ಮುಂಬಯಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ನಡೆದಿರುವ ತೆರಿಗೆ ಮರುಪಾವತಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ 69.65 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ತೆರಿಗೆ ಸಹಾಯಕರಾಗಿದ್ದ ತಾನಾಜಿ ಮಂಡಲ್ ಅಧಿಕಾರಿ ಹಾಗೂ ಅವರ ಸಹಚರರು ತೆರಿಗೆ ಇಲಾಖೆಯಿಂದ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಅನಧಿಕೃತ ರೀತಿಯಲ್ಲಿ 263 ಕೋಟಿ ರೂ. ಮೌಲ್ಯದ ತೆರಿಗೆ ಮರುಪಾವತಿ ಮೊತ್ತವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನುವ ಆರೋಪವಿದೆ.
ಈ ಹಿನ್ನೆಲೆ ತಾನಾಜಿ, ಭೂಷಣ್, ಅನಂತ್ ಪಾಟೀಲ್, ರಾಜೇಶ್ ಶೆಟ್ಟಿ, ಸಾರಿಕಾ ಶೆಟ್ಟಿ, ಕೀರ್ತಿ ವರ್ಮಾ ವಿರುದ್ಧ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ದಾಖಲಿಸಲಾಗಿದೆ. ಲೋನಾವಾಲಾ, ಖಂಡಾಲಾ, ಕರ್ಜತ್ ಹಾಗೂ ಪುಣೆ ಮತ್ತು ಕರ್ನಾಟಕದ ಉಡುಪಿಯಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಭೂಮಿಯನ್ನು ಮತ್ತು ಬಿಎಂಡಬ್ಲ್ಯು, ಮರ್ಸಿಡೀಸ್, ಆಡಿ ಸಹಿತ ಕಾರುಗಳನ್ನೂ ಕೂಡ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.