Advertisement

ಶಿಷ್ಯರ ಆಟ ಬಲ್ಲವರ್ಯಾರು…ಗುರು ಶಿಷ್ಯರ ಸವಾಲು ಮತ್ತು ತರುಣ್‌ ಮಾತು

02:24 PM Sep 16, 2022 | Team Udayavani |

ಇದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು… -ಹೀಗೆ ಹೇಳಿ ನಕ್ಕರು ತರುಣ್‌ ಸುಧೀರ್‌. ಅವರು ಹೇಳಿದ್ದು “ಗುರು ಶಿಷ್ಯರು’ ಚಿತ್ರದ ಬಗ್ಗೆ. ಶರಣ್‌ ನಾಯಕರಾಗಿರುವ “ಗುರು- ಶಿಷ್ಯರು’ ಚಿತ್ರ ಸೆ.23ರಂದು ತೆರೆಕಾಣುತ್ತಿದೆ. ಶರಣ್‌ ಹಾಗೂ ತರುಣ್‌ ಸುಧೀರ್‌ ಸೇರಿಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ತರುಣ್‌ ಈ ಚಿತ್ರದ ಕ್ರಿಯೇಟಿವ್‌ ಹೆಡ್‌ ಕೂಡಾ. ಮುಖ್ಯವಾಗಿ ಈ ಚಿತ್ರ 95ರ ಕಾಲಘಟ್ಟದಲ್ಲಿ ನಡೆದಿದ್ದು, ಖೋ ಖೋ ಕ್ರೀಡೆಯನ್ನು ಮೂಲವಾಗಿಟ್ಟುಕೊಂಡು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ 12 ಮಂದಿ ಮಕ್ಕಳು ನಟಿಸಿದ್ದು, ಅವರನ್ನು ಸಿನಿಮಾಕ್ಕಾಗಿಯೇ ಸಿದ್ಧಪಡಿಸಿದ್ದಾರೆ. ಇದು ಇಡೀ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತಂತೆ.

Advertisement

ಈ ಬಗ್ಗೆ ಮಾತನಾಡುವ ತರುಣ್‌, “ಸಿನಿಮಾದ ಕಥೆ ಲಾಕ್‌ ಆದ ನಂತರ ನಮಗಿದ್ದ ದೊಡ್ಡ ಸವಾಲೆಂದರೆ 95ರ ಪರಿಸರ ಕಟ್ಟಿಕೊಡೋದು. ರೆಟ್ರೋ ಸಿನಿಮಾ ಮಾಡುವಾಗ ಅದಕ್ಕೆ ಹೆಚ್ಚಿನ ತಯಾರಿ ಬೇಕಾಗುತ್ತದೆ. ನಮಗೆ ಪಕ್ಕಾ ಹಳ್ಳಿ ವಾತಾವರಣ ಬೇಕಿತ್ತು. ಮಣ್ಣಿನ ರಸ್ತೆ, ಗಿಡ- ಮರ, ಹೊಲ-ಗದ್ದೆ, ಹಸು, ಎತ್ತಿನ ಗಾಡಿ… ಇಂತಹ ವಾತಾವರಣ ಬೇಕಾಗಿತ್ತು. ಆದರೆ, ಈಗ ಎಲ್ಲಿ ನೋಡಿದರೂ ಮೊಬೈಲ್‌ ಟವರ್‌, ಕಾಂಕ್ರೀಟ್‌ ರಸ್ತೆ ಕಾಣಿ ಸುತ್ತಿತ್ತು. ಮುಖ್ಯವಾಗಿ ನಮಗೆ ಎತ್ತಿನ ಗಾಡಿ ಬೇಕಾಗಿತ್ತು. ಅದನ್ನು ತಗೊಂಡು ಶೂಟಿಂಗ್‌ ಸ್ಪಾಟ್‌ಗೆ ಸಾಗಿಸೋದು ಒಂದು ಸವಾಲಾದರೆ, ಅದರ ಖರ್ಚು ಮತ್ತೂಂದು. ಈಗ ಅವೆಲ್ಲವನ್ನು ದಾಟಿ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಸೆಲೆಬ್ರೆಟಿಗಳ ಮಕ್ಕಳು ನಟಿಸಿದ್ದಾರೆ. ಹಾಗಂತ ಯಾರನ್ನೂ ನೇರವಾಗಿ ಆಯ್ಕೆ ಮಾಡಿಲ್ಲ. ಎಲ್ಲರನ್ನು ಆಡಿಷನ್‌ ಮೂಲಕವೇ ಫೈನಲ್‌ ಮಾಡಿದ್ದು. ಚಿತ್ರದಲ್ಲಿ ಶರಣ್‌ ಗೆಟಪ್‌ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಿಯೇ ಅಂತಿಮಗೊಳಿಸಿದ್ದು. ಈಗ ಎಲ್ಲದಕ್ಕೂ ಉತ್ತಮ ಫ‌ಲ ಸಿಗುತ್ತಿದೆ. ಟ್ರೇಲರ್‌ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ಖುಷಿಯಿಂದ ಹೇಳುತ್ತಾರೆ ತರುಣ್‌.

ಈ ಚಿತ್ರದಲ್ಲಿ ಖೋಖೋ ತರಬೇತುದಾರನಾಗಿ ಕಾಣಿಸಿಕೊಂಡಿರುವ ಶರಣ್‌ ಜೊತೆ ಹತ್ತಾರು ಹುಡುಗರ ಬಳಗವಿದೆ. ಒಬ್ಬೊಬ್ಬರದ್ದೂ ಒಂದೊಂದು ಮ್ಯಾನರಿಸಂ. ಏನೂ ಗೊತ್ತಿರದ ಅವರಿಗೆ ಖೋಖೋ ಕಲಿಸುವ ಚಾಲೆಂಜ್‌ ಶರಣ್‌ ಅವರದ್ದು… ಈ ಹಿನ್ನೆಲೆಯಲ್ಲಿ ಚಿತ್ರ ಸಾಗುತ್ತದೆ. ಜಡೇಶ್‌ ನಿರ್ದೇಶನವಿರುವ ಈ ಚಿತ್ರದಲ್ಲಿ ಶರಣ್‌ ಜೋಡಿಯಾಗಿ ನಿಶ್ವಿ‌ಕಾ ನಾಯ್ಡು ಕಾಣಿಸಿಕೊಂಡಿದ್ದು, ದತ್ತಣ್ಣ ಪ್ರಮುಖ ಪಾತ್ರದಲ್ಲಿದ್ದಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next