ಕರಾಚಿ: ಪಾಕಿಸ್ತಾನದಲ್ಲಿ ಕೋಳಿ ಮಾಂಸ ಮತ್ತು ಗೋಧಿಯ ಬೆಲೆ ವಿಪರೀತ ಏರಿರುವುದರಿಂದ ಜನ ಕಂಗಾಲಾಗಿದ್ದಾರೆ. ಇದರ ಮಧ್ಯೆ ಇನ್ನೊಂದು ಆಘಾತಕಾರಿ ಸುದ್ದಿ ಬಂದಪ್ಪಳಿಸಿದೆ. ಒಂದು ಕೆಜಿ ಬ್ರಾಂಡೆಡ್ ಟೀಪುಡಿ ಬೆಲೆ 1,600 ರೂ.ಗೇರಿದೆ.
ಕಳೆದ 15 ದಿನಗಳ ಹಿಂದೆ ಈ ಬೆಲೆ 1,100 ರೂ.ಗಳಿತ್ತು. ಇದರ ಮಧ್ಯೆ ಕಳೆದ ಡಿಸೆಂಬರ್ ಕೊನೆಗೆ ಪಾಕ್ ಬಂದರಿಗೆ ಬಂದು ತಲುಪಿರುವ ಟೀಪುಡಿಯ 250 ಕಂಟೈನರ್‌ಗಳು ಇನ್ನೂ ಕೆಳಕ್ಕಿಳಿದಿಲ್ಲ. ಅದನ್ನು ಇಳಿಸಿಕೊಳ್ಳಲು ಬೇಕಾದ ಹಣವೇ ಇಲ್ಲ.
ಪಾಕಿಸ್ತಾನದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಫ್ಪಿಸಿಸಿಐ) ಟೀ ವಿಭಾಗದ ಸ್ಥಾಯೀ ಸಮಿತಿ ಕಾರ್ಯದರ್ಶಿ ಝೀಶನ್ ಮಖೂÕದ್ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ವಿದೇಶಿ ವಿನಿಮಯದ ಪ್ರಮಾಣ ಕಡಿಮೆಯಿರುವುದರಿಂದ ಆಮದು ಮಾಡಿಕೊಳ್ಳುವುದು ಅಸಾಧ್ಯವೆನ್ನುವ ಸ್ಥಿತಿ. ಇದರಿಂದ ಮಾರ್ಚ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ನಿರ್ದೇಶನದ ಪ್ರಕಾರ, ಆಮದು ವಸ್ತುಗಳನ್ನು 180 ದಿನಗಳ ಮುಂದೂಡಲ್ಪಟ್ಟ ಗುತ್ತಿಗೆಯಡಿ ಅಥವಾ 180 ದಿನಗಳ ಅವಧಿಗೆ ಸಾಲದಲ್ಲಿ ಕೊಳ್ಳಲು ಸೂಚಿಸಿದೆ. 180 ದಿನಗಳು ಕಳೆದ ನಂತರ ಡಾಲರ್ ಮೌಲ್ಯ ಎಲ್ಲಿಗೆ ಏರಿರುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಆ ನಿರ್ಧಾರ ಮಾಡಲು ಯಾವ ಆಮದುದಾರರೂ ಸಿದ್ಧವಿಲ್ಲ ಎಂದು ಝೀಶನ್ ತಿಳಿಸಿದ್ದಾರೆ.
“ಮನಮೋಹನ್‌ರನ್ನು ನೇಮಿಸಿದ ಭಾರತವನ್ನು ನೋಡಿ ಕಲಿಯಿರಿ’
1990ರ ಹೊತ್ತಿನಲ್ಲಿ ಭಾರತದಲ್ಲೂ ಇಂತಹದ್ದೇ ಸನ್ನಿವೇಶವಿದ್ದಾಗ ಆ ದೇಶ ಮನಮೋಹನ್ ಸಿಂಗ್‌ರಂತಹ ಖ್ಯಾತ ಅರ್ಥಶಾಸ್ತ್ರಜ್ಞರನ್ನು ವಿತ್ತಸಚಿವರನ್ನಾಗಿ ನೇಮಿಸಿತ್ತು. ಅವರು ಆರ್ಥಿಕ ಹಿಂಜರಿತದಿಂದ ಭಾರತವನ್ನು ಕಾಪಾಡಿದರು. ಅದನ್ನು ನೋಡಿ ಪಾಕಿಸ್ತಾನ ಕಲಿಯಬೇಕು. ಸೂಕ್ತ ಸ್ಥಾನಕ್ಕೆ ಯೋಗ್ಯರನ್ನು ನೇಮಕ ಮಾಡಬೇಕು ಎಂದು ಪ್ರಿನ್ಸ್‌ಟನ್ ವಿವಿಯ ಅರ್ಥಶಾಸ್ತ್ರಜ್ಞ, ಪ್ರೊ.ಆತಿಫ್ ಮಿಯಾನ್ ತಿಳಿಸಿದ್ದಾರೆ.