Advertisement

ಕುಡಿಯುವ ನೀರಿನ ಟ್ಯಾಂಕ್‌ಗಳ ಸ್ವಚ್ಛತೆಗೆ ಕಾರ್ಯಪಡೆ

06:00 AM Jul 01, 2018 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಬಗ್ಗೆ ನಿಗಾ ವಹಿಸಲು ತಾ.ಪಂ. ಸಿಇಒ ಹಾಗೂ ಜಿ.ಪಂ. ಸಹಾಯಕ ಎಂಜಿನಿಯರ್‌ ಅವರನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸುವಂತೆ ಶನಿವಾರ ಜಿ.ಪಂ. ಸಭಾಂಗಣದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಅಧ್ಯಕ್ಷತೆಯಲ್ಲಿ ಜರಗಿದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸೂಚಿಸಲಾಯಿತು. 

Advertisement

ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗುತ್ತಿಲ್ಲ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳಿವೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಗಮನ ಸೆಳೆದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಡಾ| ಎಂ. ಆರ್‌. ರವಿ ಅವರು, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿ.ಪಂ. ಸಹಾಯಕ ಎಂಜಿನಿಯರ್‌ ಅವರನ್ನು ಒಳಗೊಂಡ ಕಾರ್ಯಪಡೆ ರಚಿಸುವಂತೆ ಹಾಗೂ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಮಿಷನ್‌ ಅಂತ್ಯೋದಯ ಯೋಜನೆ
ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಮಿಷನ್‌ ಅಂತ್ಯೋದಯ ಯೋಜನೆಗೆ 97 ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದ್ದು, 156 ಗ್ರಾಮಗಳಿಗೆ ಇದರ ಪ್ರಯೋಜನ ಲಭಿಸಲಿದೆ.   ಈ ಗ್ರಾಮದಲ್ಲಿ ಅರ್ಥಿಕ ಅಭಿವೃದ್ಧಿ, ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿ.ಪಂ. ಸಿಇಒ ವಿವರಿಸಿದರು.

ಸಿಆರ್‌ಎಫ್‌: 65 ಕೋ. ರೂ. ಬಿಡುಗಡೆ
ಸಿಆರ್‌ಎಫ್‌ ಮೊದಲ ಹಂತದ 14 ಕಾಮಗಾರಿಗಳಿಗೆ 65 ಕೋಟಿ ರೂ. ಬಿಡುಗಡೆಯಾಗಿದ್ದು, 4 ಕಾಮಗಾರಿ ಮುಕ್ತಾಯಗೊಂಡಿವೆ, ಉಳಿದ ಕಾಮಗಾರಿ ಪ್ರಗತಿಯಲ್ಲಿವೆ. 2ನೇ ಹಂತದಲ್ಲಿ   8 ಕಾಮಗಾರಿಗಳಿದ್ದು ತಾಂತ್ರಿಕ ಬಿಡ್‌ ಪರಿಶೀಲನೆಯಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಮಾಹಿತಿ ನೀಡಿದರು. ಗುರುಪುರ ಸೇತುವೆಗೆ 37 ಕೋ.ರೂ.ಗೆ ಟೆಂಡರ್‌ ಆಹ್ವಾನಿಸಲಾಗಿದ್ದು ಮಣಿಹಳ್ಳ- ನಿಡ್ಗಲ್‌- ಚಾರ್ಮಾಡಿಹಳ್ಳ ಸೇತುವೆಯ 28.48 ಕೋ.ರೂ. ಕಾಮಗಾರಿ ಪ್ರಗತಿಯಲ್ಲಿದೆ ವಿವರಿಸಿದರು. 

ಕಾರ್ಕಳದ ಸಾಣೂರು ಜಂಕ್ಷನ್‌ನಿಂದ ಬಿಕರ್ನಕಟ್ಟೆ ವರೆಗೆ ಚತುಷ್ಪಥ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಜು. 31ರೊಳಗೆ ವರದಿ ಸಿದ್ಧಪಡಿಸಲಾಗುವುದು ಎಂದು ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಭೆಗೆ ವಿವರಿಸಿದರು. ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣ, ಡೆಂಗ್ಯೂ ಪೀಡಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಆರೋಗ್ಯ  ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಳೆಗಾಲದ ಸಾಂಕ್ರಾಮಿಕ ರೋಗಗಳು, ನಾಯಿಕಡಿತ, ಹಾವು ಕಡಿತಕ್ಕೆ ಸಾಕಷ್ಟು ಪ್ರಮಾಣದಲ್ಲಿ ಔಷಧ ಶೇಖರಿಸಿಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸಂಸದರು ಸೂಚಿಸಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಂಜೀವ ಮಠಂದೂರು, ರಾಜೇಶ್‌ ನಾೖಕ್‌ ಉಳಿಪಾಡಿ, ಹರೀಶ್‌ ಪೂಂಜ, ಡಾ| ಭರತ್‌ ಶೆಟ್ಟಿ ಉಪಸ್ಥಿತರಿದ್ದರು. 

Advertisement

ಎನ್‌ಆರ್‌ಇಜಿ ಅನುದಾನ ಸಮರ್ಪಕ ಬಳಕೆಗೆ ಸೂಚನೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎನ್‌ಆರ್‌ಇಜಿ)ಯಲ್ಲಿ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗ ಸೃಷ್ಟಿಯ ಜತೆಗೆ ಗ್ರಾಮೀಣ ಅಭಿವೃದ್ಧಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯೋಜನೆ ಗಳನ್ನು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿ  ಸೂಚಿಸಿದರು. ಶಾಲೆಗಳಲ್ಲಿ ಕೈತೋಟ ಬೆಳೆ‌ಸಲು ಎನ್‌ಆರ್‌ಇಜಿಯಲ್ಲಿ ನೆರವು ನೀಡಲಾಗುವುದು. ಈ ವರ್ಷ 1,000 ಶಾಲೆಗಳಲ್ಲಿ ಅಕ್ಷರ ತೋಟ ರೂಪಿಸಲು ಯೋಜಿಸಲಾಗಿದೆ ಎಂದು ಸಿಇಒ ತಿಳಿಸಿದರು. 

ಮನಪಾ ವ್ಯಾಪ್ತಿಯ ಪದವು ಗ್ರಾಮದ ರಾಜೀವ ನಗರದಲ್ಲಿ ಪ್ರಧಾನ ಮಂತ್ರಿ ಆವಾಜ್‌ ಯೋಜನೆಯಡಿ ಜಿ+ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ಫಲಾನುಭವಿಗಳಿಗೆ ನೀಡುವ ಯೋಜನೆಯಲ್ಲಿ 930 ಫಲಾನುಭವಿಗಳ ಆಯ್ಕೆ ನಡೆದಿದೆ.  ಅನುದಾನ ಇಲ್ಲದೆ ಯೋಜನೆ ನೆನೆಗುದಿಯಲ್ಲಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next