Advertisement

Tarini Movie: ಮನಮುಟ್ಟುವ ತಾರಿಣಿ ಸಂದೇಶ

01:34 PM Mar 31, 2024 | Team Udayavani |

ಮೊದಲೆಲ್ಲ ಮಗು ಹುಟ್ಟಿದ ನಂತರ ಅದು ಗಂಡೋ, ಹೆಣ್ಣೋ ಎಂಬುದು ಅದನ್ನು ಹೆತ್ತವರಿಗೆ, ಮನೆಯವ­ರಿಗೆ, ಸಮಾಜಕ್ಕೆ ಗೊತ್ತಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ತಂತ್ರಜ್ಞಾನ ನಮ್ಮ ಊಹೆಗೂ ನಿಲುಕದ ರೀತಿ ಮುಂದುವರೆದಿದೆ. ಭ್ರೂಣವೊಂದು ತಾಯಿಯ ಗರ್ಭದಲ್ಲಿರುವಾಗಲೇ ಅದು ಗಂಡೋ, ಹೆಣ್ಣೋ ಎಂಬುದು ಕ್ಷಣ ಮಾತ್ರದಲ್‌ ಸ್ಕ್ಯಾನಿಂಗ್‌ನಿಂದ ಗೊತ್ತಾಗಿ ಬಿಡುತ್ತದೆ. ಕೇವಲ ಸ್ಕ್ಯಾನಿಂಗ್‌ ವರದಿಯಿಂದಲೇ ಆ ಭ್ರೂಣದ ತಂದೆ-ತಾಯಿ ಎನಿಸಿಕೊಂಡವರು, ಅದನ್ನು ಹೆರಬೇಕಾ? ಭೂಮಿಗೆ ತರಬೇಕಾ? ಅಥವಾ ಬೇಡವಾ? ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಸಮಾಜಕ್ಕೆ ವರವಾಗಬೇಕಾಗ ಸ್ಕ್ಯಾನಿಂಗ್‌ ಸೆಂಟರ್‌ಗಳು ಸಮಾಜಕ್ಕೆ ಮಾರಕವಾಗಲು ಪರಿಣಮಿಸುತ್ತಿದೆ. ಇದೇ ವಿಷಯವನ್ನು ತೆರೆಮೇಲೆ ಹೇಳಿರುವ ಸಿನಿಮಾ “ತಾರಿಣಿ’.

Advertisement

ಗರ್ಭದಲ್ಲಿರುವ ಭ್ರೂಣದ ಲಿಂಗ ಪತ್ತೆಗಾಗಿ ತನ್ನ ಪತ್ನಿಯನ್ನು ಸ್ಕ್ಯಾನಿಂಗ್‌ ಸೆಂಟರಿಗೆ ಕರೆದುಕೊಂಡು ಬರುವ ಪತಿ, ತನಗೆ ಹುಟ್ಟುವುದು ಹೆಣ್ಣು ಮಗು ಎಂದು ಗೊತ್ತಾಗುತ್ತಿದ್ದಂತೆ, ಅದನ್ನು ಗರ್ಭದಲ್ಲೇ ತೆಗೆಸುವ ಸಾಹಸಕ್ಕೆ ಮುಂದಾಗುತ್ತಾನೆ. ಆದರೆ ತನ್ನ ಗರ್ಭದಲ್ಲಿರುವ ಹೆಣ್ಣು ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದ ಪತ್ನಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾಳಾ? ಹೆಣ್ಣು ಮಗುವನ್ನು ಉಳಿಸಿಕೊಳ್ಳಲು ತಾಯಿಯೊಬ್ಬಳ ಹೋರಾಟ ಹೇಗಿರುತ್ತದೆ ಎಂಬುದೇ “ತಾರಿಣಿ’ ಸಿನಿಮಾದ ಕಥಾಹಂದರ.

ಇತ್ತೀಚೆಗಷ್ಟೇ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಹೆಣ್ಣುಭ್ರೂಣ ಹತ್ಯೆಯ ವಿಷಯವನ್ನು ಇಟ್ಟುಕೊಂಡು ಅದನ್ನು ಚಿತ್ರರೂಪದಲ್ಲಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. ನಮ್ಮ ಸುತ್ತಮುತ್ತಲಿನ ವಿಷಯವನ್ನೇ ನೈಜವಾಗಿ ತೆರೆಮೇಲೆ “ತಾರಿಣಿ’ ಮೂಲಕ ಹೇಳುವ ನಿರ್ದೇಶಕರ ಪ್ರಯತ್ನ ಬಹುತೇಕ ಸಫ‌ಲವಾಗಿದೆ. ಯಾವುದೇ ವೈಭವೀಕರಣವಿಲ್ಲದೆ, ಸಿದ್ಧ ಸೂತ್ರಗಳನ್ನು ಬದಿಗಿಟ್ಟು ತೆರೆಗೆ ಬಂದಿರುವ “ತಾರಿಣಿ’ ನಿಧಾನವಾಗಿ ನೋಡುಗರನ್ನು ಆವರಿಸಿಕೊಳ್ಳುತ್ತಾಳೆ.

ಇನ್ನು “ತಾರಿಣಿ’ಯನ್ನು ಗರ್ಭದಲ್ಲಿ ಹೊತ್ತ ತಾಯಿಯ ಪಾತ್ರದಲ್ಲಿ ಇಡೀ ಸಿನಿಮಾವನ್ನು ಆರಂಭದಿಂದ ಅಂತ್ಯದವರೆಗೂ ಯಶಸ್ವಿಯಾಗಿ ಹೊತ್ತು ಸಾಗಿದ್ದಾರೆ ನಟಿ ಮಮತಾ ರಾಹುತ್‌. ಉಳಿದಂತೆ ರೋಹಿತ್‌, ಸುಧಾ ಪ್ರಸನ್ನ, ಭವಾನಿ ಪ್ರಕಾಶ್‌, ಡಾ. ಸುರೇಶ್‌ ಕೋಟ್ಯಾನ್‌, ಬೇಬಿ ನಿಶಿತಾ, ಸುಧಾ ಪ್ರಸನ್ನ ಮೊದಲಾದ ಕಲಾವಿದರದ್ದು ಅಚ್ಚುಕಟ್ಟಾದ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಸಿನಿಮಾದ ಒಂದು ಹಾಡು, ಹಿನ್ನೆಲೆ ಸಂಗೀತ ತಾಂತ್ರಿಕವಾಗಿ ಗಮನ ಸೆಳೆಯುವಂತಿದೆ.

ಆರ್‌.ಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next