ಹೊಸನಗರ: ಡಿಸಿಸಿ ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ ಬಾಳೆ ಹಣ್ಣು ತಿಂದವರು ಚುನಾವಣೆ ಸ್ಪರ್ಧೆಗೆ, ಸಿಪ್ಪೆ ತಿಂದ ಸಿಬ್ಬಂದಿ ಕೆಲಸ ಕಳೆದುಕೊಂಡು ಮನೆ ಸೇರಿದ್ದಾರೆ ಎಂದು ಶಾಸಕ ಕಿಮ್ಮನೆ ರತ್ನಾಕರ ಆರೋಪಿಸಿದರು.
ಸಮೀಪದ ರಾಮಚಂದ್ರಾಪುರ ಗ್ರಾಮದಲ್ಲಿ ಬುಧವಾರ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸುಮಾರು ರೂ.60 ಕೋಟಿ ಡಿಸಿಸಿ ಬ್ಯಾಂಕ್ ಅವ್ಯವಹಾರ ಪ್ರಕರಣದ ತನಿಖೆ ಆರಂಭ ಆಗಿದೆ ಅಷ್ಟೆ. ಇನ್ನು ಮುಂದಿದೆ ದೊಡ್ಡಾಟ ಕಾದಿದೆ ಎಂದು ಭವಿಷ್ಯ ನುಡಿದರು.
ಮತ ನೀಡಿದ ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ನೀಡುವುದಾಗಿ ಹುಸಿ ಭರವಸೆಯನ್ನು ಸುಳ್ಳುಗಾರರು ಬರುತ್ತಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಹಲವು ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಳೆದ 10 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಪ್ರತಿ ಜಿಪಂ ಕ್ಷೇತ್ರಕ್ಕೆ ತಲಾ ರೂ.100 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಒಳ್ಳೆಯ ನಟನಾ ಸಾಮರ್ಥ್ಯ ಇದೆ. ಲೋಕಸಭಾ ಚುನಾವಣೆಗೆ ಮೊದಲು ನೀಡಿದ ಭರವಸೆಗಳು ಹುಸಿಯಾಗಿವೆ. ಕೋಮು ಸೌಹಾರ್ದ ಕಲಕಿ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿಯ ಬಿಜೆಪಿಯವರ ಬಗ್ಗೆ ಕಾರ್ಯಕರ್ತರು ಎಚ್ಚರದಿಂದ ಇರಲು ಕರೆ ನೀಡಿದರು.
ಸೇರ್ಪಡೆ: ರಾಮಚಂದ್ರಾಪುರ ಗ್ರಾಮದ ಬಿಜೆಪಿ ಪ್ರಮುಖರಾದ ಗುರುಕಿರಣ್, ರಾಯಲ್, ಧರೇನಾ, ಶಶಿಕಲಾ, ಶೋಭಾ, ಮುಸ್ತಫಾ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಕಿಮ್ಮನೆ ಸುಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಜಿಪಂ ಸದಸ್ಯ ಕಲಗೋಡು ರತ್ನಾಕರ, ತಾಪಂ ಸದಸ್ಯ ಚಂದ್ರಮೌಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬಾ ರಾಘವೇಂದ್ರ, ಪ್ರಮುಖರಾದ ಜಯ ಜಿ. ರಾವ್, ಮೈಥಿಲಿ,
ಚಂದ್ರಕಲಾ, ಆದಿಲ್, ಚಂದ್ರಮೂತಿರ, ಧರ್ಮಪ್ಪ, ಜಯನಗರ ಗುರು ಮತ್ತಿತರರು ಇದ್ದರು.