Advertisement

ಒಂಚೂರು ಪಥ್ಯ ಕಲಿಸು, ಬದುಕಿಡೀ ಪ್ರೀತಿಸುವೆ!

06:30 AM Feb 20, 2018 | |

ಮುದವಾದ ಸಂಚು ರೂಪಿಸಿ ಮತ್ತೆ ಮತ್ತೆ ನನ್ನ ಸೋಲಿಸು, ಸೋಲುವುದೇ ಚಾಳಿಯಾಗಲಿ. ನಿನ್ನ ಮೈ ಹೊಳಪು ಬೆಳದಿಂಗಳೊಂದಿಗೆ ಸ್ಪರ್ಧೆಗಿಳಿಯಲಿ, ಲಂಚ ಕೊಟ್ಟಾದರೂ ನಿನ್ನ ಗೆಲ್ಲಿಸುವೆ. ನೀ ಉಡುವ ಸೀರೆಯಲ್ಲಿ ನನ್ನ ಕನಸು ಅಡಗಲಿ, ಸೆರಗಿನೊಳಗೆ ಭಾವವೊಂದು ಕದ್ದುಮುಚ್ಚಿ ಸೇರಲಿ, ಕಾಣದಂಥಾ ಮಾಯೆಯೊಂದು ಬಿಡದೇ ಕಾಡಲಿ. 

Advertisement

ಜೀವದಾಳದಲ್ಲೆದ್ದ ಅಲೆಯೊಂದು ಒಂದೇ ಸಮನೆ ಭೋರ್ಗರೆಯುತ್ತಿದೆ. ತುರ್ತಾಗಿ ತೀರದಲ್ಲೊಮ್ಮೆ ಸುಳಿದಾಡು, ಹೆಜ್ಜೆಗಳಚ್ಚಿಗೆ ಮುತ್ತಿಕ್ಕಿ ತಣ್ಣಗಾಗಲಿ ಉನ್ಮಾದ. ಬಯಕೆಗಳ ಬತ್ತಳಿಕೆ ಹೊತ್ತು ಕೂತಿರುವ ನಿನ್ನ ಹುಡುಗನ ಉಸಿರಲ್ಲಿ ಬೆರೆತಿರುವುದು ಬರೀ ಇಂತಹುದೇ ಗುಟ್ಟುಗಳು, ಅವುಗಳಲ್ಲೊಂದು ಪಾಲನ್ನು ಬಿಟ್ಟುಕೊಡುವೆ, ಹಿಡಿದಿಟ್ಟುಕೋ.

ಜೀವನ ಪೂರಾ ಭ್ರಾಂತಿಯಲ್ಲಿದೆ, ಪ್ರೀತಿಯಲ್ಲಿ ಬರೀ ಸಿಹಿಯನ್ನೇ ಸವಿದು ಮಧುಮೇಹಿಯಾಗುವ ಮುನ್ನ ಎಚ್ಚೆತ್ತು ಕೊಳ್ಳಬೇಕಿದೆ, ಒಂಚೂರು ಪಥ್ಯ ಕಲಿಸು. ಬದುಕೆಂಬ ಭೂರಿಭೋಜನಕ್ಕೆ ಕೊಂಚ ಮಸಾಲೆ ಬೀಳಲಿ, ಒಗ್ಗರಣೆಯಲ್ಲೊಂದಷ್ಟು ಸಿಡುಕು, ಕೋಪ, ಗುದ್ದಾಟ, ಮುದ್ದಾಟ, ತಮಾಷೆಯಿರಲಿ. ಹದವಾಗಿ ಬೆರೆತ ಪ್ರೀತಿಯ ತುತ್ತು ಹೊಟ್ಟೆ ತುಂಬಿಸಲಿ, ಸಂಕಷ್ಟ ಚತುರ್ಥಿಯಂತೆ ಆಗಾಗ ಉಪವಾಸಕ್ಕೊಂದು ನೆಪ ಸಿಗಲಿ.

ನಿನ್ನ ಕೆಂದುಟಿಯ ಮೇಲೆ ಬೆರಳಿಟ್ಟು, ಕಣ್ಣಲ್ಲಿ ಕಣ್ಣಿಟ್ಟು ಪಿಸುಗುಡುವ ನಡುವೆ ಅರಿವಿಲ್ಲದಂತೆ ಮುದ್ದಾಗಿ ತುಟಿಯೊತ್ತಿಬಿಡು, ಸುಖಾಸುಮ್ಮನೆ ಹಠ ಹಿಡಿದು ಗೋಳಾಡಿಸು, ನನ್ನ ಹುಸಿಮುನಿಸಿಗೊಂದು ನಯವಾದ ಕಾರಣವಿರಲಿ. ಬಯಸಿ ಬಂದಾಗೊಮ್ಮೆ ದೂರ ತಳ್ಳು, ವಿರಹದ ತಾಪ ಒಂಚೂರು ಸುಡಲಿ. ಚುಂಬಿಸುವ ನೆಪದಲ್ಲಿ ಗಲ್ಲ ಕಚ್ಚುವುದನ್ನು ಮಾತ್ರ ಮರೆಯದಿರು, ನಿನ್ನ ದಾಳಿಂಬೆಯಂಥಾ ಹಲ್ಲುಗಳ ಸಿಹಿ ನನ್ನ ಒರಟು ಕೆನ್ನೆಗೂ ಸೋಕಲಿ.

ನನ್ನಷ್ಟೂ ಹಗಲುಗಳಿಗೆ ನೀನೇ ಇಬ್ಬನಿ ಆಗಬೇಕು, ಎಲ್ಲಾ ರಾತ್ರಿಗಳಿಗೂ ನಿನ್ನ ಮಾತೇ ಲಾಲಿಯಾಗಬೇಕು. ಮುದವಾದ ಸಂಚು ರೂಪಿಸಿ ಮತ್ತೆ ಮತ್ತೆ ನನ್ನ ಸೋಲಿಸು, ಸೋಲುವುದೇ ಚಾಳಿಯಾಗಲಿ. ನಿನ್ನ ಮೈ ಹೊಳಪು ಬೆಳದಿಂಗಳೊಂದಿಗೆ ಸ್ಪರ್ಧೆಗಿಳಿಯಲಿ, ಲಂಚ ಕೊಟ್ಟಾದರೂ ನಿನ್ನ ಗೆಲ್ಲಿಸುವೆ. ನೀ ಉಡುವ ಸೀರೆಯಲ್ಲಿ ನನ್ನ ಕನಸು ಅಡಗಲಿ, ಸೆರಗಿನೊಳಗೆ ಭಾವವೊಂದು ಕದ್ದುಮುಚ್ಚಿ ಸೇರಲಿ,

Advertisement

ಕಾಣದಂಥಾ ಮಾಯೆಯೊಂದು ಬಿಡದೇ ಕಾಡಲಿ. ನಿನ್ನ ತುಂಬುಗೆನ್ನೆಗೆ ಕಂದಾಯ ಕಟ್ಟುವೆ, ರಶೀದಿಯ ಕೊಡದೆ ಪದೇ ಪದೆ ವಸೂಲಿಗಿಳಿದು ಲೂಟಿ ಮಾಡು, ದಿವಾಳಿಯಾದರೂ ಸೈ, ದೂರು ನೀಡದೇ ಸಹಿಸಿಕೊಳ್ಳುವೆ. ಮುದ್ದಾಗಿ ಮೂತಿ ಮುರಿಯುವ ಕಲೆಯನ್ನು ನನಗೂ ಕಲಿಸು, ಸೋಲುವುದಕ್ಕೆ ಮತ್ತೂಂದು ಕಾರಣ ಸಿಕ್ಕಂತಾಗುತ್ತದೆ.

ಬೆಳದಿಂಗಳ ಇರುಳು ಮಗ್ಗುಲು ಬದಲಿಸುವಾಗ, ಕಡಲ ತಡಿಯಲ್ಲಿ ಕೂತು ಮಹಾಪರ್ವಕ್ಕೆ ಸಾಕ್ಷಿಯಾಗೋಣ, ಚಂದಿರನೂ ನಾಚುವಂತೆ ಅವ್ಯಾಹತವಾಗಿ ಪ್ರೀತಿಸುವೆ. ವೃದ್ಧಾಪ್ಯ ಆವರಿಸಿದಾಗ ಮತ್ತದೇ ಕಡಲ ಮುಂದೆ ಕೂತು ಗುಬ್ಬಿಗೂಡು ಕಟ್ಟೋಣ, ಸಾಕೆನಿಸಿದಾಗ ಇಂತಹ ಬಾಲಿಶ ಗುಟ್ಟುಗಳನ್ನೆಲ್ಲಾ ಮರಳಡಿಯಲ್ಲಿ ಹೂತು ಹೊರಟುಬಿಡೋಣ. ಅಲ್ಲಿಯ ತನಕ ಈ ಹುಡುಗನನ್ನು ಸಂಭಾಳಿಸುವ ಜವಾಬ್ದಾರಿ ನಿನ್ನದು. ಜೋಪಾನ.

ಇಂತಿ
 ಭ್ರಾಂತಿಗೊಳಗಾದವ

 – ಸ್ಕಂದ ಆಗುಂಬೆ

Advertisement

Udayavani is now on Telegram. Click here to join our channel and stay updated with the latest news.

Next