Advertisement

ಕೆದಕಿದಂತೆಲ್ಲಾ ತೆರಿಗೆ ವಂಚಿಸಿದ ಆಸ್ತಿ ಪತ್ತೆ

03:15 PM Aug 22, 2022 | Team Udayavani |

ಹುಬ್ಬಳ್ಳಿ: ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಪಾಲಿಕೆ ಜಾಣ ನಿರ್ಲಕ್ಷ್ಯ ವಹಿಸಿರುವುದು ಬಯಲಾಗುತ್ತಿದೆ. ಕೆದಕಿದಂತೆಲ್ಲಾ ತೆರಿಗೆ ವಂಚಿಸಿದ ಆಸ್ತಿಗಳು ಪತ್ತೆಯಾಗುತ್ತಿವೆ. “ನಮ್ಮ ನಗರ ಸ್ವಚ್ಛ ನಗರ’ ಅಭಿಯಾನದ ಮೂಲಕ ತೆರಿಗೆಯಿಂದ ಹೊರ ಉಳಿದ ಆಸ್ತಿಗಳು ಬೆಳಕಿಗೆ ಬರುತ್ತಿವೆ. 3669 ಆಸ್ತಿಗಳು ಪತ್ತೆಯಾಗಿದ್ದು, ಬರೋಬ್ಬರಿ 11.32 ಕೋಟಿ ರೂ. ಕರ ವಸೂಲಿಗೆ ಪಾಲಿಕೆ ಮುಂದಾಗಿದೆ.

Advertisement

ಮಹಾನಗರದ ಸ್ವಚ್ಛತೆ ದೃಷ್ಟಿಯಿಂದ ಖಾಲಿ ನಿವೇಶನಗಳ ಸ್ವಚ್ಛತೆಗೆ ಮುಂದಾದಾಗ ಕರ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪಾಲಿಕೆ ದಾಖಲೆಗಳ ಪ್ರಕಾರ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 90 ಸಾವಿರ ಖಾಲಿ ನಿವೇಶನಗಳಿವೆ. ಇದೇ ಪಟ್ಟಿ ಹಿಡಿದು ನಮ್ಮ ನಗರ ಸ್ವಚ್ಛ ನಗರ ಅಭಿಯಾನಕ್ಕಾಗಿ ಖಾಲಿ ನಿವೇಶನ ಹುಡುಕಲು ಹೊರಟ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಗ್ಭ್ರಾಂತರಾಗಿದ್ದಾರೆ. ವಾಸದ ಮನೆ, ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿರುವುದು ಬಯಲಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಅವರು ಅಭಿಯಾನದ ಜೊತೆಗೆ ತೆರಿಗೆ ವಂಚಿಸಿದ ಆಸ್ತಿಗಳ ಸಮೀಕ್ಷೆ ನಡೆಸಲು ಸೂಚಿಸಿದ್ದರು. ವಾರ್ಡ್‌ಗೊಬ್ಬ ನೋಡಲ್‌ ಅಧಿಕಾರಿ ನಿಯೋಜಿಸಿ ಗುರುತಿಸುವ ಕೆಲಸ ನಡೆಯುತ್ತಿದೆ.

ವಸೂಲಿ ಪ್ರಕ್ರಿಯೆ: “ನಮ್ಮ ನಗರ ಸ್ವಚ್ಛ ನಗರ’ ಅಭಿಯಾನ ಆರಂಭವಾಗಿ ಮೂರು ತಿಂಗಳಲ್ಲಿ ತೆರಿಗೆ ತಪ್ಪಿಸಿದ ಬರೋಬ್ಬರಿ 3669 ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಒಂದೊಂದೇ ಆಸ್ತಿ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ಆಸ್ತಿ ಕರ ಪಾವತಿಗೆ ಚಲನ್‌ಗಳನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ 1645 ಚಲನ್‌ ಜನರೇಟ್‌ ಮಾಡಿ ಸಂಬಂಧಿಸಿದ ಮಾಲೀಕರಿಗೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಸಿದ್ಧಪಡಿಸುವ ಚಲನ್‌ಗಳ ಪ್ರಕಾರ 11,32,45,703 ರೂ. ತೆರಿಗೆ ಆಗಲಿದೆ. ಈಗಾಗಲೇ 1,44,89,335 ರೂ. ಆಸ್ತಿ ಕರ ರೂಪದಲ್ಲಿ ಪಾಲಿಕೆಗೆ ಸಂದಾಯವಾಗಿದೆ. ಉಳಿದ ಆಸ್ತಿಗಳಿಗೂ ಚಲನ್‌ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ ಸುಮಾರು 7-8 ಸಾವಿರ ತೆರಿಗೆ ವಂಚನೆ ಆಸ್ತಿಗಳು ಪತ್ತೆಯಾಗಬಹುದು ಎನ್ನುವ ನಿರೀಕ್ಷೆಯಿದೆ.

ಶೇ.200 ಕರ ವಸೂಲಿ: ಕೆಲವರು ಕಟ್ಟಡ ಪರವಾನಗಿ ಪಡೆದು ಸಿಸಿ ಪಡೆದಿಲ್ಲ. ಕೆಲವೆಡೆ ಕಟ್ಟಡ ಪರವಾನಗಿ ಇಲ್ಲದೆಯೇ ನಿರ್ಮಾಣ ಮಾಡಿದ್ದಾರೆ. ಕಟ್ಟಡ ನಿರ್ಮಾಣ ಮಾಡಿದ ವರ್ಷವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಹೆಸ್ಕಾಂನಿಂದ ವಿದ್ಯುತ್‌, ಜಲಮಂಡಳಿಯಿಂದ ನೀರು ಸಂಪರ್ಕ ಪಡೆದ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದು, ಕೆಲವೆಡೆ 10 ವರ್ಷಗಳ ಹಿಂದೆಯೇ ಕಟ್ಟಡ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಈ ದಾಖಲೆಗಳ ಆಧಾರದ ಮೇಲೆಯೇ ಆಸ್ತಿ ಕರ ನಿಗದಿ ಮಾಡಲಾಗುತ್ತಿದೆ. ಆಸ್ತಿ ಕರ ವಂಚಿಸಿದ ಹಿನ್ನೆಲೆಯಲ್ಲಿ ಕೆಎಂಸಿ 1976 ಕಾಯ್ದೆ 112ಸಿ ಅಡಿ ಶೇ.200 ತೆರಿಗೆ ವಸೂಲಿ ಮಾಡಲಾಗುತ್ತಿದೆ.

ಜಾಣ ನಿರ್ಲಕ್ಷ್ಯ: ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ವಂಚಿಸಿದ ಆಸ್ತಿ ಪತ್ತೆಯಾಗುತ್ತಿರುವುದನ್ನು ನೋಡಿದರೆ ಪಾಲಿಕೆ ಕಟ್ಟಡ ವಿಭಾಗ ಸಂಪೂರ್ಣ ವಿಫಲವಾಗಿದೆ. ಇಂತಹ ಕಟ್ಟಡಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕಾದ ಕಂದಾಯ ವಿಭಾಗ ಕೂಡ ಮೌನವಾಗಿದೆ. ಆಯಾ ವಾರ್ಡಿನ ಆಸ್ತಿಗಳ ಮಾಹಿತಿ ಇರುವ ಬಿಲ್‌ ಕಲೆಕ್ಟರ್‌ಗಳ ಹೊಂದಾಣಿಕೆ ಕೆಲಸ, ಕಟ್ಟಡ ವಿಭಾಗ ಕೇವಲ ಪರವಾನಗಿ ಪತ್ರಕ್ಕೆ ಸೀಮಿತವಾಗಿದ್ದರಿಂದ ಪ್ರತಿವರ್ಷ ಪಾಲಿಕೆಗೆ ಕೋಟ್ಯಂತರ ರೂ. ಖೋತಾ ಆಗುತ್ತಿದೆ.

Advertisement

ಕೊನೆ ಹನಿ: ಈ ಹಿಂದೆ ಖಾಲಿ ನಿವೇಶನಗಳ ಸ್ವಚ್ಛತೆ ಕಾರ್ಯ ನಡೆದಿತ್ತಾದರೂ ತೆರಿಗೆ ವಂಚಿಸಿದ ಆಸ್ತಿ ಗುರುತಿಸಿ ದಂಡ ಸಮೇತ ವಸೂಲಿ ಮಾಡುವ ಕೆಲಸಗಳು ಆಗಲಿಲ್ಲ. ಆದರೆ ಇಂದಿನ ಆಯುಕ್ತ ಡಾ| ಗೋಪಾಲಕೃಷ್ಣ ಅವರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಆಳವಾದ ಸಮೀಕ್ಷೆ ನಡೆಯುತ್ತಿದ್ದು, ಇದರ ಮೂಲಕ ತೆರಿಗೆ ವೃದ್ಧಿಸುವ ಕಾರ್ಯ ಆಗುತ್ತಿದೆ. ತೆರಿಗೆ ವಂಚಿಸಿದವರಿಂದ ದಂಡ ಸಮೇತ ವಸೂಲಿ ಮಾಡಿದಂತೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿ, ಅಧಿಕಾರಿಗಳ ಮೇಲೂ ಕ್ರಮವಾದರೆ ಉಳಿದವರಿಗೆ ಪಾಠವಾಗಲಿದೆ.

ಆಸ್ತಿ ತೆರಿಗೆ ಇಂದಲ್ಲ ನಾಳೆ ಪಾವತಿ ಮಾಡಲೇಬೇಕು. ಯಾವುದೇ ಕಾರಣಕ್ಕೂ ಕರ ಪಾವತಿ ಮಾಡದಿರಲು ಸಾಧ್ಯವಿಲ್ಲ. ವಿಳಂಬವಾದಂತೆಲ್ಲಾ ದಂಡದ ಪ್ರಮಾಣ ಹೆಚ್ಚಾಗುತ್ತದೆ. ಸಕಾಲಕ್ಕೆ ತೆರಿಗೆ ಪಾವತಿ ಮಾಡಿ ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು. ತೆರಿಗೆಯಿಂದ ಹೊರಗುಳಿದಿರುವ ಆಸ್ತಿಗಳನ್ನು ಗುರುತಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ಕರ ಪಾವತಿ ಮಾಡಲು ಹಿಂದೇಟು ಹಾಕಿದರೆ ಕೆಎಂಸಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. –ಡಾ| ಬಿ.ಗೋಪಾಲಕೃಷ್ಣ, ಆಯುಕ್ತರು, ಮಹಾನಗರ ಪಾಲಿಕೆ

ʼನಮ್ಮ ನಗರ ಸ್ವಚ್ಛ ನಗರ’ ಅಭಿಯಾನ ಕೈಗೊಂಡಾಗ ತೆರಿಗೆ ವಂಚಿಸಿದ ಆಸ್ತಿಗಳು ಬೆಳಕಿಗೆ ಬಂದವು. ಆಯುಕ್ತರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಮೀಕ್ಷೆಗೆ ಸೂಚಿಸಿದ್ದರ ಪರಿಣಾಮ ಇಲ್ಲಿಯವರೆಗೆ ಇಷ್ಟೊಂದು ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಪಾಲಿಕೆ ನಿಯಮಗಳ ಪ್ರಕಾರವೇ ಚಲನ್‌ ನೀಡಿ ಕರ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದ ತೆರಿಗೆಯನ್ನು ವಸೂಲು ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡಗಳು ಕೆಲಸ ಮಾಡುತ್ತಿವೆ. –ಆನಂದ ಕಲ್ಲೋಳಿಕರ, ಉಪ ಆಯುಕ್ತ, ಕಂದಾಯ ವಿಭಾಗ

-ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next