ಚಿತ್ರದುರ್ಗ: ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಡಿ. 14 ರಂದು ನಾಲ್ಕನೇ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ. ವಟವಟಿ ತಿಳಿಸಿದರು.
ಶುಕ್ರವಾರ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದಿಂದ ಲೋಕ ಅದಾಲತ್ ಆಯೋಜಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವವರು ಬಂದು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಕ್ಟೋಬರ್ ಅಂತ್ಯಕ್ಕೆ ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ 14,382 ಸಿವಿಲ್ ಮತ್ತು 14,600 ಕ್ರಿಮಿನಲ್ ಸೇರಿ ಒಟ್ಟು 28,982 ಪ್ರಕರಣಗಳು ಬಾಕಿ ಇವೆ. ಈ ಪೈಕಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯಂತೆ ಶೇ. 15 ರಷ್ಟು ಪ್ರಕರಣಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಆದರೆ ಜಿಲ್ಲೆಯಲ್ಲಿ ಶೇ. 17.67 ರಷ್ಟು ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಂದರೆ 5,701 ವ್ಯಾಜ್ಯ ಪೂರ್ಣ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ವಿಜಯ ಬ್ಯಾಂಕ್‌ಗೆ ಸಂಬಂ ಧಿಸಿದ 15 ವರ್ಷದ ಹಿಂದಿನ 1.79 ಲಕ್ಷ ರೂ. ಸಾಲದ ಪ್ರಕರಣವನ್ನು 42 ಸಾವಿರಕ್ಕೆ ಇತ್ಯರ್ಥ ಮಾಡಲಾಗಿದೆ. ಅದೇ ರೀತಿ ಎಸ್‌ಬಿಐ ಬ್ಯಾಂಕಿನ 2.58 ಲಕ್ಷ ರೂ. ಸಾಲದ ಪ್ರಕರಣದ ಬಡ್ಡಿ ಎಲ್ಲವನ್ನೂ ಬಿಟ್ಟು 1.10 ಲಕ್ಷ ರೂ.ಗೆ ಇತ್ಯರ್ಥಪಡಿಸಲಾಗಿದೆ. ಇದೇ ರೀತಿಯ 15 ಪ್ರಕರಣಗಳನ್ನು ಎಸ್‌ಬಿಐಗೆ ಸಂಬಂಧಿಸಿದಂತೆ ಇತ್ಯರ್ಥಪಡಿಸಲಾಗಿದೆ. ಶೇ. 50ರಷ್ಟು ಸಾಲದ ಮೊತ್ತಕ್ಕಿಂತ ಕಡಿಮೆಗೆ ಇತ್ಯರ್ಥವಾಗಿವೆ ಎಂದರು.
ನ್ಯಾಯಾಧಿಧೀಶರಾದ ಬಸವರಾಜ್ ಚೇಗರೆಡ್ಡಿ, ಬನ್ನಿಕಟ್ಟೆ ಹನುಮಂತಪ್ಪ, ಜಿತೇಂದ್ರನಾಥ್, ಶಿವಣ್ಣ, ದೇವರಾಜ್, ವಕೀಲರ ಸಂಘದ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಅನಿಲ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.