ತಿರುವನಂತಪುರಂ: ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕಾಗಿ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿಯನ್ನು ಸೇವೆಯಿಂದ ವಜಾ ಮಾಡಿರುವ ಘಟನೆ ಕೇರಳದ ಕೊಟ್ಟಕ್ಕಾಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಹೆರಿಗೆ ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದಾಗ ಶಾಲೆಯ ಪೋಷಕರು ಮತ್ತು ಶಿಕ್ಷಕರ ಸಂಘವು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿರುವುದಲ್ಲದೆ, ಕೆಲಸ ಪುನಾರಂಭಿಸಲು ಅವಕಾಶ ನೀಡುತ್ತಿಲ್ಲ ಎಂದು 33 ವರ್ಷದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ.ಶಿಕ್ಷಕಿಯು ಮೊದಲ ಪತಿಗೆ ವಿಚ್ಛೇದನ ನೀಡಿ, ಮತ್ತೂಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಲು ನಿರ್ಧರಿಸಿದ್ದರು. ವಿಚ್ಛೇದನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ, ಮರುಮದುವೆ ನಡೆಯುವ ಮುನ್ನವೇ ಆಕೆ ವಿವಾಹವಾಗಲು ಬಯಸಿದ್ದ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದರು. 2018ರಲ್ಲಿ ಕಾನೂನುಬದ್ಧವಾಗಿ ವಿವಾಹವಾದರು. ಇದಾದ 4 ತಿಂಗಳಲ್ಲೇ ಹೆರಿಗೆ ರಜೆ ಹಾಕಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗಲು ಬಿಡುತ್ತಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.