Advertisement

ಅಲ್ಪಸಂಖ್ಯಾತ ಬಾಂಧವರೇ ಕಾಂಗ್ರೆಸ್ ಗೆ ಒಮ್ಮೆ ಪಾಠ ಕಲಿಸಿ:ಹಾನಗಲ್ ನಲ್ಲಿ ಸಿಎಂ

02:33 PM Oct 27, 2021 | Team Udayavani |

ಹಾವೇರಿ: ”ಅಲ್ಪಸಂಖ್ಯಾತ ಬಾಂಧವರು ಕಾಂಗ್ರೆಸ್ ಗೆ ಒಮ್ಮೆ ಸರಿಯಾಗಿ ಪಾಠ ಕಲಿಸಬೇಕು. ಆಗ ನಿಮ್ಮ ಮಹತ್ವ ಗೊತ್ತಾಗುತ್ತದೆ.ಅವರು ನಂತರ ಚಿಂತನೆ ಮಾಡುತ್ತಾರೆ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಹಾನಗಲ್ ನಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಕೂಡಲದಲ್ಲಿ ಪ್ರಚಾರ ನಡೆಸಿದ ಸಿಎಂ, ”ಜಮೀರ್ ಅಹ್ಮದ್ ಅವರು ಸಾಮಾಜಿಕವಾಗಿ ಮತ ಕೇಳದೇ ಕೇವಲ ಒಂದೇ ಸಮಾಜದವರ ಮತ ಕೇಳಿದ್ದಾರೆ. ಕಾಂಗ್ರೆಸ್ ನವರಿಗೆ ಕೇವಲ ಅಲ್ಪಸಂಖ್ಯಾತರ ಮತ ಅಷ್ಟೇ ಬೇಕು ಎಂಬುದು ನಮಗೂ ಗೊತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಬಾವಿಯಲ್ಲಿ ಇಟ್ಟಿದೆ. ಅವಶ್ಯಕತೆ ಬಿದ್ದಾಗ ಮಾತ್ರ ಹಗ್ಗ ಬಿಟ್ಟು ಮೇಲಕ್ಕೆ ಎತ್ತುತ್ತಾರೆ.  ನಂತರ ಕೆಲಸ ಮುಗಿದಿಂದ ಬಾವಿಗೆ ಬಿಟ್ಟು ಬಿಡುತ್ತಾರೆ. ಅವರನ್ನು ಗುತ್ತಿಗೆಗೆ ಪಡೆದಂತೆ ಬಳಕೆ ಮಾಡಿಕೊಳ್ಳುತ್ತಾರೆ ”ಎಂದು ದೂರಿದರು.

”ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ. ಏನು ಮಾಡಿದ್ದೀರೆಂದು ಕೇಳುತ್ತಾರೆ. ಬಹಿರಂಗ ಚರ್ಚೆಗೆ ಬನ್ನಿ ಎನ್ನುತ್ತಾರೆ. ಅದಕ್ಕೆ ನನ್ನ ತಕರಾರಿಲ್ಲ. ಆದರೆ ನೀವು ಬಹಿಂರಂಗವಾಗಿ ಬಂದು ನಮ್ಮ ಕೆಲಸ ಕಾರ್ಯ ನೋಡಿ. ನಂತರ ಚರ್ಚೆ ಮಾಡೋಣ” ಎಂದರು.

”ಕೂಡಲ ಹೊಸ ಗ್ರಾಮ ಮಾಡಲು ಜಮೀನು ಗುರುತಿಸಿ ಕಾರ್ಯ ನಡೆದಿದೆ. ಪ್ರವಾಹದಿಂದ ಶಾಶ್ವತ ಪರಿಹಾರ ನೀಡುತ್ತೇವೆ. ಹಾನಗಲ್ಲ ತಾಲೂಕಿನ 25 ಸಾವಿರ ರೈತರಿಗೆ 48 ಕೋಟಿ ಬೆಳೆ ವಿಮೆ ಬಂದಿದೆ. ಚರ್ಚೆ ಮಾಡಲು ವಿಧಾನಂಡಲಕ್ಕಿಂತ ದೊಡ್ಡ ವೇದಿಕೆಯಿಲ್ಲ. ಯಾವಾವ ಸರ್ಕಾರದ ಕಾಲದಲ್ಲಿ ಏನೆನು ಅಭಿವೃದ್ಧಿ ಯಾಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಲು ಸಿದ್ಧ” ಎಂದು ಸವಾಲು ಹಾಕಿದರು.

”ಅಭಿವೃದ್ಧಿಯಲ್ಲಿ ಸರ್ವರಿಗೂ ಸಮಪಾಲು ನೀಡಿ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳು ಮುಂದುವರೆಸಲು ಹಾಗೂ ಸಿ.ಎಂ ಉದಾಸಿಯವರ ಕನಸುಗಳನ್ನು ಸಾಕಾರಗೊಳಿಸಲು ಶಿವರಾಜ ಸಜ್ಜನರ ಅವರಿಗೆ ಮತ ನೀಡಿ ಗೆಲ್ಲಿಸಬೇಕು. ಸಜ್ಜನರ ಅವರು ಉದಾಸಿಯವರಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ ಅನುಭವವಿದೆ ಅವರೊಂದಿಗೆ ಇದ್ದುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದಾರೆ”ಎಂದರು.

Advertisement

ಕ್ಷೇತ್ರದಲ್ಲಿ ಬಿಜೆಪಿ ಸುನಾಮಿ 

”ಹಾನಗಲ್ಲ ಕ್ಷೇತ್ರದ ಎಲ್ಲ ಸಮುದಾಯವರಲ್ಲಿ ಜಾಗೃತಿ ಮೂಡಿದೆ. ತಮ್ಮ ಹಕ್ಕುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದು ಗೊತ್ತಾಗಿದೆ. ಈ ಹಿನ್ನೆಲೆ ಕ್ಷೇತ್ರದಲ್ಲಿ ಸಮಾಜಿಕರಣ ಕಂಡು ಬರುತ್ತಿದ್ದು ಬಿಜೆಪಿ ಪರ ಒಲವು ತೋರುತ್ತಿದ್ದಾರೆ” ಎಂದರು.

”ಈ ಚುನಾವಣೆಯಲ್ಲಿ ಕಾಂಗ್ರಸ್ ನೆಲಕಚ್ಚುತ್ತದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಸಿಎಂ ಆಗಿ ಅಧಿಕಾರ ಸ್ವೀಕರಿದ ತಕ್ಷಣವೇ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯಬೇಕು ಎಂದು ಮೊಲದ ಬಾರಿಗೆ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡಲಾಯಿತು. ಇದು ದೇಶದಲ್ಲಿಯೇ ಮೊಲದ ಬಾರಿ. ಯಾರು ಸಹ ಇಂತಹ ಯೋಜನೆ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ಎಸ್ಸಿ,ಎಸ್ಟಿ ಒಬಿಸಿ ಹಾಗೂ ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಿ ಆರ್ಥಿಕ ನೆರವು ನೀಡಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು” ಎಂದು ಭರವಸೆ ನೀಡಿದರು.

”ನಾನು ನಿಮ್ಮವನೇ ಪಕ್ಕದ ಶಿಗ್ಗಾವಿ ಕ್ಷೇತ್ರದವನು. ಮುಖ್ಯಮಂತ್ರಿಯಾಗಿ ನಿಮ್ಮ ರಕ್ಷಣೆ, ಅಭಿವೃದ್ಧಿಗೆ ಬದ್ಧನಾಗಿದ್ದೆನೆ. ತಾಲೂಕಿಗೆ ಈಗಾಗಲೇ 7500 ಮನೆಗಳನ್ನು ಮಂಜೂರು ಮಾಡಿದ್ದು, ಇನ್ನೂಳಿದ ಒಂದುವರೆ ವರ್ಷದಲ್ಲಿ ಎಲ್ಲ ಮನೆಗಳನ್ನು ನಿರ್ಮಾಣ ಮಾಡಿ ನಿಮ್ಮ ಮನೆ ಎದುರು ಬಂದು ನಿಲ್ಲುತ್ತೇನೆ” ಎಂದರು.

”ಪೂರ್ವದಲ್ಲಿ ಸೂರ್ಯ ಉದಯವಾಗುವುದು ಎಷ್ಟು ಸತ್ಯವೋ, ಶಿವರಾಜ ಸಜ್ಜನರ 25 ಸಾವಿರ ಮತಗಳಿಂದ ಗೆಲುವು ಸಾಧಿಸುವುದು ಅಷ್ಟೇ ಸತ್ಯ” ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next