Advertisement

ಮೆಟ್ರೋ ಆ್ಯಪ್‌ನಲ್ಲೇ ಶೀಘ್ರ ಟ್ಯಾಕ್ಸಿ,ಆಟೋ ಸೇವೆ

02:29 PM Nov 22, 2022 | Team Udayavani |

ಬೆಂಗಳೂರು: “ಒಂದು ರಾಷ್ಟ್ರ ಒಂದು ಕಾರ್ಡ್‌’ ಮಾದರಿಯಲ್ಲೇ ಇನ್ನು ಮುಂದೆ “ನಮ್ಮ ಮೆಟ್ರೋ’ ಡಿಜಿಟಲ್‌ ಪ್ಲಾಟ್‌ಫಾರಂನಲ್ಲಿ ಆಟೋ, ಟ್ಯಾಕ್ಸಿ ಸೇವೆಗಳಿಗೂ ಟಿಕೆಟ್‌ ಸೌಲಭ್ಯ ದೊರೆಯಲಿದೆ.

Advertisement

ಪ್ರಸ್ತುತ ಚಾಟ್‌ಬಾಟ್‌ ಮತ್ತು “ನಮ್ಮ ಮೆಟ್ರೋ ಆ್ಯಪ್‌’ನಲ್ಲಿ ಟಿಕೆಟ್‌ ಬುಕಿಂಗ್‌ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.  ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ವೇದಿಕೆಗಳಲ್ಲಿ ಪ್ರಯಾಣಿಕರು ತಾವು ನಿರ್ಗಮಿಸುವ ನಿಲ್ದಾಣದಿಂದ ಕಚೇರಿ ಅಥವಾ ಮನೆಗಳಿಗೆ ಟ್ಯಾಕ್ಸಿ ಅಥವಾ ಆಟೋಗಳನ್ನೂ ಬುಕಿಂಗ್‌ ಮಾಡಿ ಈ ಸಂಬಂಧದ ಟಿಕೆಟ್‌ ಕಾಯ್ದಿರಿಸಬಹುದು. ಇದರೊಂದಿಗೆ ಲಾಸ್ಟ್‌ಮೈಲ್‌ ಕನೆಕ್ಟಿವಿಟಿಗೆ ಇರುವ ಅಡತಡೆಗಳ ನಿವಾರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಒಂದೆರಡು ಕಂಪನಿಗಳು ಆಸಕ್ತಿ ತೋರಿಸಿದ್ದು, ಚರ್ಚೆಗಳು ಪ್ರಾಥಮಿಕ ಹಂತದಲ್ಲಿವೆ. ಆ್ಯಪ್‌ ಆಧಾರಿತ ಸೇವೆ ನೀಡುವ ಅಗ್ರಿಗೇಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು, ಪ್ರಯಾಣಿಕರಿಗೆ ಈ ಅತ್ಯಾಧುನಿಕ ಸೇವೆ ಕಲ್ಪಿಸಬಹುದಾಗಿದೆ. ಸದ್ಯಕ್ಕೆ ಪ್ರಯಾಣಿಕರು ನಿಗದಿತ ನಿಲ್ದಾಣ ತಲುಪಿದ ನಂತರ ಓಲಾ, ಉಬರ್‌ ಮತ್ತಿತರ ಅಗ್ರಿಗೇಟರ್‌ಗಳ ಆ್ಯಪ್‌ ಮೂಲಕ ಬುಕಿಂಗ್‌ ಮಾಡುತ್ತಿದ್ದಾರೆ. ಆದರೆ, ಈಗ ನಮ್ಮ ಮೆಟ್ರೋ ಆ್ಯಪ್‌ನಲ್ಲೇ ಆ ಸೇವೆ ಪಡೆಯಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಯಾಣಿಕರಿಗೆ ಏನು ಅನುಕೂಲ?: “ಇದು ಒನ್‌ ನೇಷನ್‌ ಒನ್‌ ಕಾರ್ಡ್‌ನ ಮುಂದುವರಿದ ಭಾಗವಾಗಿದೆ. ಮೆಟ್ರೋ ಟಿಕೆಟ್‌ ಆ್ಯಪ್‌ನಲ್ಲೇ ಪ್ರಯಾಣಿಕರಿಗೆ ಟ್ಯಾಕ್ಸಿ ಅಥವಾ ಆಟೋ ಟಿಕೆಟ್‌ ಕೂಡ ದೊರೆಯಲಿದೆ. ಇದರಿಂದ ಸಮಯ ಉಳಿತಾಯದ ಜತೆಗೆ ಖಾತ್ರಿ ಮತ್ತು ಸುರಕ್ಷಿತ ಸೇವೆ ಸಿಗಲಿದೆ. ಉದಾಹರಣೆಗೆ ಎಂ.ಜಿ. ರಸ್ತೆಯಿಂದ ಪ್ರಯಾಣಿಕರೊಬ್ಬರು ಕೆಂಗೇರಿಗೆ ಬಂದಿಳಿದರೆ, ಅಲ್ಲಿಂದ ಮನೆ ಸೇರಲು ಆಟೋ ಅಥವಾ ಟ್ಯಾಕ್ಸಿ ಗಾಗಿ ಕಾಯಬೇಕಿಲ್ಲ. ರೈಲು ನಿಲ್ದಾಣ ತಲುಪು ವಷ್ಟರಲ್ಲಿ ಅದೇ ನಿಲ್ದಾಣದ ಕೆಳಗೆ ಟ್ಯಾಕ್ಸಿ ಪ್ರಯಾ ಣಿಕರಿಗಾಗಿ ಕಾಯುತ್ತಿರುತ್ತದೆ. ಈ ಸಂಬಂಧ ಕಂಪನಿಗಳ ಜತೆ ಮಾತುಕತೆ ನಡೆದಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಮಾಹಿತಿ ನೀಡಿದರು.

ಈ ಹಿಂದೆಯೂ ಕೆಲವು ನಿಲ್ದಾಣಗಳಲ್ಲಿ ಆ್ಯಪ್‌ ಆಧಾರಿತ ಸೇವೆಗಳ ಬುಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿ ಕರು ಅಲ್ಲಿಯೇ ಅಗ್ರಿಗೇಟರ್‌ ಕಂಪನಿಯ ಕೌಂಟ ರ್‌ನಲ್ಲಿ ಕ್ಯಾಬ್‌ ಬುಕಿಂಗ್‌ ಮಾಡಬಹು ದಿತ್ತು. ಇನ್ನು ಕೆಲವೆಡೆ ಯುಲು ಎಲೆಕ್ಟ್ರಿಕ್‌ ಬೈಕ್‌ಗಳು, ಬೌನ್ಸ್‌ ಬೈಕ್‌ಗಳ ನಿಲುಗಡೆಗೂ ಅವಕಾಶ ಕಲ್ಪಿಸಲಾ ಗಿತ್ತು. ಈ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಎಂ.ಜಿ. ರಸ್ತೆ, ಎಸ್‌.ವಿ. ರಸ್ತೆ, ಮಂತ್ರಿಸ್ಕ್ವೇರ್‌ ಸೇರಿದಂತೆ ಹಲ ವಾರು ನಿಲ್ದಾಣಗಳಿಂದ “ಫೀಡರ್‌ ಬಸ್‌’ಗಳನ್ನು ಕೂಡ ಪರಿಚಯಿಸಿದ್ದು, ಈಗಲೂ ಕಾರ್ಯಾಚರಣೆ ಮಾಡುತ್ತಿವೆ. ಇದೆಲ್ಲವೂ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಯಲ್ಲಿರುವ ತೊಂದರೆ ನಿವಾರಣೆ ಕಸರತ್ತು ಆಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂದು ಸ್ವತಃ ಅಧಿಕಾರಿಗಳು ತಿಳಿಸುತ್ತಾರೆ.

Advertisement

ಪ್ರತಿ ದಿನ 10 ಸಾವಿರ ವಾಟ್ಸ್‌ ಆ್ಯಪ್‌ ಟಿಕೆಟ್‌! : ಕರ್ನಾಟ ಕ ರಾಜ್ಯೋತ್ಸವದಂದು ಅಂದರೆ ನ.1ರಂದು ಪರಿಚಯಿಸಲಾದ ಚಾಟ್‌ಬಾಟ್‌ ಮೂಲಕ ನಿತ್ಯ ಸರಾಸರಿ 10 ಸಾವಿರ ಜನ ಟಿಕೆಟ್‌ ಖರೀದಿ ಮಾಡುತ್ತಿದ್ದಾರೆ. ಕೇವಲ 20 ದಿನಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ್ದು, ಹತ್ತು ಸಾವಿರಕ್ಕೂ ಅಧಿಕ ಜನ “ನಮ್ಮ ಮೆಟ್ರೋ’ದ ವಾಟ್ಸ್‌ಆ್ಯಪ್‌ ವೇದಿಕೆಯಲ್ಲಿ ಟಿಕೆಟ್‌ ಪಡೆಯುತ್ತಿದ್ದಾರೆ. ಇದ ರಿಂದ ಪ್ರಯಾಣಿಕರಿಗೆ ಕಾಯುವಿಕೆ ತಪ್ಪಿದೆ. ಜತೆಗೆ ಸ್ಮಾರ್ಟ್‌ಕಾರ್ಡ್‌ ಮಾದರಿಯಲ್ಲೇ ರಿಯಾಯ್ತಿಯೂ ದೊರೆಯುತ್ತಿದೆ. ಇದರ ಯಶಸ್ಸು ಮನಗಂಡು ಅದೇ ವೇದಿಕೆಯಲ್ಲಿ ಟ್ಯಾಕ್ಸಿ ಅಥವಾ ಆಟೋ ಟಿಕೆಟ್‌ ಪರಿಚಯಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಬಿಎಂಟಿಸಿಯೊಂದಿಗೆ ಕೈಜೋಡಿಸಲಿ: ಸಲಹೆ : ಖಾಸಗಿ ಅಗ್ರಿಗೇಟರ್‌ ಕಂಪನಿಗಳಿಗಿಂತ ಸರ್ಕಾರಿ ಸಂಸ್ಥೆಯೇ ಆಗಿರುವ ಬಿಎಂಟಿಸಿಯಿಂದ ಈ ಸೇವೆ ಪರಿಚಯಿಸಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಮತ್ತು ಬಿಎಂಆರ್‌ಸಿಗಳು ಮುಂದಾಗಬೇಕು ಎಂಬ ಒತ್ತಾಯ ಸಾರಿಗೆ ತಜ್ಞರಿಂದ ಕೇಳಿಬರುತ್ತಿದೆ. ಈ ಪ್ರಯೋಗದಿಂದ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವುದರ ಜತೆಗೆ ಬಿಎಂಟಿಸಿಗೂ ಆದಾಯ ಬರಲಿದೆ ಎಂದು ತಜ್ಞರು ಸಲಹೆ ಮಾಡಿದ್ದಾರೆ.

ಮೆಟ್ರೋ ಆ್ಯಪ್‌ ಜತೆ ಅಗ್ರಿಗ್ರೇಟರ್‌ ಆ್ಯಪ್‌: ಈ ಸೇವೆಗಾಗಿ ನಮ್ಮ ಮೆಟ್ರೋ ಆ್ಯಪ್‌ ಜತೆ ಅಗ್ರಿಗ್ರೇಟರ್‌ ಕಂಪನಿ ಆ್ಯಪ್‌ ಇಂಟಿಗ್ರೇಟ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ಸಿಟಿಲಿಟಿ ಮತ್ತು ಮೊಬಿಲಿಟಿ ಆ್ಯಸ್‌ ಎ ಸಲ್ಯುಷನ್‌ ಎಂಬ ಏಜೆನ್ಸಿಗಳು ಕೆಲಸ ಮಾಡುತ್ತಿವೆ. ಇದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಲಾಗುತ್ತದೆ. ನಂತರದಲ್ಲಿ ಮೆಟ್ರೋ ರೈಡ್‌ ನಂತಹ ಸಣ್ಣ ಅಗ್ರಿಗ್ರೇಟರ್‌ಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುವುದು ಎಂದು ಬಿಎಂಆರ್‌ ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ‘ಉದಯವಾಣಿ’ಗೆ ತಿಳಿಸಿದರು.

– ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next