ರಾಯಚೂರು: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ವಿಚಾರವಾಗಿ ಚರ್ಚಿಸಲು ನ.15 ಅಥವಾ 18ರಂದು ಐಸಿಸಿ ಸಭೆ ಕರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಯಶದಿಂದ ನೀರು ಹರಿಸುವ ಸಂಬಂಧ
ಜಲಸಂಪನ್ಮೂಲ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ ಅವರನ್ನು ಸಂಪರ್ಕಿಸಿ ಸಭೆ ಆಯೋಜಿಸಲಾಗುವುದು. ಐಸಿಸಿ ಸಭೆ ನಡೆಸಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿ ಮುಂದಿನ ನಿರ್ಧಾರಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ನೀರಾವರಿ ಪತ್ತೆಗಾಗಿ ನಡೆಸಿದ ಗೂಗಲ್ ಸರ್ವೆ ಈಗಾಗಲೇ ಮುಗಿದಿದೆ. ಆದರೆ, ಈಗಲೇ ಕ್ರಮಕ್ಕೆ ಮುಂದಾದರೆ ರೈತರ ಬೆಳೆ ಹಾನಿಯಾಗಿ ನಷ್ಟವಾಗಲಿದೆ. ಐಸಿಸಿ ಸಭೆಯಲ್ಲಿ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು. ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ 15 ಟಿಎಂಸಿ ಅಡಿ ನೀರು ಅಕ್ರಮವಾಗಿ ಪಡೆಯಲಾಗುತ್ತದೆ ಎಂಬ ಆರೋಪ ಸತ್ಯಕ್ಕೆ ದೂರ. ನೀರು ಕಳ್ಳತನವಾಗಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲದೇ ಆರೋಪ ಮಾಡುವುದು ಸರಿಯಲ್ಲ. ನಮ್ಮ ಪಕ್ಷದವರಾಗಿರಲಿ ಅಥವಾ ಮಾಜಿ, ಹಾಲಿ ಶಾಸಕರಾಗಲಿ ದಾಖಲೆ ಸಹಿತ ಆರೋಪ ಮಾಡಲಿ ಎಂದು ಹೇಳಿದರು.
ಜಿಲ್ಲಾದ್ಯಂತ ಅಕ್ರಮ ಮರಳು ಸಾಗಣೆ ಸಂಪೂರ್ಣ ನಿಯಂತ್ರಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಸೂಚಿಸಲಾಗಿದೆ. ಅಲ್ಲದೇ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಹಾಕಲು ಕ್ರಮಕ್ಕೆ ಸೂಚಿಸಿದ್ದೇನೆ. ಅಷ್ಟು ಮಾತ್ರವಲ್ಲ ದೀಪವಾಳಿ ವೇಳೆ ಗ್ಯಾಂಬ್ಲಿಂಗ್ ನಡೆಯದಂತೆಯೂ ಕ್ರಮಕ್ಕೆ ಸೂಚಿಸಲಾಗಿತ್ತು.
ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲು ಕೊರತೆ ಇರುವುದರಿಂದ ಸಿಎಂ ಕುಮಾರಸ್ವಾಮಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕಲ್ಲಿದ್ದಲು ಸಮರ್ಪಕವಾಗಿ ಪೂರೈಸಲು ಒತ್ತಡ ಹೇರಿದ್ದಾರೆ. ವಿದ್ಯುತ್ ಉತ್ಪಾದನೆ ಕಡಿಮೆ ಇದ್ದರೂ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಮೇವು ಕೊರತೆ ಸದ್ಯಕ್ಕೆ ಆಗುತ್ತಿಲ್ಲ. ಮೇವಿನ ಬಂಡಲ್ ಮಾಡುವ ಯಂತ್ರಗಳು ನಮ್ಮಲ್ಲಿ ಲಭ್ಯವಿದ್ದು, ರಾಜ್ಯದಲ್ಲಿ ಅಗತ್ಯ ಇರುವ ಕಡೆ ಪೂರೈಸಲಾಗುವುದು ಎಂದರು.
ಸಿಂಧನೂರಿನಲ್ಲಿ ಪಶುಸಂಗೋಪನಾ ಕಾಲೇಜು ಆರಂಭಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಯಚೂರು ವಿವಿ ಕಾರ್ಯ ಆರಂಭಿಸುವ ಕುರಿತು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲಾಗುವುದು.
ವೆಂಕಟರಾವ್ ನಾಡಗೌಡ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು