Advertisement

ಫಸಲಿನ ಹೊತ್ತಲ್ಲೇ ಗೇರು ಕೃಷಿಗೆ ಚಹಾ ಸೊಳ್ಳೆ  ಕಾಟ!

01:06 PM Jan 24, 2018 | |

ಸುಳ್ಯ: ಅಡಿಕೆ ಧಾರಣೆ ಕೈ ಕೊಡುವ ಕಾಲದಲ್ಲಿ ಕೃಷಿಕರ ಪಾಲಿಗೆ ಆಸರೆಯಾಗಿ ನಿಲ್ಲುವ ಗೇರು ಕೃಷಿಗೆ ಈಗ ಫಸಲು ಬರುವ ಹೊತ್ತಿನಲ್ಲೇ ಚಹಾ ಸೊಳ್ಳೆಯ ಕಾಟ ಉಂಟಾಗಿದೆ! ಗೇರು ಮರಗಳು ನವೆಂಬರ್‌ನಿಂದ ಎಪ್ರಿಲ್‌ ತನಕ ಹೂ ಬಿಟ್ಟು ಫಸಲು ಕೊಡುವುದು ಹೆಚ್ಚು. ಡಿಸೆಂಬರ್‌, ಜನವರಿ ತಿಂಗಳಲ್ಲಿ ಹೂ ಬಿಟ್ಟು ಫಸಲಿಗೆ ಅಣಿಯಾಗಬೇಕಿದ್ದ ಮರಗಳಲ್ಲಿ ಚಿಗುರು, ಹೂಗಳು ಕರಟಿ ಹೋಗಿವೆ. ಗ್ರಾಮಾಂತರ ಪ್ರದೇಶದ ಗೇರು ತೋಟಗಳಲ್ಲಿ ಚಹಾ ಸೊಳ್ಳೆಗಳ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಂಡುಬಂದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಬೆಳೆಗಾರರಲ್ಲಿ ನಿರಾಶೆ ಮೂಡಿಸಿದೆ.

Advertisement

ಹೂ ಬಿಟ್ಟಿಲ್ಲ
ಗ್ರಾಮಾಂತರ ಪ್ರದೇಶಗಳಲ್ಲಿ ಗೇರು ಕೃಷಿಯನ್ನು ವೈಜ್ಞಾನಿಕವಾಗಿ ಅಥವಾ ಹೊಸ ತಳಿಗಳನ್ನು ನೆಟ್ಟು ನಡೆಸುವ ಪ್ರಕ್ರಿಯೆ ಪ್ರಾರಂಭವಾದುದು ಕೆಲವೇ ವರ್ಷಗಳ ಹಿಂದೆ. ಬಹುತೇಕ ಕಡೆ ಹಳೆಯ ಮರಗಳೇ ಇವೆ. ಆದರೆ ಚಹಾ ಸೊಳ್ಳೆ ಕಾಟ ಹಳೆಯ ಮರಗಳನ್ನೂ ಹೊಸ ಗಿಡಗಳನ್ನೂ ಸಮಾನವಾಗಿ ಬಾಧಿಸುತ್ತಿದೆ. ಈ ಅವಧಿಯಲ್ಲಿ ಮರವಿಡೀ ಹೂ ಬಿಟ್ಟಿರುತ್ತಿದ್ದ ಗೇರು ತೋಟಗಳಲ್ಲಿ ಈಗ ಅಲ್ಲಲ್ಲಿ ಅಪರೂಪಕ್ಕೆ ಎಂಬಂತೆ ಹೂಗಳಿವೆ.

ಕೆಲವು ಮರಗಳು ಚಿಗುರಿ ಹಸಿರು ಬಣ್ಣಕ್ಕೆ ತಿರುಗಿವೆ. ಗೇರು ತೋಟದ ಶೇ.75ರಷ್ಟು ಭಾಗ ಹೂ ಬಾರದೆ ಮಳೆಗಾಲದಲ್ಲಿ ಕಾಣಸಿಗುವಂತೆ ಹಸಿರಾಗಿದೆ. ಹೂ ಬಿಟ್ಟ ಕೆಲವೇ ಮರಗಳಿಗೆ ಚಹಾ ಸೊಳ್ಳೆ, ಇನ್ನಿತರ ಕ್ರಿಮಿ ಕೀಟಗಳ ಬಾಧೆ. ರೋಗಬಾಧೆ ಗೇರು ನಿಗಮದ, ಎನ್‌ಆರ್‌ಸಿಸಿ ಗೇರು ತೋಟದಲ್ಲಿಯೂ ಕಂಡುಬಂದಿದೆ.

ಫಸಲು ಕಡಿಮೆ
ಜಿಲ್ಲೆಯಲ್ಲಿ ಅಂದಾಜು 40 ಸಾವಿರ ಹೆಕ್ಟೇರ್‌ ಗೇರು ತೋಟವಿದೆ. ಈಗ ಗೇರುಬೀಜಕ್ಕೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 160 ರೂ. ಧಾರಣೆ ಇದೆ. ಫಸಲು ಇದೇ ತೆರನಾಗಿ ಕುಸಿತ ಕಂಡರೆ, ಗೇರು ಧಾರಣೆ ಗಗನಕ್ಕೇರುವುದು ನಿಶ್ಚಿತ. ಆದರೆ ಚಳಿಗಾಲ ಕಳೆದು ಸೆಕೆೆ ಆವರಿಸಿದರೆ ಸಮಸ್ಯೆ ಹತೋಟಿಗೆ ಬಂದು ಫಸಲು ಸಿಗಬಹುದು ಎಂಬ ನಿರೀಕ್ಷೆ ಕೆಲವು ಬೆಳೆಗಾರರದ್ದು. ವಾತಾವರಣದಲ್ಲಿನ ಕ್ಷಿಪ್ರ ಬದಲಾವಣೆ, ತೀವ್ರ ಚಳಿ, ಮೋಡ ಈ ಕೀಟ ಬಾಧೆಗೆ ಮುಖ್ಯ ಕಾರಣ ಅನ್ನುತ್ತಾರೆ ಗೇರು ಕೃಷಿಕರು. ಹೂ ಬಿಡುವ ಮೊದಲೇ ಸರಕಾರಿ ಗೇರು ತೋಟಗಳ ಏಲಂ ನಡೆಯುತ್ತದೆ. ಉತ್ತಮ ಫಸಲು ಸಿಗಬಹುದೆಂದು ಗುತ್ತಿಗೆ ಪಡಕೊಂಡವರಿಗೆ ನಷ್ಟದ ಭೀತಿ ಎದುರಾಗಿದೆ.

ಏನಿದು ಚಹಾ ಸೊಳ್ಳೆ?
ಚಹಾ ಸೊಳ್ಳೆ ಕೊಕೊ, ಗೇರು, ಹತ್ತಿ, ಚಹಾ- ಹೀಗೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟು ಮಾಡುವ ಕೀಟ. ಇದು ಗೇರು ಚಿಗುರು ಅಥವಾ ಹೂವಿನ ಸಸ್ಯರಸವನ್ನು ಹೀರುತ್ತದೆ. ಇದರಿಂದ ಚಿಗುರು ಮತ್ತು ಹೂಗೊಂಚಲುಗಳು ಒಣಗುತ್ತವೆ. ಕೀಟವು ರಸ ಹೀರಿದ ಅಂಗಾಂಶ ನಾಶವಾಗಿ ಕಂದು ಬಣ್ಣದ ಚುಕ್ಕಿಗಳು ಉಂಟಾಗುತ್ತವೆ. ಕಾಯಿ ಕಟ್ಟುವ ಹಂತದಲ್ಲಿ ಈ ಕೀಟದ ಹಾವಳಿ ಕಂಡುಬಂದರೆ, ಗೇರು ಹಣ್ಣಾಗುವ ಮೊದಲೇ ಒದುರುತ್ತದೆ.

Advertisement

ಗೇರು ಸಂಶೋಧನ ಕೇಂದ್ರದ ವಿಜ್ಞಾನಿಗಳ ಪ್ರಕಾರ ಇದೊಂದು ಮಾರಕ ಕಾಯಿಲೆ ಅಲ್ಲ, ಔಷಧ ಸಿಂಪಡಿಸಿದರೆ ಕೀಟ ಬಾಧೆ ನಿವಾರಣೆಯಾಗುತ್ತದೆ. ಆದರೆ ಕಳೆದ ವರ್ಷದ ಇಳುವರಿ ಪರಿಗಣಿಸಿ ಬೆಳೆಗಾರರು ಹೇಳುವ ಪ್ರಕಾರ, ಈ ಬಾರಿ ಔಷಧ ಸಿಂಪಡಿಸಿದರೂ ಕೀಟ ಬಾಧೆ ಪರಿಹಾರ ಕಂಡಿಲ್ಲ. ಗೇರು ತೋಟ ಲೀಸ್‌ಗೆ ಪಡೆದುಕೊಂಡವರ ಅಭಿಪ್ರಾಯದಂತೆ, ಎಕರೆಗಟ್ಟಲೆ ಗೇರು ತೋಟಕ್ಕೆ ಔಷಧ ಸಿಂಪಡಿಸುವುದು ಸಾಧ್ಯವಿಲ್ಲದ ಮಾತು. ಏಲಂ ಮಾಡುವ ಮೊದಲೇ ಮರಗಳು, ಫ‌ಸಲಿನ ಗುಣಮಟ್ಟ ಖಾತರಿ ಪಡಿಸಬೇಕಾದದ್ದು ಗೇರು ನಿಗಮದ ಜವಾಬ್ದಾರಿ, ಈಗ ತಮಗೆ ನಷ್ಟ ತಪ್ಪಿದ್ದಲ್ಲ ಅನ್ನುವ ಅಳಲು ಲೀಸ್‌ಗೆ ಪಡೆದುಕೊಂಡವ ರದ್ದು.

ರಕ್ಷಣೆ ಹೇಗೆ?
ಕೀಟ ಬಾಧೆ ಗಮನಿಸಿ ಔಷಧ ಸಿಂಪಡಿಸಬೇಕು ಅನ್ನುವುದು ಸರಳ ಸೂತ್ರ. ಹೂಗೊಂಚಲು ಬರುವ ವೇಳೆ, ಕಾಯಿ ಕಟ್ಟುವ ಅವಧಿಯಲ್ಲಿ ಔಷಧ ಸಿಂಪಡಿಸಿದರೆ ಚಹಾ ಸೊಳ್ಳೆಯ ಕಾಟವನ್ನು ದೂರ ಇರಿಸಬಹುದು. ಆರಂಭದಲ್ಲಿ ಒಮ್ಮೆ ಸಿಂಪಡಿಸಿ, ಅನಂತರ 30 ದಿನ ಬಿಟ್ಟು ಬಾಧೆಯ ಲಕ್ಷಣ ಗಮನಿಸಿ ಮತ್ತೂಮ್ಮೆ ಸಿಂಪಡಿಸಬೇಕು. ಕೀಟ ಬಾಧೆ ನಿವಾರಣೆಗೆ ಸೂಕ್ತ ಔಷಧಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ರೋಗ ಅಲ್ಲ
ಮೋಡ ಕಾಣಿಸಿಕೊಂಡ ಸಮಯದಲ್ಲಿ ಹೂ ಕರಟುತ್ತದೆ ಅನ್ನುತ್ತಾರೆ. ಆದರೆ ಅದು ಮೋಡದಿಂದ ಉಂಟಾಗುವ ಸಮಸ್ಯೆ ಅಲ್ಲ. ಕೀಟ ಬಾಧೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಮೋಡ ಬಂದಾಗ ಕೀಟಗಳ ಹಾವಳಿ ಜಾಸ್ತಿ ಇರುತ್ತದೆ. ಅಂದರೆ ಇದು ರೋಗ ಅಲ್ಲ, ಕೀಟಬಾಧೆ. ಹೂ ಕರಟಿ, ಫಸಲಿಗೆ ತೊಂದರೆ ಆಗುವುದು ಇದೆ. ಚಹಾ ಸೊಳ್ಳೆ ಬಾಧೆ ನಿವಾರಣೆಗೆ ಮಾರುಕಟ್ಟೆಯಲ್ಲಿ ಸೂಕ್ತ ಔಷಧಗಳಿವೆ.
ಗಂಗಾಧರ ನಾಯಕ್‌ ಪ್ರಭಾರ ನಿರ್ದೇಶಕ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು

ಹತೋಟಿಗೆ ಬರಬಹುದು
ಚಹಾ ಸೊಳ್ಳೆ ಕಾಟ ಜಾಸ್ತಿಯಾಗಿದೆ. ವಾತಾವರಣದಲ್ಲಿನ ಏರಿಳಿತವೂ ರೋಗಬಾಧೆ ಹೆಚ್ಚಳಕ್ಕೆ ಕಾರಣವಾಗಿದೆ. ಗೇರು ಮರ ಬಲಿತಂತೆ ಸೊಳ್ಳೆ ಕಾಟ ಕಡಿಮೆ ಆಗುತ್ತದೆ. ಮೊನೋಕ್ರೋಟೋಪಾಸ್‌ ಔಷಧ ಸಿಂಪಡಣೆಯಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಕೆಲವರು ಕಟಾರ ಔಷಧ ಬಳಕೆಗೆ ಮುಂದಾಗಿದ್ದಾರೆ. ಸೆಕೆಗಾಲ ಬಂದರೆ ರೋಗ ಹತೋಟಿಗೆ ಬರಲಿದೆ. ಆಗ ಸೂಕ್ತ ಔಷಧ ಬಳಕೆ ಮಾಡಿದರೆ, ಇಳುವರಿಗೆ ಕೊರತೆ ಬಾರದು.
ಸುಭಾಷ್‌ ರೈ ಕಡಮಜಲು ಗೇರು ಕೃಷಿಕ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next