Advertisement

ಗ್ರಾ.ಪಂ.ಗಳಿಗೆ ಪೂರೈಕೆಯಾಗದ ತೆರಿಗೆ ರಶೀದಿ ಪುಸ್ತಕ

10:44 PM Feb 17, 2020 | Sriram |

ಅಜೆಕಾರು: ಕಾರ್ಕಳ ತಾಲೂಕಿನ ಹೆಚ್ಚಿನ ಗ್ರಾಮ ಪಂಚಾಯತ್‌ಗಳಲ್ಲಿ ತೆರಿಗೆ ಸಂಗ್ರಹದ ರಶೀದಿ ಪುಸ್ತಕದ ಕೊರತೆಯಿಂದಾಗಿ ಗ್ರಾಮಸ್ಥರಿಂದ ತೆರಿಗೆ ಸಂಗ್ರಹಿಸುವುದು ಅಸಾಧ್ಯವಾಗಿದೆ.

Advertisement

ಆರ್ಥಿಕ ವರ್ಷ ಕೊನೆಗೊಳ್ಳಲು ಕೇವಲ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದ್ದು ಕೆಲ ಪಂಚಾಯತ್‌ಗಳಲ್ಲಿ ಶೇ.50ರಷ್ಟು ಸಹ ತೆರಿಗೆ ಸಂಗ್ರಹ ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತ್‌ಗಳು ತೆರಿಗೆ ಸಂಗ್ರಹದ ರಶೀದಿ ಪುಸ್ತಕಕ್ಕೆ ಹಣ ಪಾವತಿಸಿ, ಡಿಮಾಂಡ್‌ ಸಲ್ಲಿಸಿ ಹಲವು ತಿಂಗಳು ಕಳೆದರೂ ಯಾವುದೇ ಸ್ಪಂದನೆ ಈವರೆಗೆ ಇಲ್ಲವಾಗಿದೆ.

ತೆರಿಗೆ ಪಾವತಿ ಸಾಧ್ಯವಿಲ್ಲ
ಪಂಚಾಯತ್‌ ವ್ಯಾಪ್ತಿಯ ಗ್ರಾಮಸ್ಥರಿಂದ ಮನೆ ತೆರಿಗೆ, ನೀರಿನ ತೆರಿಗೆ ಹಾಗೂ ಇನ್ನಿತರ ತೆರಿಗೆ ಸಂಗ್ರಹಿಸಲಾಗುತ್ತಿದ್ದು, ಗ್ರಾಮಸ್ಥರು ತೆರಿಗೆ ಪಾವತಿಸಲು ಕಚೇರಿಗೆ ಬಂದಲ್ಲಿ ರಶೀದಿ ಕೊರತೆಯಿಂದ ತೆರಿಗೆ ಪಾವತಿ ಅಸಾಧ್ಯವಾಗಿದೆ.

ಪಂಚಾಯತ್‌ ಆದಾಯಕ್ಕೆ ಕುತ್ತು
ಆರ್ಥಿಕ ವರ್ಷದ ಅಂತ್ಯದೊಳಗೆ ಶೇ.100 ತೆರಿಗೆ ವಸೂಲಾತಿ ಆಗಬೇಕಾಗಿದೆಯಾದರೂ ರಶೀದಿ ಕೊರತೆ ಯಿಂದಾಗಿ ಶೇ.50ರಷ್ಟು ತೆರಿಗೆ ಸಂಗ್ರಹವಾಗಿದೆ. ಉಳಿದ ತೆರಿಗೆಯನ್ನು ಗ್ರಾಮ ಪಂಚಾಯತ್‌ ಸಿಬಂದಿ ಮನೆ ಮನೆಗೆ ತೆರಳಿ ಸಂಗ್ರಹಿಸಬೇಕಾಗಿದ್ದು ಇದಕ್ಕೆ ರಶೀದಿ ನೀಡ ಬೇಕಾಗಿರುವುದರಿಂದ ತೆರಿಗೆ ಸಂಗ್ರಹ ಅಸಾಧ್ಯವಾಗಿದೆ.

ವೇತನವೂ ಇಲ್ಲ
ಗ್ರಾ.ಪಂ.ಗಳ ಆದಾಯದ ಪ್ರಮುಖ ಮೂಲವೇ ತೆರಿಗೆ ಸಂಗ್ರಹವಾಗಿದೆ. ಈ ಬಾರಿ ತೆರಿಗೆ ಸಂಗ್ರಹಿಸಲು ಅಸಾಧ್ಯ ವಾಗಿರುವುದರಿಂದ ಕೆಲವು ಪಂಚಾಯತ್‌ಗಳ ಸಿಬಂದಿಗೆ ವೇತನ ಪಾವತಿ ಸಾಧ್ಯವಾಗಿಲ್ಲ.

Advertisement

ಮುದ್ರಣಾಲಯಕ್ಕೆ ಮನವಿ
ಬೆಂಗಳೂರಿನ ಸರಕಾರಿ ಕೇಂದ್ರ ಮುದ್ರಣಾಲಯಕ್ಕೆ ತೆರಿಗೆ ಸ್ವೀಕೃತಿ ರಶೀದಿ ಮುದ್ರಿಸಿ ಕೊಡುವಂತೆ 6 ತಿಂಗಳಿನಿಂದ ಗ್ರಾ.ಪಂ.ಗಳು ಮನವಿ ಮಾಡಿ ಪುಸ್ತಕಕ್ಕೆ ಕಟ್ಟಬೇಕಾದ ಹಣ ಪಾವತಿ ಮಾಡಿದರೂ ಪುಸ್ತಕ ಮಾತ್ರ ಬಂದಿಲ್ಲ.

ಹಣ ಪಾವತಿಯಾಗಿಲ್ಲ
ಕ್ರಿಯಾ ಯೋಜನೆಯ ಮೂಲಕ ಪಂಚಾಯತ್‌ ವ್ಯಾಪ್ತಿ ಯಲ್ಲಿ ವಿವಿಧ ಕಾಮಗಾರಿಗಳು ನಡೆದಿದ್ದು ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಣ ಪಾವತಿಸಲೂ ಸಹ ರಶೀದಿ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ. ಮಾರ್ಚ್‌ ಅಂತ್ಯದೊಳಗೆ ಹಣ ಪಾವತಿಸಬೇಕಾಗಿದ್ದು ಪಂಚಾಯತ್‌ ಆಡಳಿತ ಇಕ್ಕಟ್ಟಿಗೆ ಸಿಲುಕಿದೆ.

ಹೊಂದಾಣಿಕೆ
ತಾಲೂಕಿನಲ್ಲಿ ಕೆಲವು ಸಣ್ಣ ಪಂಚಾಯತ್‌ಗಳಿದ್ದು ಅಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಆ ಪಂಚಾಯತ್‌ಗಳಿಂದ ಸ್ವಲ್ಪ ಪ್ರಮಾಣದ ತೆರಿಗೆ ರಶೀದಿ ಪುಸ್ತಕವನ್ನು ಅತೀ ಅವಶ್ಯವಿರುವ ಗ್ರಾ. ಪಂ.ಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಹೊಂದಾಣಿಕೆ ಮಾಡಿ ಕೊಡುತ್ತಿದ್ದು ಇದು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ. ಈ ಪುಸ್ತಕಗಳು ಸಹ ಈ ವಾರದ ಒಳಗೆ ಖಾಲಿಯಾಗಲಿದ್ದು ನಂತರ ಪುಸ್ತಕ ಬಾರದೆ ತೆರಿಗೆ ಸಂಗ್ರಹ ಅಸಾಧ್ಯವಾಗಿದೆ. ಸ್ವಂತ ಸಂಪನ್ಮೂಲ ಕ್ರೋಢೀಕರಣ ಅಸಾಧ್ಯವಾಗಿರುವ ಕಾರಣ ಗ್ರಾಮದ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತದೆ ಎಂದು ಗ್ರಾ.ಪಂ. ಅಧಿಕಾರಿಗಳು ಹೇಳುತ್ತಾರೆ. ಅರ್ಹ ಫ‌ಲಾನುಭವಿಗಳಿಗೂ ಸವಲತ್ತು ಒದಗಿಸಲು ಸಾಧ್ಯವಾಗುತ್ತಿಲ್ಲ.

ತ್ವರಿತವಾಗಿ ಸಿಗಬೇಕು
ತೆರಿಗೆ ಸ್ವೀಕೃತಿ ಪುಸ್ತಕ ಪೂರೈಕೆ ಮಾಡುವಂತೆ ಜುಲೈ ತಿಂಗಳಿನಲ್ಲಿ ಬೇಡಿಕೆ ಸಲ್ಲಿಸಲಾಗಿದ್ದು ಈವರೆಗೆ ಪುಸ್ತಕ ಲಭ್ಯವಾಗಿಲ್ಲ, ತೆರಿಗೆ ವಸೂಲಾತಿಯಾಗದೆ ಪಂಚಾಯತ್‌ ಆಡಳಿತ ತೀವ್ರ ಸಮಸ್ಯೆಗೆ ಸಿಲುಕುವಂತಾಗಿದೆ. ತ್ವರಿತವಾಗಿ ಪುಸ್ತಕ ಲಭಿಸುವಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ.
-ದಿನೇಶ್‌ ಕುಮಾರ್‌,
ಅಧ್ಯಕ್ಷರು, ಮರ್ಣೆ ಗ್ರಾಮ ಪಂಚಾಯತ್‌

ತಾಲೂಕಿನಲ್ಲಿ 34 ಗ್ರಾ.ಪಂ.ಗಳಿದ್ದು ಕಡ್ತಲ, ಮರ್ಣೆ, ಹಿರ್ಗಾನ, ಕಲ್ಯಾ, ನಂದಳಿಕೆ, ಇನ್ನಾ, ಈದು, ಯರ್ಲಪಾಡಿ ಸೇರಿದಂತೆ ಸುಮಾರು 16 ಗ್ರಾ.ಪಂ. ಗಳಲ್ಲಿ ತೆರಿಗೆ ಸಂಗ್ರಹದ ಪುಸ್ತಕದ ಕೊರತೆ ಇದೆ.

ವಾರದೊಳಗೆ ಪೂರೈಕೆ ಸಾಧ್ಯತೆ
ತಾಲೂಕಿನ ಎಲ್ಲ ಗ್ರಾ.ಪಂ.ಗಳಿಂದ ತೆರಿಗೆ ಸ್ವೀಕೃತಿ ಪುಸ್ತಕದ ಬೇಡಿಕೆ ಪಡೆದು ಬೆಂಗಳೂರಿನ ಸರಕಾರಿ ಮುದ್ರಾಣಾಲಯಕ್ಕೆ ಡಿಮಾಂಡ್‌ ಮಾಡಲಾಗಿದೆ. ಮುಂದಿನ ವಾರದೊಳಗೆ ಪೂರೈಕೆಯಾಗಬಹುದು.
-ಮೇ| ಡಾ| ಹರ್ಷ, ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯತ್‌ , ಕಾರ್ಕಳ

-ಜಗದೀಶ್‌ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next