Advertisement

ಬರಡು ಭೂಮಿಯಲ್ಲಿ ಕೃಷಿ ಕ್ರಾಂತಿ ಮಾಡಿದ ಶಿಕ್ಷಕ ದಂಪತಿ

07:00 PM Jan 10, 2022 | Team Udayavani |

ಬೆಳ್ತಂಗಡಿ: ಸಾಮಾನ್ಯವಾಗಿ ಶುಂಠಿ ಕೈ ಸುಡುವ ಬೆಳೆ ಎಂದೇ ಕರೆಯಲ್ಪಟ್ಟಿದ್ದರಿಂದ ಈ ಹಿಂದೆ ದ.ಕ. ಜಿಲ್ಲೆಯಲ್ಲಿ ಅಲ್ಪ ಸ್ವಲ್ಪ ಕೃಷಿಕರಷ್ಟೇ ಬೆಳೆಯುತ್ತಿದ್ದ ಕಾಲವೊಂದಿತ್ತು. ಬಳಿಕ ಅತಿ ಯಾದ ಮಳೆ ಮತ್ತು ಕೊಳೆರೋಗದಿಂದ ಶುಂಠಿ ಬೆಳೆಯಿಂದ ಬಹುತೇಕ ಕೃಷಿಕರು ವಿಮುಖರಾಗಿದ್ದರು. ಆದರೆ ಬೆಳ್ತಂಗಡಿ ತಾಲೂಕಿನ ಶಿಕ್ಷಕ ದಂಪತಿ ಸಾವಯವ ಕೃಷಿ ಮಾಡಿ, 70 ಕಾಂಡವುಳ್ಳ ಶುಂಠಿ ಬೆಳೆ ಬೆಳೆದು ದಾಖಲೆ ನಿರ್ಮಿಸಿದ್ದಾರೆ.

Advertisement

ಕೊರೊನಾ ಸಂದ‌ರ್ಭದಲ್ಲಿ ಕೆಲಸವಿಲ್ಲ ಎಂದು ವಿಶ್ರಾಂತಿಗೆ ಸರಿದವರೇ ಹೆಚ್ಚು. ಆದರೆ ತೋಟತ್ತಾಡಿ ನಿವಾಸಿ ನೆರಿಯ ಸೈಂಟ್‌ ತೋಮಸ್‌ ಪ್ರೌಢಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಜೋಸೆಫ್‌ ಕೆ.ಜೆ. ಹಾಗೂ ತ್ರೇಸಾ ಪಿ.ಜೆ. ಶಿಕ್ಷಕ ದಂಪತಿ ಸಾವಯವ ಕೃಷಿ ಕಾಯಕದಲ್ಲೊಂದು ವಿಭಿನ್ನ ಧೈರ್ಯ ತಳೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಡ ಕನ್ಯಾಡಿ ಸಮೀಪ ಜೋಸೆಫ್‌ ದಂಪತಿ 5 ಎಕ್ರೆ ಕಾಡಿನಂತಿದ್ದ ಪ್ರದೇಶವನ್ನು ಬಾಡಿಗೆ ಪಡೆದು ಶುಂಠಿ, ಸಾಂಬ್ರಾಣಿ, ಸುವರ್ಣ ಗೆಡ್ಡೆ, ಕೆಸು, ಹರಿಶಿಣ, ಮರಗೆಣಸು, ಕದಳಿ ಬಾಳೆಹಣ್ಣು ಸಹಿತ ಪೌಷ್ಟಿಕಾಂಶವುಳ್ಳ ಸಂಪೂರ್ಣ ಸಾವಯವ ಮಾದರಿಯಲ್ಲಿ ಕೃಷಿ ನಡೆಸಿರುವುದು ಮಾದರಿ.

ಪಂಚಗವ್ಯ, ಜೀವಾಮೃತ ಸಿಂಪಡಣೆ
ಬಾಡಿಗೆ ಪಡೆದ ಭೂಮಿಯಲ್ಲಿದ್ದ ಗಿಡಗಂಟಿ ತೆರವುಗೊಳಿಸಿ ಕೃಷಿ ಮಾಡಲು ಜೋಸೆಫ್‌ ಸುಮಾರು 5 ಲಕ್ಷ ರೂ. ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಸಾವಯವ ಆರೋಗ್ಯಯುತ ಬೆಳೆಗೆ ಆದ್ಯತೆ ನೀಡುವ ಉದ್ದೇಶದಿಂದ ಜೀವಾಮೃತ, ಪಂಚಗವ್ಯ ಸಿದ್ಧಪಡಿಸಿ ಬೆಳೆಗಳಿಗೆ ಸಿಂಪಡಿಸಿದ್ದಾರೆ.

ಕಾಡುಪ್ರಾಣಿಗಳಿಂದ ಉಪಟಳ
ಬೆಳೆಗೆ ಕಾಡು ಪ್ರಾಣಿಗಳ ಹಾವಳಿ ಸಾಮಾನ್ಯವಾಗಿದೆ. ಜಾಗದ ಸುತ್ತ ನೈಲಾನ್‌ ಫೆನ್ಸಿಂಗ್‌ ಅಳವಡಿಸಿದ್ದೇನೆ. ಕೋತಿಗಳ ಹಾವಳಿಯಿದ್ದು, ಅವುಗಳಿಗೂ ಆಹಾರ ನಮಗೂ ಆಹಾರ ಬೇಕಾಗಿದೆ. ಹಂಚಿ ತಿನ್ನಬೇಕು ಎಂಬ ದೃಷ್ಟಿಯಲ್ಲಿ ಅನುಸರಿಸುತ್ತ ಹೋಗುತ್ತಿದ್ದೇವೆ ಎನ್ನುತ್ತಾರೆ ಜೋಸೆಫ್‌. ಶಿಕ್ಷಕ ದಂಪತಿ ಬೆಳಗ್ಗೆ 5ರಿಂದ 8.30ರ ತನಕ, ಸಂಜೆ 6.30ರಿಂದ ರಾತ್ರಿ 11ರ ತನಕ ಸ್ವತಃ ತಾವೇ ತೋಟದಲ್ಲಿ ಕೃಷಿ ಚಟುವಟಿಕೆಯೊಂದಿಗೆ ನಡೆಸುತ್ತಿರುವುದರಿಂದ ಮಕ್ಕಳೂ ಹವ್ಯಾಸವಾಗಿ ರಜಾ ದಿನಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

Advertisement

ಶುಂಠಿಯಲ್ಲಿ 70 ಕವಲು
ಸುಮಾರು 3 ಎಕ್ರೆಯಲ್ಲಿ ಶುಂಠಿ ಕೃಷಿ ಬೆಳೆದಿದ್ದರು. ಇಡುಕ್ಕಿ, ತೀರ್ಥಹಳಿ, ಚಿಕ್ಕಮಗಳೂರಿನ ಎನ್‌.ಆರ್‌.ಪುರದಿಂದ ಬೀಜಗಳನ್ನು ತಂದು ಬಿತ್ತಿದ್ದಾರೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಶುಂಠಿ ಕಾಂಡದಿಂದ 60ರಿಂದ 65 ಕವಲು ಬಿಟ್ಟಿರುವುದು ದಾಖಲೆಯಾಗಿತ್ತು. ಅಂದರೆ ಒಂದು ಶುಂಠಿಯ ಗಿಡದಲ್ಲಿ ಇಂತಿಷ್ಟು (ಸ್ಟಂಪ್ಸ್‌)ಕವಲು ಬಿಡುತ್ತದೆ. ಅದೇ ರೀತಿ ಜೋಸೆಫ್‌ ಅವರ ಶುಂಠಿ ತೋಟದಲ್ಲಿ ಸುಮಾರು 55 ರಿಂದ 70 ಕಾಂಡ ಬೆಳೆದಿರುವುದು ದಾಖಲೆ ಯಾಗಿದೆ. ಈ ಕುರಿತು ಪರಿಶೀಲಿಸಲು ಬೆಳ್ತಂಗಡಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಎಸ್‌.ಚಂದ್ರಶೇಖರ್‌ ಭೇಟಿ ಮಾಡಿದ್ದಾರೆ.

ನಿರೀಕ್ಷೆಯಂತೆ ಬೆಳೆ
ನಶಿಸಿ ಹೋಗುವ ಬೆಳೆಯನ್ನು ಸಾವಯವ ಬೆಳೆಯಾಗಿ ಪರಿವರ್ತಿಸಿ ಪೋಷಿಸುವ ಸಲುವಾಗಿ 5 ಎಕ್ರೆ ಜಮೀನು ಬಾಡಿಗೆ ಪಡೆದು ಒಂದು ಎಕ್ರೆಯಲ್ಲಿ ಔಷಧೀಯ ಸತ್ವ ಹೆಚ್ಚಿರುವ ಹಾಗೂ ಬೇಗನೆ ಬೆಳೆಯುವ ಬೆಣ್ಣೆ ತಳಿಯ ಸುವರ್ಣಗಡ್ಡೆ, ಒಂದೂವರೆ ಎಕ್ರೆಯಲ್ಲಿ ಬಹಳಷ್ಟು ಬೇಡಿಕೆ ಹೊಂದಿರುವ ಸಾಮ್ರಾಣಿ ಗಡ್ಡೆ ಸಹಿತ ಇತರ ಬೆಳೆ ಬೆಳೆದಿದ್ದೇವೆ. ಸುಮಾರು 180 ಕ್ವಿಂಟಾಲ್‌ ಸುವರ್ಣಗೆಡ್ಡೆ ಬೆಳೆ ನಿರೀಕ್ಷಿಸಿದಂತೆ ಕೈಸೇರಿದೆ.
-ಜೋಸೆಫ್‌ ಕೆ.ಜೆ., ಶಿಕ್ಷಕರು,
ನೆರಿಯ ಸೈಂಟ್‌ ತೋಮಸ್‌ ಪ್ರೌಢಶಾಲೆ

ಉತ್ತಮ ದಾಖಲೆ
ಶುಂಠಿ ಬೆಳೆಯಲ್ಲಿ ಒಂದು ಕಾಂಡದಲ್ಲಿ ಸುಮಾರು 45ರಿಂದ 50 ಕಾಂಡಗಳು ಬರುವುದು ಸಾಮಾನ್ಯ. ಆದರೆ ಜೋಸೆಫ್‌ ಅವರ ತೋಟದಲ್ಲಿ ಸುಮಾರು 65ರಿಂದ 70 ಕಾಂಡಗಳು ಕವಲೊಡೆದಿರುವುದು ಜಿಲ್ಲೆಯಲ್ಲಿ ಪ್ರಸಕ್ತ ಉತ್ತಮ ದಾಖಲೆಯಾಗಿದೆ.
-ಕೆ.ಎಸ್‌.ಚಂದ್ರಶೇಖರ್‌,
ಹಿರಿಯ ಸಹಾಯಕ ತೋಟ ಗಾರಿಕೆ ನಿರ್ದೇಶಕರು, ಬೆಳ್ತಂ ಗಡಿ ತೋಟಗಾರಿಕೆ ಇಲಾಖೆ

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next