Advertisement

ನೋಂದಣಿ-ಖರೀದಿ ಕೇಂದ್ರ ಆರಂಭಿಸಿ

07:15 PM Nov 07, 2020 | Suhan S |

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ಶೇಂಗಾ ಖರೀದಿಸಲು ಸರ್ಕಾರ ಆದೇಶ ನೀಡಿದ್ದು, ರೈತರ ನೋಂದಣಿ ಹಾಗೂ ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ಶೇಂಗಾ ಖರೀದಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ ಗೆ 1868 ರೂ. ಹಾಗೂ ಗ್ರೇಡ್‌-ಎ ಭತ್ತಕ್ಕೆ 1888 ರೂ.ಬೆಂಬಲ ಬೆಲೆ ಘೋಷಿಸಲಾಗಿದೆ. ಸಾಮಾನ್ಯ ಭತ್ತ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂ. (ಪ್ರತಿ ಎಕರೆಗೆ 16 ಕ್ವಿಂ.ನಂತೆ) ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ನೋಂದಣಿಮಾಡಿದಂತಹ ರೈತರಿಂದ ಭತ್ತವನ್ನು, ನಿಗದಿತ ಅಕ್ಕಿ ಗಿರಣಿಗಳ ಮೂಲಕ ನೇರವಾಗಿ ಪಡೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೆಂಬಲ ಬೆಲೆಗಿಂತಲೂ ಕಡಿಮೆ ದರ ಇದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭ ಮಾಡುತ್ತಿರುವುದು ರೈತರಿಗೆ ಅನುಕೂಲವಾಗಲಿದೆ. ಭತ್ತ ಮಾರಾಟ ಮಾಡಬಯಸುವ ರೈತರು ಕೃಷಿ ಇಲಾಖೆ ಜಾರಿಗೊಳಿಸಿರುವ ಫ್ರೂಟ್ಸ್‌ ದತ್ತಾಂಶದಲ್ಲಿತಮ್ಮ ಹೆಸರು ನೋಂದಣಿ ಮಾಡಿಸಿರಬೇಕು. ಫ್ರೂಟ್ಸ್‌ದತ್ತಾಂಶದಲ್ಲಿ ನೋಂದಣಿ ಆಗಿರದ ರೈತರಿಂದ ಭತ್ತ ಖರೀದಿಗೆ ಅವಕಾಶವಿಲ್ಲ. ಇದುವರೆಗೂ ನೋಂದಣಿಮಾಡಿಸದೇ ಇರುವ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಲು ಅವಕಾಶವಿದೆ. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಕಾರ್ಯನಿರತವಾಗಿರುವ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಳ್ಳಬೇಕಿದ್ದು, ನ. 20 ರಿಂದ 25ವರೆಗೆ ನೋಂದಣಿ ಮಾಡಿಕೊಳ್ಳಬೇಕು. ಭತ್ತ ಗುಣಮಟ್ಟ ಪರಿಶೀಲನೆಗೆ ಕೃಷಿ ಇಲಾಖೆ ಗ್ರೇಡರ್‌ ಗಳನ್ನು ನಿಯೋಜಿಸಿ, ಇವರಿಗೆ ಸೂಕ್ತ ತರಬೇತಿ ನೀಡಬೇಕು. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ರೈತರ ನೋಂದಣಿ ಕಾರ್ಯ ನ. 30 ರಿಂದ ಡಿ. 30 ರವರೆಗೆ ನಡೆಯಲಿದೆ. ಭತ್ತ ಮಾರಾಟ ಮಾಡುವ ರೈತರಿಗೆ ಮೂರು ದಿನಗಳ ಒಳಗಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಯಾಗಬೇಕು ಎಂದು ಡಿಸಿ ಸೂಚನೆ ನೀಡಿದರು.

16 ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸುವ ಸಲುವಾಗಿ ಕಳೆದ ಬಾರಿ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಪ್ರಾರಂಭಿಸಲಾಗಿತ್ತು. ಆದರೆ, ಈ ಬಾರಿ ಜಗಳೂರು ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳ ಒಟ್ಟು 16 ಹೋಬಳಿ ಕೇಂದ್ರಗಳಲ್ಲಿಯೂ ಭತ್ತ ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಸಿಬ್ಬಂದಿ ಕೊರತೆಯಾದಲ್ಲಿ ಜಿಲ್ಲಾಡಳಿತದ ವತಿಯಿಂದಲೇ ಸಿಬ್ಬಂದಿ ನಿಯೋಜಿಸಲಾಗುವುದು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕುರಿತು ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಆಗಬೇಕು ಎಂದು ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಸದ್ಯ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆ ಇದೆ. ಫ್ರೂಟ್ಸ್‌ ದತ್ತಾಂಶ ವ್ಯವಸ್ಥೆ ಪ್ರಾರಂಭವಾದಾಗಿನಿಂದ ರೈತರಿಗೆ ತ್ವರಿತವಾಗಿ ಹಣ ಪಾವತಿ ಆಗುತ್ತಿದೆ. ಕಳೆದ ಬಾರಿ ಬೆಂಬಲ ಬೆಲೆ ಯೋಜನೆಯಡಿ ಸುಮಾರು 40 ಸಾವಿರ ಕ್ವಿಂ. ನಷ್ಟು ಭತ್ತ ಖರೀದಿ ಆಗಿತ್ತು. ಎಲ್ಲ ರೈತರಿಗೂ ಹಣ ಪಾವತಿಯಾಗಿದೆ ಎಂದರು.

Advertisement

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ಮಾತನಾಡಿ, ಈ ಬಾರಿ ಜಿಲ್ಲೆಯ 66450 ಹೆ. ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಸುಮಾರು 3.30 ಲಕ್ಷ ಟನ್‌ ಭತ್ತ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಸದ್ಯ ಜಿಲ್ಲೆಯಲ್ಲಿ ಭತ್ತ ಕಟಾವು ಪ್ರಕ್ರಿಯೆ ಆರಂಭವಾಗಿದೆ. ರೈತರು ತರುವ ಭತ್ತದ ಮಾದರಿ ಗುಣಮಟ್ಟ ಪರಿಶೀಲನೆಗೆ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರ್‌ಗಳನ್ನು ನಿಯೋಜಿಸಲಾಗುವುದು ಎಂದರು.

ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಸಲು ಸರ್ಕಾರ ಸೂಚನೆನೀಡಿದ್ದು, ಜಿಲ್ಲೆಯ ಜಗಳೂರಿನಲ್ಲಿ ಶೇಂಗಾ ಖರೀದಿಕೇಂದ್ರ ಪ್ರಾರಂಭ ಮಾಡಲಾಗುವುದು. ಶೇಂಗಾ ಬೆಳೆಗೆ ಪ್ರತಿ ಕ್ವಿಂಟಲ್‌ಗೆ 5275 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 03 ಕ್ವಿಂಟಲ್‌ನಂತೆಪ್ರತಿ ರೈತರಿಂದ ಗರಿಷ್ಟ 15 ಕ್ವಿಂ. ಶೇಂಗಾ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ರೈತರ ನೋಂದಣಿ ಕಾರ್ಯ ಆರಂಭವಾಗಿದ್ದು, ನೋಂದಣಿ ಮಾಡಿಸಲು ನ. 21 ಕೊನೆಯ ದಿನವಾಗಿದೆ. ಫ್ರೂಟ್ಸ್‌ ದತ್ತಾಂಶದಲ್ಲಿನೋಂದಣಿಯಾಗಿರುವ ರೈತರಿಂದ ಮಾತ್ರ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಸಲಾಗುವುದು. ಶೇಂಗಾ ಖರೀದಿಗೆ ಜಿಲ್ಲೆಯಲ್ಲಿ ಕೆಒಎಫ್‌ ಅನ್ನು ಖರೀದಿ ಏಜೆನ್ಸಿಯಾಗಿ ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕೆಒಎಫ್‌ ವ್ಯವಸ್ಥಾಪಕ ಹನುಮಂತ ನಾಯಕ್‌ ಸೇರಿದಂತೆ ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next