Advertisement

ಕ್ಷಣಗಣನೆ ಶುರು; ಈ ಬಜೆಟ್ ಪೂರ್ಣ ವಿಭಿನ್ನ, ಮೋದಿ ಲೆಕ್ಕಾಚಾರವೇನು?

04:03 PM Jan 31, 2017 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು ರಾತ್ರಿ 500, 1000 ರೂಪಾಯಿ ನೋಟು ನಿಷೇಧಗೊಳಿಸಿದ ನಂತರ ಮೊದಲ ಬಾರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2017ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು, ಕ್ಷಣಗಣನೆ ಆರಂಭವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿಯ ಬಜೆಟ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

Advertisement

ವಿಶೇಷ ಎಂಬಂತೆ ಈ ಬಾರಿ ಏಕಕಾಲಕ್ಕೆ ರೈಲ್ವೆ ಮತ್ತು ಸಾಮಾನ್ಯ ಬಜೆಟ್ ಮಂಡಿಸಲಾಗುತ್ತಿದೆ. ಜೇಟ್ಲಿ ಬಜೆಟ್ ಮೇಲೆ ಮಾರುಕಟ್ಟೆ ಮತ್ತು ಕೈಗಾರಿಕಾ ಕ್ಷೇತ್ರ ಭಾರೀ ನಿರೀಕ್ಷೆ ಇಟ್ಟುಕೊಂಡಿವೆ. ನೋಟು ನಿಷೇಧದ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ನಲ್ಲಿ ನೇರ ತೆರಿಗೆಗೆ ಹೆಚ್ಚಿನ ಒತ್ತು ಕೊಡಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಸದ್ಯ 60 ವರ್ಷದೊಳಗಿನವರಿಗೆ ಇರುವ 2.50 ಲಕ್ಷ ರೂ.ಗಳ ಆದಾಯ ತೆರಿಗೆ ಮಿತಿಯನ್ನು 3 ಲಕ್ಷ ರೂಗಳಿಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಾಧ್ಯತೆ ಕಡಿಮೆ ಎಂಬುದಾಗಿಯೂ ಕೆಲ ಆರ್ಥಿಕ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.

ಹಣಕಾಸು ಸಚಿವ ಜೇಟ್ಲಿ ಅವರು ಮಂಡಿಸಲಿರುವ ಬಜೆಟ್ ಈ ಬಾರಿ ಜನರಿಗೆ ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಈಗಾಗಲೇ ಪಂಚರಾಜ್ಯಗಳ ಚುನಾವಣಾ ಅಖಾಡ ರಂಗೇರತೊಡಗಿದೆ. ಕೇಂದ್ರ ಸರ್ಕಾರ ಬಜೆಟ್ ಮಂಡನೆ ದಿನಾಂಕ ಮುಂದೂಡಬೇಕೆಂದು ಕೋರಿ ವಿಪಕ್ಷಗಳು ಸುಪ್ರೀಂ ಮೆಟ್ಟಿಲೇರಿದ್ದವು. ಆದರೆ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ದಿನಾಂಕ ಮುಂದೂಡಿಕೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತ್ತು.

ನೋಟು ನಿಷೇಧದ ಹಿನ್ನೆಲೆಯಲ್ಲಿ 2017ನೇ ಸಾಲಿನ ಬಜೆಟ್ ತುಂಬಾ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕಾಳಧನಿಕರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವ ವಿಶ್ವಾಸ ಆರ್ಥಿಕ ತಜ್ಞರದ್ದಾಗಿದೆ.

Advertisement

ಸರಕು ಮತ್ತು ಸೇವಾ ತೆರಿಗೆ:
ಬಜೆಟ್ ನಲ್ಲಿ ಜಿಎಸ್ ಟಿ ಜಾರಿಗೆ ತರುವ ಕುರಿತು ಮಹತ್ವದ ನಿರ್ಧಾರ ಹೊರಬೀಳಲಿದೆ. ಜಿಎಸ್ ಟಿ ಜಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪ್ರಕ್ರಿಯೆಯಾಗಿದೆ. ಜಿಎಸ್ ಟಿ ಪರೋಕ್ಷ ತೆರಿಗೆ ಪದ್ಧತಿಯನ್ನು ರದ್ದು ಮಾಡುತ್ತದೆ. ಕೇಂದ್ರ ಮತ್ತು ರಾಜ್ಯಗಳಿಗೆ ಪ್ರತ್ಯೇಕ ಜಿಎಸ್ ಟಿ. 2017ರ ಜೂನ್ ಸೆಪ್ಟೆಂಬರ್ ನಡುವೆ ಜಿಎಸ್ ಟಿ ಜಾರಿಯಾಗುವ ನಿರೀಕ್ಷೆ ಇದೆ.

ಹೌಸಿಂಗ್ ನತ್ತ ಚಿತ್ತ:
ಕಳೆದ ಬಾರಿ ಮಂಡಿಸಿದ್ದ ಬಜೆಟ್ ನಲ್ಲಿ ಕಡಿಮೆ ವೆಚ್ಚದ ಮನೆ ನಿರ್ಮಾಣದ ಬಗ್ಗೆ ಕೆಲವು ಪ್ರಮುಖ ಅಂಶಗಳನ್ನು ಘೋಷಿಸಲಾಗಿತ್ತು. ಅಲ್ಲದೇ ಮನೆ ಕಟ್ಟಿಕೊಳ್ಳಲು ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ ನೀಡುವುದಾಗಿ ಆಫರ್ ನೀಡಿತ್ತು ಶೇ.4ರಷ್ಟು ಬಡ್ಡಿ ದರದಲ್ಲಿ ಮನೆ ಕಟ್ಟಲು ಸುಮಾರು 9 ಲಕ್ಷದವರೆಗೆ ಸಾಲ ನೀಡುವುದಾಗಿ ತಿಳಿಸಿತ್ತು. ಹಾಗಾಗಿ ಈ ಬಾರಿಯೂ ಗೃಹ ಸಾಲ, ಶಿಕ್ಷಣ ಕ್ಷೇತ್ರ, ಸಾರಿಗೆ, ರಸ್ತೆ, ಪ್ರವಾಸೋದ್ಯಮ, ತೆರಿಗೆ ಈ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಬಜೆಟ್ ಪೂರ್ಣ ವಿಭಿನ್ನ!
ಹೌದು ತೆರಿಗೆಗಳ್ಳರಿಗೆ, ಕಾಳಧನಿಕರಿಗೆ ಈ ಬಾರಿ ಮಂಡನೆಯಾಗಲಿರುವ ಬಜೆಟ್ ನಲ್ಲಿ ಬಿಗ್ ಶಾಕ್ ಸಿಗಲಿದೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳವಾರ ಲೋಕಸಭೆಯಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಬಜೆಟ್ ಅಧಿವೇಶನಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, 2017ನೇ ಸಾಲಿನ ಬಜೆಟ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂಬ ಸುಳಿವು ನೀಡಿದ್ದಾರೆ. ಹಾಗಾಗಿ ಬುಧವಾರ ಸಂಸತ್ ನಲ್ಲಿ ಮಂಡನೆಯಾಗಲಿರೋ ಬಜೆಟ್ ಭಾರೀ ಸಂಚಲನಕ್ಕೆ ಕಾರಣವಾಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next