ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿ ಹೆಲಿಕಾಪ್ಟರ್ ಪತನಗೊಂಡು ಸಾವಿಗೀಡಾದ ಭಾರತೀಯ ವಾಯುಪಡೆ ಮತ್ತು ಸೇನಾಪಡೆಯ ಏಳು ಯೋಧರ ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ, ರಟ್ಟಿನ ಪೆಟ್ಟಿಯೊಳಗೆ ಇಟ್ಟು ತೆಗೆದುಕೊಂಡು ಬಂದಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಏಳು ಮಂದಿ ಯುವಕರ(ಯೋಧರ) ಮೃತದೇಹವನ್ನು ತಾಯ್ನಾಡಿಗೆ ತರಲಾಗಿದೆ ಎಂಬುದಾಗಿ ಲೆಫ್ಟಿನೆಂಟ್ ಜನರಲ್ ಎಚ್.ಎಸ್.ಪನಾಗ್ ಅವರು ಯೋಧರ ಮೃತದೇಹವನ್ನು ರಟ್ಟಿನ ಪೆಟ್ಟಿಗೆಯಲ್ಲಿರಿಸಿರುವ ಫೋಟೋವನ್ನು ಭಾನುವಾರ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಬಳಿಕ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಇದೊಂದು ಆಘಾತಕಾರಿ ಬೆಳವಣಿಗೆ, ನಮ್ಮ ದೇಶದ ವೀರ ಯೋಧರನ್ನು ಗೌರವಿಸೋ ರೀತಿ ಇದೇನಾ? ಎಂಬುದಾಗಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು. ತದನಂತರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ, ಟೀಕೆಗಳು ವ್ಯಕ್ತವಾಗಿದ್ದವು.
ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಈ ಬಗ್ಗೆ ಉತ್ತರಿಸಿದ ಭಾರತೀಯ ಸೇನಾಪಡೆ ಮೃತ ಯೋಧರಿಗೆ ಸೇನಾ ಗೌರವವನ್ನು ಸಲ್ಲಿಸಲಾಗಿದೆ. ಸಮುದ್ರ ಮಟ್ಟದಿಂದ 17000 ಎತ್ತರದಲ್ಲಿ ಅಷ್ಟೊಂದು ಶವಪೆಟ್ಟಿಗೆಗಳನ್ನು ಹೊತ್ತುಕೊಂಡು ಹಾರಲು ಹೆಲಿಕಾಪ್ಟರ್ಗೆ ಸಾಧ್ಯವಿಲ್ಲ. ಹಾಗಾಗಿ ರಟ್ಟಿನ ಪೆಟ್ಟಿಗೆ ಬಳಸಲಾಗಿದೆ ಎಂದು ಹೇಳಿದೆ.
ಅಲ್ಲಿನ ಸ್ಥಳೀಯರು ತಮ್ಮ ವಾಡಿಕೆಯಂತೆ ಯೋಧರ ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿದ್ದರು. ಆದರೆ ನಾವು ನಮ್ಮ ಯೋಧರಿಗೆ ನೀಡಬೇಕಾದ ಎಲ್ಲಾ ಗೌರವಗಳನ್ನು ನೀಡುತ್ತೇವೆ ಎಂದು ಸೇನಾ ಅಧಿಕಾರಿಗಳು ಸಮಜಾಯಿಷಿಯನ್ನು ನೀಡಿದ್ದಾರೆ.