Advertisement
ಅಂದರೆ ಕೇವಲ ನೂರು ರುಪಾಯಿ ಜಾಸ್ತಿ ಸಂಪಾದನೆ ಮಾಡಿದ ತಪ್ಪಿಗೆ ಹದಿಮೂರು ಸಾವಿರ ಕಳಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿ ಕಾಣಿಸುತ್ತದೆ. ಕೆಲವರು ಇದು ಅಮಾಯಕರ ತಲೆ ಮೇಲೆ ಮೋದಿ ಹೆಣೆದ ಮೋಸ ಎಂದು ಸಾರಿದ್ದರೆ ಇನ್ನು ಕೆಲವರು ಈ ಟೇಬಲೇ ಸರಿ ಇಲ್ಲ ಎಂದು ವಾದಕ್ಕಿಳಿದಿದ್ದರು.
Related Articles
Advertisement
ಆದರೆ ಇಲ್ಲಿ ಒಂದು ರೀತಿಯ ವಿಪರ್ಯಾಸ ಅನಿಸುವುದು ಒಬ್ಟಾತ ಐದು ಲಕ್ಷದ ಗಡಿಯನ್ನು ‘ಜಸ್ಟ್ ಪಾಸ್’ ಅದಾಗ! ಒಂದು ವರ್ಷ 5 ಲಕ್ಷ ವರಮಾನ ಇದ್ದುಕೊಂಡು ಮುಂದಿನ ವರ್ಷ ಕಷ್ಟ ಪಟ್ಟು ನೂರು ರುಪಾಯಿ ಜಾಸ್ತಿ ಸಂಪಾದನೆ ಮಾಡಿದವನು ಬಾರೀ ದೊಡ್ಡ ಮೊತ್ತ (ರೂ. 13,021) ಕಳಕೊಳ್ಳಬೇಕಾಗುತ್ತದೆ. ಈ ವಿಪರ್ಯಾಸ ಒಂಥರಾ ಮುಖಕ್ಕೆ ರಾಚುತ್ತದೆ.
ಆದರೆ ಸೀಮಿತ ಕೆಳ ವರ್ಗಕ್ಕೆ ಮಾತ್ರ ಸೌಲಭ್ಯ ಕೊಡಬೇಕು ಎಂದು ಹೊರಟರೆ ಈ ರೀತಿಯ ಗಡಿರೇಖೆ ಅನಿವಾರ್ಯವೂ ಹೌದು.
ಹಾಗೆ ನೋಡುವುದಾದರೆ ಈ ಸೆಕ್ಷನ್ 87ಎ ಹೊಸತೇನಲ್ಲ. ಇದನ್ನು ಪ್ರಪ್ರಥಮ ಬಾರಿಗೆ ಭರತ ಖಂಡದಲ್ಲಿ ಇಂಟ್ರಡ್ನೂಸ್ ಮಾಡಿದ್ದು 2013 ರ ಬಜೆಟ್ಟಿನಲ್ಲಿ ಆಗಿನ ವಿತ್ತ ಸಚಿವರಾಗಿದ್ದ ಚಿದಂಬರಂ ಅವರು. ಆದರೆ ಅದು ಚಿಕ್ಕ ಪ್ರಮಾಣದಲ್ಲಿತ್ತು. ರೂ. 30,000 ಕರ ಕಟ್ಟುವವರಿಗೆ ಕೇವಲ ರೂ. 2,000 ದ ರಿಬೇಟ್ ನೀಡಿದ್ದರು. ಹಾಗಾಗಿ ಅದನ್ನು ಯಾರೂ ಒಂದು ಇಶ್ಯೂ ಮಾಡಲಿಲ್ಲ. ಆ ಬಳಿಕ 2014 ರಲ್ಲಿ ಬಂದ ಜೈಟಿÉಯವರು ಮುಂದಿನ ಎರಡು ವರ್ಷ ಅದೇ ಪದ್ಧತಿಯನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಿಕೊಂಡು ಹೋದರು. ಮುಂದೆ, ಮೂರನೆಯ ವರ್ಷ (2016-17) ರಿಬೇಟ್ ಮಿತಿಯನ್ನು ರೂ. 2,000 ದಿಂದ ರೂ. 5,000 ಕ್ಕೆ ಏರಿಸಿದರು. ಬಳಿಕ 2017-18 ರಲ್ಲಿ ಕರ ದರವನ್ನು ಶೇ. 5ಕ್ಕೆ ಇಳಿಸಿದಾಗ 87ಎ ಮಿತಿಯನ್ನೂ ಕೂಡಾ ರೂ. 3.5 ಲಕ್ಷಕ್ಕೆ ಇಳಿಸಿದರು. ಮರು ವರ್ಷವೂ ಅದೇ ಮುಂದುವರಿದ ಆ ಪದ್ಧತಿ ರೂ. 5 ಲಕ್ಷದ ಮಿತಿಯೊಡನೆ ಇದೀಗ ಬರೋಬ್ಬರಿ ರೂ. 12,500 (ಸೆಸ್ ಸಹಿತ ರೂ. 13,000) ರ ರಿಯಾಯಿತಿಗೆ ಬಂದು ನಿಂತಿದೆ. ಈ ರೀತಿ ದೊಡ್ಡ ಮೊತ್ತದಲ್ಲಿ ಒಂದು ಸ್ಲಾಬಿಗೆ ಸಂಪೂರ್ಣ ಕರಭಾರವನ್ನು ಮನ್ನಾ ಮಾಡಿದ್ದು ಇದೇ ಮೊದಲ ಬಾರಿ. ಈ ಸೆಕ್ಷನ್ ಇಷ್ಟು ಪ್ರಭಾವಶಾಲಿಯಾಗಿ ಬಳಕೆಯಾಗಿದ್ದು ಇದೇ ಪ್ರಥಮ ಹಾಗೂ ಬಹುತೇಕ ಜನರು 6 ವರ್ಷಗಳಿಂದ ಅಮಲಿನಲ್ಲಿದ್ದ ಈ ಸೆಕ್ಷನ್ನನ್ನು ಗಮನಿಸಿದ್ದೂ ಕೂಡಾ ಇದೇ ಮೊದಲ ಬಾರಿ.
ಈ ಸೆಕ್ಷನ್ ಮಟ್ಟಿಗೆ ಹೇಳುವುದಾದರೆ ಆದಾಯ ಅಂದರೆ ಕರಾರ್ಹ ಆದಾಯ; ಒಟ್ಟು ಆದಾಯ ಅಲ್ಲ. ಒಟ್ಟು ಆದಾಯದಿಂದ ಕಳೆಯುವುದನ್ನೆಲ್ಲಾ ಕಳೆದು ಅಂತಿಮವಾಗಿ ಕರಕಟ್ಟಲು ಸಿಗುವ ಮೊತ್ತವೇ ಕರಾರ್ಹ ಆದಾಯ. ಹಾಗಾಗಿ ಇದು ಅತ್ಯಂತ ಪ್ರಭಾವಶಾಲಿ. ಈ ರೀತಿ ಸಿಗುವ ಆದಾಯ ರೂ. 5ಲಕ್ಷದ ಮೇಲೆ ಇದ್ದರೆ ಅಂತವರಿಗೆ ಈ ಸೆಕ್ಷನ್ ಅನ್ವಯವಾಗುವುದೇ ಇಲ್ಲ; ಅದರ ಒಳಗಿನವರಿಗೆ ಮಾತ್ರ ಇದರ ಲಾಭ ಇರುತ್ತದೆ.
ಆದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನ ಕರಾರ್ಹ ಆದಾಯವನ್ನು ಒಂದು ಪೈ ಜಾಸ್ತಿಯಾಗದಂತೆ ರೂ. 5 ಲಕ್ಷದ ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಹೌದು! ಹೇಗಾದರೂ ಮಾಡಿ ಕರಾರ್ಹ ಆದಾಯವನ್ನು ರೂ. 5 ಲಕ್ಷಕ್ಕಿಂತ ಕಡಿಮೆ ಮಾಡಬೇಕು ಎನ್ನುವುದು ಈ ಸಲದ ಮೂಲ ಮಂತ್ರವಾಗಿದೆ. ಈ ಮಂತ್ರವನ್ನು ಸರಿಯಾಗಿ ಅನುಷ್ಠಾನ ಮಾಡಿದರೆ ಒಟ್ಟು ಆದಾಯ 9, 10, ಯಾ 11 ಲಕ್ಷ ಆದಾಯ ಉಳ್ಳವರೂ ಕರ ಕಟ್ಟದೆ ಬಚಾವಾಗಬಹುದು. ಆದರೆ ಆ ಮಂತ್ರದ ಅನುಷ್ಠಾನ ಹೇಗೆ ಎನ್ನುವುದನ್ನು ಮುಂದಿನ ವಾರ ನೋಡೋಣ. ತಬ್ ತಕ್ ಕೇ ಲಿಯೇ ಶುಕ್ರಿಯಾ, ಶಬ್ಟಾಖೈರ್, ಶುಭದಿನ !
– ಜಯದೇವ ಪ್ರಸಾದ ಮೊಳೆಯಾರ