ಬೆಂಗಳೂರು:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಜೀವಂತ ಸುಡುವ ಸಮಯ ಬಂದಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ನಾಯಕರುಗಳು ಮೋದಿಯವರ ಜನಪ್ರಿಯತೆ ಸಹಿಸದೆ ಬುದ್ದಿ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಟಿ.ಬಿ.ಜಯಚಂದ್ರ ಅವರು ತಾವು ನೀಡಿರುವ ಆಕ್ಷೇಪಾರ್ಹ ಹಾಗೂ ಕೀಳು ಮಟ್ಟದ ಹೇಳಿಕೆಗೆ ದೇಶದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಿಜೆಪಿ ಆವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಲ್ಲದೆ ಪ್ರಧಾನಿಯವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಟಿ.ಬಿ.ಜಯಚಂದ್ರ ಸ್ವತಃ ಕಾನೂನು ಪದವೀಧರ ಮತ್ತು ಕಾನೂನು ಮಂತ್ರಿಯಾಗಿದ್ದವರು. ಈ ರೀತಿ ಮಾತನಾಡಿದರೆ ಏನು ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅರಿವು ಇರಬೇಕಾಗಿತ್ತು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 16 ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಘೋಷಿಸಿದ್ರೂ ರೈತರಿಂದ ಧಾನ್ಯ ಖರೀದಿ ಮಾಡದೆ ರೈತರನ್ನು ರಾಜ್ಯ ಸರ್ಕಾರ ಸಂಕಷ್ಟಕ್ಕೆ ದೂಡಿದೆ. ಇದರ ಬಗ್ಗೆ ಮಾತನಾಡದೆ ಮೋದಿಯವರ ಆರ್ಥಿಕ ನೀತಿ ಟೀಕಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.