ಹುಬ್ಬಳ್ಳಿ: ರಾಜಕಾರಣಿಗಳು ಸ್ವಾರ್ಥಕ್ಕಾಗಿ ರೈತರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ಹಗುರವಾಗಿ ಮಾತನಾಡುವ, ನಿರ್ಲಕ್ಷ ತೋರುತ್ತಿರುವವರನ್ನು ಮನೆಗೆ ಕಳುಹಿಸಬೇಕೆಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
37ನೇ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಅಖಂಡ ಕರ್ನಾಟಕ ರೈತ ಸಂಘದಿಂದ ಶುಕ್ರವಾರ ಇಲ್ಲಿನ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಎಲ್ಲರಿಗೂ ಬೇಕಾದ ಆಹಾರವನ್ನು ಉತ್ಪಾದನೆ ಮಾಡುವವನೆ ರೈತ.
ಆದರೆ ಆತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಕೊಡುತ್ತಿಲ್ಲ. ಉದ್ಯಮಿಗಳು ನಷ್ಟ ಹೊಂದಿದರೆ ಅವರ ಕೋಟ್ಯಂತರ ರೂ. ಸಾಲವನ್ನು ಸರಕಾರಗಳು ಮನ್ನಾ ಮಾಡುತ್ತವೆ. ಅದೇ ರೈತ ಬರದಿಂದ ತತ್ತರಿಸಿ ಹಾನಿಗೊಳಗಾದರೂ ಬೆಳೆ ನಷ್ಟ ಪರಿಹಾರ ಸಹ ಸಮರ್ಪಕವಾಗಿ ನೀಡುತ್ತಿಲ್ಲ. ಬ್ಯಾಂಕ್‌ನಿಂದ ಪಡೆದ ಸಾಲ ಮನ್ನಾ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ಭ್ರಷ್ಟರ ದೊಡ್ಡ ಜಾಲವೇ ಅಡಗಿದೆ. ಜನರ ಭೂಮಿ, ಹಣ ಕೊಳ್ಳೆಹೊಡೆದ, ಲಂಚ ತಿಂದು ಜೈಲಿಗೆ ಹೋದ ಜನಪ್ರತಿನಿಧಿಗಳಿಗೆ ಸ್ವಾಭಿಮಾನವಿಲ್ಲ. ತಮ್ಮ ಅವ್ಯಹಾರಗಳ ದಂಧೆಗೆ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಅಂಥವರಿಗೆ ತಕ್ಕಪಾಠ ಕಲಿಸಬೇಕಾಗಿದೆ. ರೈತ ಜನಾಂಗದವರು ನಮ್ಮ ಸಂಸ್ಕೃತಿ, ಭಾಷೆ ಬಿಟ್ಟು ಕೊಡಬಾರದು.
ಆಡಂಬರದ ಸಂಸ್ಕೃತಿಗೆ ಮಾರು ಹೋಗಬೇಡಿ ಎಂದು ಕಿವಿಮಾತು ಹೇಳಿದರು. ಅಣ್ಣಿಗೇರಿಯ ಶಿವಕುಮಾರ ಸ್ವಾಮೀಜಿ ಮಾತನಾಡಿ, ಜನಪ್ರತಿನಿಧಿಗಳು ನಾವು ಮಣ್ಣಿನ ಮಕ್ಕಳು, ರೈತರ ಮಕ್ಕಳು ಎಂದು ಹೇಳಿಕೊಂಡು ಪಕ್ಷ ಕಟ್ಟಿಕೊಂಡು ತಮಗೆ ಬೇಕಾದ ಸ್ಥಾನ-ಮಾನ ಪಡೆದುಕೊಳ್ಳುತ್ತಿದ್ದಾರೆ.
ನಿಜವಾದ ರೈತರು ಯಾರ ಮಕ್ಕಳು ಎಂಬುದೇ ತಿಳಿಯದಾಗಿದೆ. ರೈತರೆಲ್ಲ ಸಂಘಟನೆಗೊಂಡು ಬದಲಾವಣೆ ತರಬೇಕಾಗಿದೆ ಎಂದರು. ಸಂಘದ ರಾಜ್ಯ ಕಾರ್ಯದರ್ಶಿ ಆರ್.ಆರ್. ಮಹೇಶ, ಉಪಾಧ್ಯಕ್ಷ ಸಿದ್ಧರಾಮ ರಂಜನಗಿ, ಹಜರತ್‌ಅಲಿ ಜೋಡಮನಿ (ಶೇಖ್), ಮಾರುತಿ ತಿಗಡಿ, ಶ್ಯಾಮಸುಂದರ ರಂಜನಗಿ, ಶಂಕರಗೌಡ ಪಾಟೀಲ ಮಾತನಾಡಿದರು.
ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಸಿದ್ಧನಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಮಹಾಂತೇಶ ರಾಹುತ, ಸಿದ್ದು ಕಂಬಾರ, ಮಲ್ಲಣ್ಣ ಪಟ್ಟಣದ ಇದ್ದರು. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹಾವೇರಿ, ಗದಗ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು, ಮಹಿಳಾ ರೈತರು ಪಾಲ್ಗೊಂಡಿದ್ದರು. ಕೇಶವ ಯಾದವ ನಿರೂಪಿಸಿದರು.