Advertisement

ಇನ್ನು ತತ್ಕಾಲ್‌ ಸುಲಭ, ಟಿಕೆಟ್‌ಗಳೂ ಭರಪೂರ

08:49 AM Feb 20, 2020 | sudhir |

ಹೊಸದಿಲ್ಲಿ: ರೈಲು ಪ್ರಯಾಣಿಕರಿಗೆ ರೈಲ್ವೇ ಸುರಕ್ಷತಾ ದಳ (ಆರ್‌ಪಿಎಫ್) ಸಿಹಿ ಸುದ್ದಿ ನೀಡಿದೆ. ತತ್ಕಾಲ್‌ ಸೇವೆಯಡಿ ರೈಲು ಟಿಕೆಟ್‌ಗಳನ್ನು ಬ್ಲಾಕ್‌ ಮಾಡಲು ಬಳಸಲಾಗುತ್ತಿದ್ದ ಸಾಫ್ಟ್ವೇರ್‌ಗಳನ್ನು ಬೇರು ಸಹಿತ ನಿರ್ಮೂಲನೆಗೊಳಿಸಿದೆ.

Advertisement

ಜತೆಗೆ ತತ್ಕಾಲ್‌ ಟಿಕೆಟ್‌ ಬ್ಲಾಕಿಂಗ್‌ಗೆ ನೆರವಾಗುತ್ತಿದ್ದ 60 ಟಿಕೆಟ್‌ ಬುಕಿಂಗ್‌ ಏಜೆಂಟರನ್ನು ಬಂಧಿಸಲಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ತತ್ಕಾಲದ ಎಲ್ಲ ಟಿಕೆಟ್‌ಗಳೂ ಭರಪೂರವಾಗಿ ಲಭ್ಯವಾಗುವಂತೆ ಅನುವು ಮಾಡಲಾಗಿದೆ.

ದಿಲ್ಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಪಿಎಫ್ ಮಹಾ ನಿರ್ದೇಶಕ ಅರುಣ್‌ ಕುಮಾರ್‌, “ನಕಲಿ ಸಾಫ್ಟ್ ವೇರ್‌ನ ದಂಧೆಕೋರರು ವರ್ಷಕ್ಕೆ 50ರಿಂದ 100 ಕೋಟಿ ರೂ. ಸಂಪಾದಿಸುತ್ತಿದ್ದರು.

ಈಗ ಅವರ ಆಟ ನಿಂತಿದೆ. ರೈಲ್ವೇ ಇಲಾಖೆಯ ಕ್ರಮದಿಂದಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್‌ ಶುರುವಾದ ಕೆಲವೇ ನಿಮಿಷಗಳಲ್ಲಿ ಉಂಟಾಗುತ್ತಿದ್ದ ಟಿಕೆಟ್‌ ಬ್ಲಾಕಿಂಗ್‌ ಪಿಡುಗು ಈಗ ಮಾಯವಾಗಿದೆ ಎಂದು ತಿಳಿಸಿದರು.

ಈಗ 10 ಗಂಟೆ ಟಿಕೆಟ್‌ ಲಭ್ಯ!
ಎಎನ್‌ಎಂಎಸ್‌, ಮ್ಯಾಕ್‌, ಜಾಗ್ವಾರ್‌ನಂಥ ಸಾಫ್ಟ್ವೇರ್‌ಗಳು ಐಆರ್‌ಸಿಟಿಸಿಯ ಲಾಗಿನ್‌ ಕ್ಯಾಪc, ಬುಕಿಂಗ್‌ ಕ್ಯಾಪc ಹಾಗೂ ಬ್ಯಾಂಕ್‌ನಿಂದ ಬರುವ “ಒನ್‌ ಟೈಮ್‌ ಪಾಸ್‌ವರ್ಡ್‌’ (ಒ.ಟಿ.ಪಿ.)ಗಳನ್ನು ಬಳಸದೆಯೇ ಟಿಕೆಟ್‌ಗಳನ್ನು ಸೃಷ್ಟಿಸುತ್ತಿದ್ದವು. ಈ ಮೂಲಕ ಹಲವಾರು ಟಿಕೆಟ್‌ಗಳನ್ನು ಕ್ಷಣಮಾತ್ರದಲ್ಲಿ ಬ್ಲಾಕ್‌ ಮಾಡಲಾಗುತ್ತಿತ್ತು. ಈಗ ಅವೆಲ್ಲವೂ ನಿಂತಿದೆ. ಹಿಂದೆ ಕೇವಲ 2 ನಿಮಿಷಗಳಲ್ಲಿ ಖಾಲಿಯಾಗುತ್ತಿದ್ದ ತತ್ಕಾಲ್‌ ಟಿಕೆಟ್‌ಗಳು ಈಗ ಬುಕ್ಕಿಂಗ್‌ ಆರಂಭಗೊಂಡ 10 ಗಂಟೆಗಳವರೆಗೂ ಲಭ್ಯ ಎಂದು ಅರುಣ್‌ ಕುಮಾರ್‌ ವಿವರಿಸಿದರು.

Advertisement

ಐಆರ್‌ಸಿಟಿಸಿಯ ಪಿಡುಗು ನಿವಾರಣೆ
ತತ್ಕಾಲ್‌ಗೆ ಅಡ್ಡಿಯೊಡ್ಡುತ್ತಿದ್ದ ಸಾಫ್ಟ್ವೇರ್‌ಗಳನ್ನಷ್ಟೇ ಅಲ್ಲದೆ, ಐಆರ್‌ಸಿಟಿಸಿಯ ಸೇವೆಗಳನ್ನು ದಂಧೆಯಾಗಿ ಬಳಸಿಕೊಳ್ಳುವಲ್ಲಿ ನೆರವಾಗುತ್ತಿದ್ದ ಎಲ್ಲ ಬಗೆಯ ಸಾಫ್ಟ್ ವೇರ್‌ಗಳನ್ನು ನಿಷೇಧಿಸಲಾಗಿದೆ. ಅವುಗಳನ್ನು ನಿರ್ವಹಿಸುತ್ತಿದ್ದ ತಂತ್ರಜ್ಞರನ್ನೂ ಬಂಧಿಸಲಾಗಿದೆ. ಇದರಿಂದ ಜನರಿಗೆ ರೈಲು ಟಿಕೆಟ್‌ ಸಿಗುವಂತಾಗಿದೆ ಎಂದು ಅರುಣ್‌ ತಿಳಿಸಿದ್ದಾರೆ.

ಟೆರರ್‌ ಲಿಂಕ್‌
ಟಿಕೆಟ್‌ ಬ್ಲಾಕಿಂಗ್‌ ಹಿಂದಿನ ರಹಸ್ಯದ ಬೆನ್ನು ಹತ್ತಿದ್ದ ಆರ್‌ಪಿಎಫ್, ಈ ಮಹಾ ಕರ್ಮಕಾಂಡದ ರೂವಾರಿ ಎನ್ನಲಾದ ಕೋಲ್ಕತಾ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಬಾಂಗ್ಲಾದೇಶ ಮೂಲದ ಜೆಯುಎಂಬಿ ಉಗ್ರ ಸಂಘಟನೆ ಜತೆಗೆ ಆತ ನಂಟು ಹೊಂದಿರುವ ಬಗ್ಗೆ ಶಂಕೆಯಿದ್ದು ತನಿಖೆ ನಡೆಯುತ್ತಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಅರುಣ್‌, ಪ್ರಕರಣದಡಿ ಬಂಧಿಸಲಾಗಿರುವ 60 ಏಜೆಂಟರಲ್ಲಿ ಅನೇಕರು ಜೆಯುಎಂಬಿ ಜತೆಗೆ ನಂಟು ಹೊಂದಿರುವ ಶಂಕೆ ಇದೆ. ಈ ದಂಧೆಯಿಂದ ಬಂದ ಹಣವನ್ನು ಭಯೋತ್ಪಾದನೆಗೆ ಹಾಗೂ ಅಕ್ರಮ ಹಣ ವರ್ಗಾವಣೆಗೆ ಬಳಸಲಾಗುತ್ತಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next