Advertisement

ಪಠ್ಯದೊಂದಿಗೆ ನೀತಿ ಪಾಠ ಬೋಧಿಸಿ: ಮನ್ನಿಕೇರಿ

05:33 PM Jan 24, 2022 | Team Udayavani |

ಧಾರವಾಡ: ಶಿಕ್ಷಕರು ಹೆಚ್ಚು ಕ್ರಿಯಾತ್ಮಕವಾಗಿ ಬೋಧನೆ ಮಾಡಬೇಕು. ಪಠ್ಯಕ್ಕೆ ಸಂಬಂಧಪಟ್ಟ ವಿಷಯದ ಜತೆಗೆ ನೀತಿ ಪಾಠ ಬೋಧಿಸಿದರೆ ವಿದ್ಯಾರ್ಥಿಯು ಅಂಕಗಳ ಜತೆಗೆ ಉತ್ತಮ ನಾಗರಿಕನಾಗಿ ಬೆಳೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ (ಆಡಳಿತ) ಗಜಾನನ ಮನ್ನಿಕೇರಿ ಹೇಳಿದರು.

Advertisement

ನಗರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಬೆಳಗಾವಿ ವಿಭಾಗದ ಶೈಕ್ಷಣಿಕವಾಗಿ ಹಿಂದುಳಿದ 20 ತಾಲೂಕುಗಳ ಆಯ್ದ 20 ಸರಕಾರಿ ಪ್ರೌಢಶಾಲೆಗಳಿಗೆ ಪ್ರೌಢಶಾಲಾ ಪಠ್ಯಕ್ರಮದ ಅನುಸಾರ ವಿಜ್ಞಾನ ಮತ್ತು ಗಣಿತ ವಿಷಯಗಳ ಪರಿಕರಗಳು ಕಿಟ್‌ ವಿತರಣೆ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿಜ್ಞಾನ ಕೇಂದ್ರದ ಮೂಲಕ ವಿಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಅನೇಕ ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿರುತ್ತಿರುವುದು ಹೆಮ್ಮೆಯ ವಿಷಯ. ಶಿಕ್ಷಕರಿಗೆ ಸಮಯ ಬಹಳ ಮಹತ್ವದ್ದು. ಶಿಕ್ಷಣ ವ್ಯವಸ್ಥೆಗೆ ಮಹತ್ವವನ್ನು ಕೊಡಬೇಕು ಹಾಗೂ ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರ ಭವಿಷ್ಯ ಉಜ್ವಲವಾಗುವುದು. ಶಿಕ್ಷಕರು ವಿಜ್ಞಾನ ಮತ್ತು ಗಣಿತ ವಿಷಯಗಳ ಪರಿಕರಗಳ ತರಬೇತಿ ಪಡೆದು ಹೊಸ ಹೊಸ ವಿಷಯಗಳ ಜತೆ ಆವಿಷ್ಕಾರಗಳನ್ನು ಮಾಡುವಂತೆ ಉತ್ತೇಜನ ನೀಡಬೇಕು ಎಂದರು.

ಕೇಂದ್ರದ ನಿರ್ದೇಶಕ ಡಾ| ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ಪರಿಕರಗಳ ತರಬೇತಿ ಪಡೆದುಕೊಂಡು ತಮ್ಮ ಶಾಲೆಗಳಲ್ಲಿ ಇದಲ್ಲದೇ ಅಕ್ಕಪಕ್ಕದ ಶಾಲೆಗಳ ಮಕ್ಕಳನ್ನು ತಮ್ಮ ಶಾಲೆಗಳಿಗೆ ಆಹ್ವಾನಿಸಿ ಇವುಗಳ ಬಗ್ಗೆ ತಿಳಿವಳಿಕೆ ನೀಡುವ ಜತೆಗೆ ಮಕ್ಕಳನ್ನು ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಬರುವಂತೆ ಮಾಡಬೇಕು. ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳನ್ನು ಹುಟ್ಟು ಹಾಕುವ ಕಾರ್ಯವನ್ನು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವೈಜ್ಞಾನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕರಾದ ಸಿ.ಎಫ್‌. ಚಂಡೂರ, ವಿಶಾಲಾಕ್ಷಿ ಎಸ್‌. ಜೆ. ಹಾಗೂ ಭುವನೇಶ್ವರಿ ದಾನಪ್ಪಗೌಡರ ಅವರು ಪರಿಕರಗಳ ಕಿಟ್‌ ಬಗ್ಗೆ ತರಬೇತಿ ನೀಡಿದರು. ವಿಶಾಲಾಕ್ಷಿ ಎಸ್‌. ಜೆ. ನಿರೂಪಿಸಿದರು. ಸಿ.ಎಫ್‌. ಚಂಡೂರ ಸ್ವಾಗತಿಸಿ, ವಂದಿಸಿದರು. ಸಂಜಯ ಮಾಳಿ ಇನ್ನಿತರರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next