ನಾಗಿಸುವ ಮಹತ್ತರ ಕಾರ್ಯಕ್ರಮಕ್ಕೆ ಸರ್ಕಾರ, ವಿವಿಧ ಸಂಘ, ಸಂಸ್ಥೆಗಳು ಗುರುತಿಸಿ ನೀಡಿದ ಪ್ರಶಸ್ತಿ, ಪುರಸ್ಕಾರಗಳಿಗೆ ಅಂತೂ ಲೆಕ್ಕವಿಲ್ಲ. ಆರ್‌.ನಾರಾಯಣಸ್ವಾಮಿ ಕುಗ್ರಾಮದಲ್ಲಿ ಜನಿಸಿದರೂ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸಮಾಜಮುಖಿಯಾಗಿ ಬೆಳೆದವರು.

Advertisement

ಸ್ವಚ್ಛತೆ, ನೈರ್ಮಲ್ಯಕ್ಕೆ ಒತ್ತು: ನಿರ್ಮಲ ಭಾರತ್‌ ಅಭಿಯಾನ್‌, ಸ್ವತ್ಛ ಭಾರತ್‌ ಅಭಿಯಾನದಡಿ ಜಿಲ್ಲಾ ಸಂಯೋಜಕರಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ತುಮಕೂರು ಮುಂತಾದ ಹತ್ತು ಹಲವಾರು ರಾಜ್ಯದ ಜಿಲ್ಲೆಗಳಲ್ಲಿ ಶಾಲಾ ಶೌಚಾಲಯ, ಸಮುದಾಯದ ಶೌಚಾಲಯ, ವೈಯುಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಮಟ್ಟದಿಂದ ಜಿಲ್ಲಾ ಹಂತದವರೆಗೂ ಸಾರ್ವಜನಿಕರ ಮನಸ್ಸು ಬದಲಾವಣೆ ಮಾಡುವಲ್ಲಿ ಇವರ ಪಾತ್ರ ಅತ್ಯಂತ ಹಿರಿದು. ಸುಮಾರು 82,000 ಕುಟುಂಬಗಳನ್ನು ಭೇಟಿ ಮಾಡಿ ವೈಯುಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಕುಟುಂಬಗಳ ಸದಸ್ಯರಿಗೆ ಮನಃ ಪರಿವರ್ತನೆ ಮಾಡಿ ಅರಿವು ಮೂಡಿಸಿದವರು. ಸಚ್ಛ ಭಾರತ್‌ ಯೋಜನೆಯಡಿ ಹಮ್ಮಿಕೊಂಡ ತರಬೇತಿಗಳಲ್ಲಿ ರಾಜ್ಯ ಸಂಪನ್ಮೂಲ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರಕ್ಕೆ ಲೆಕ್ಕವಿಲ್ಲ: ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯಿಂದ ಹಿಡಿದು 42ಕ್ಕೂ ಹೆಚ್ಚು ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಆರ್‌ಎನ್‌ಎಸ್‌ಗೆ 35ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳು ಹುಡುಕಿ ಬಂದಿವೆ. 14 ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಜನಾರಾಗಿದ್ದಾರೆ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸೇವಾ ರತ್ನ ಪ್ರಶಸ್ತಿ, ಗ್ಲೋಬಲ್‌ ಐಕಾನ್‌ ಅವಾರ್ಡ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿಕ್ಷಕರಾಗಿ ಸಿಆರ್‌ಪಿ. ಬಿಆರ್‌ಪಿ, ರಾಜ್ಯ ಸಂಪನ್ನೂಲ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ನಾರಾಯಣಸ್ವಾಮಿ, ವಿಜ್ಞಾನ ಮತ್ತು ಗಣಿತ ಶಿಕ್ಷಕರಾಗಿ 32 ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜ್ಞಾನ ಮತ್ತು ಗಣಿತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಂಘಟನೆ ಮಾಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ರ್‍ಯಾಂಕ್‌ ಪಡೆಯಲು ಪ್ರತ್ಯೇಕವಾಗಿ ಬೋಧನೆ ಮಾಡಿದ್ದಾರೆ. ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳನ್ನು ನವೋದಯ ಶಾಲೆ , ಮೊರಾರ್ಜಿ ಶಾಲೆ, ಕಿತ್ತೂರರಾಣಿ ಚೆನ್ನಮ್ಮ ಶಾಲೆ, ಆದರ್ಶ ಶಾಲೆ, ಅಂಬೇಡ್ಕರ್‌ ಶಾಲೆ, ಸೈನಿಕ ಶಾಲೆ ಶಾಲೆಗಳಿಗೆ ಬಡ ಮಕ್ಕಳು ದಾಖಲಾಗಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗೊಳಿಸಿ ವಿವಿಧ ಶಾಲೆಗಳಿಗೆ ಮಕ್ಕಳು ದಾಖಲಾಗಲು ನಿರಂತರವಾಗಿ ಶ್ರಮಿಸಿದ್ದಾರೆ.

ಆರ್‌ಎನ್‌ಎಸ್‌ಗೆ ಸಮ್ಮೇಳನಾಧ್ಯಕ್ಷ ಗೌರವ: ಸೆ.18 ರಂದು ಶಿಕ್ಷಕ ಆರ್‌.ನಾರಾಯಣಸ್ವಾಮಿಗೆ ರಕ್ಷಣಾ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಶೈಕ್ಷಣಿಕ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಸೆ.28 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆಯುವ ಅಖೀಲ ಭಾರತ ಶಿಕ್ಷಕರ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಆರ್‌ಎನ್‌ಎಸ್‌ಗೆ ಸಮ್ಮೇಳನಾಧ್ಯಕ್ಷ ಗೌರವ ಸೆ.18 ರಂದು ಶಿಕ್ಷಕ ಆರ್‌.ನಾರಾಯಣಸ್ವಾಮಿಗೆ ರಕ್ಷಣಾ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಶೈಕ್ಷಣಿಕ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಸೆ.28 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆಯುವ ಅಖೀಲ ಭಾರತ ಶಿಕ್ಷಕರ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

-ಎಂ.ಡಿ.ತಿಪ್ಪಣ್ಣ

Advertisement

 

Advertisement

Udayavani is now on Telegram. Click here to join our channel and stay updated with the latest news.

Next