Advertisement

ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ

12:24 PM Jul 03, 2019 | Team Udayavani |

ತರೀಕೆರೆ: ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮಾನಸಿ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯಿಂದ ಕಡೂರು ಪಟ್ಟಣಕ್ಕೆ ಕೊಂಡೊಯ್ಯಲಾಗುತ್ತಿರುವ ಪೈಪ್‌ಲೈನ್‌ಮೂಲಕ ಕೆರೆಗೆ ನೀರು ಹರಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿ, ನೀರು ಪೂರೈಕೆಗೆಕ್ರಮ ಕೈಗೊಳ್ಳಬೇಕೆಂದು ಶಾಸಕ ಡಿ.ಎಸ್‌.ಸುರೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪುರಸಭೆ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಕಾರಣ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ, ಜಲಾಶಯದ ನೀರಿನ ಮಟ್ಟ ಡೆಡ್‌ ಸ್ಟೋರೇಜ್‌ಗಿಂತ ಕಡಿಮೆ ಇದೆ. ಇಂತಹ ಸಮಯದಲ್ಲಿ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ. ಮಾನಸಿ ಕೆರೆಯಲ್ಲಿ ಈಗಿರುವ ನೀರಿನ ಸಂಗ್ರಹ ಕೆಲವು ದಿನಗಳಿಗೆ ಮಾತ್ರ ಸಾಕಾಗುತ್ತದೆ. ಆದ್ದರಿಂದ, ಕೂಡಲೇ ಮಾನಸಿ ಕೆರೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ತಾವು ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

2017ರಲ್ಲೂ ನೀರಿನ ಸಮಸ್ಯೆ ಉಂಟಾದಾಗ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದರು. ಮುಂಬರುವ ದಿನಗಳಲ್ಲೂ ನೀರಿನ ಸಮಸ್ಯೆ ಉದ್ಭವವಾಗಬಹುದು. ಹಾಗಾಗಿ, ಅಂತಹ ಸಮಯದಲ್ಲಿ ನೀರು ಪಡೆಯಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವ ಬದಲು, ಅಂತಹ ವಾತಾವರಣ ಸೃಷ್ಟಿಯಾದಾಗ ನೀರು ಹರಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕು. ಕೆರೆಗೆ ನೀರು ಹರಿಸುವಾಗ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು.ನೀರು ಸರಬರಾಜಿಗೆ ತಗುಲುವ ವೆಚ್ಚದ ಜವಾಬ್ದಾರಿಯನ್ನು ಕಡೂರು ಮತ್ತು ಬೀರೂರು ಪುರಸಭೆಗೆ ನೀಡಬೇಕು ಎಂದು ಮುಖ್ಯಾಧಿಕಾರಿ ಟಿ.ಎಸ್‌.ಗಿರೀಶ್‌ ಅವರಿಗೆ ಸೂಚನೆ ನೀಡಿದರು.

ಈಗಿರುವ ವ್ಯವಸ್ಥೆಯಲ್ಲಿ 6ದಿನಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕೊಳವೆಬಾವಿಗಳಿಂದ ನೀರು ಪೂರೈಕೆ ಮಾಡುತ್ತಿರುವುದರಿಂದ ಸಮಸ್ಯೆ ಉಲ್ಬಣ ವಾಗಿಲ್ಲ. ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ 4ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕಾಗಿದೆ. ಮತ್ತೂಮ್ಮೆ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸುವಂತೆ ಸಭೆಯಲ್ಲಿದ್ದ ಜಲಮಂಡಳಿ ಎಇಇ ಮಾರುತಿ ಅವರಿಗೆ ತಿಳಿಸಿದರು.

ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಬಿ.ಆರ್‌.ರೂಪಾ ಮಾತನಾಡಿ, ಕಿರು ನೀರು ಸರಬರಾಜು ಘಟಕದಿಂದ ನೀರು ವ್ಯರ್ಥವಾಗಿ ಚರಂಡಿಗೆ ಹರಿದು ಹೋಗುತ್ತಿದೆ. ಘಟಕಗಳಿಗೆ ಅಗತ್ಯವಿದ್ದಷ್ಟು ಮಾತ್ರ ನೀರು ತುಂಬಿಸಬೇಕು. ನೀರನ್ನು ವ್ಯರ್ಥ ಮಾಡಬಾರದು. ಅಗತ್ಯವಿರುವ ಕಡೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಬೇಕೆಂದು ಇಂಜಿನಿಯರ್‌ ಬಿಂದು ಅವರಿಗೆ ಸೂಚನೆ ನೀಡಿದರು.

Advertisement

ಬಾಪೂಜಿ ನಗರದಲ್ಲಿ 12ವರ್ಷಗಳ ಹಿಂದೆ ಡಾ.ಬಾಬುಜಗಜೀವನರಾಮ್‌ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಕಟ್ಟಡಕ್ಕೆ ತಳಪಾಯ ಮತ್ತು ಪಿಲ್ಲರ್‌ಗಳನ್ನು ಹಾಕಲಾಗಿದೆ. ನಂತರ ಕಾಮಗಾರಿ ಕುಂಠಿತವಾಗಿದ್ದು ಏಕೆ? ಇದಕ್ಕೆ ಸಂಬಂಧಿಸಿದ ಕಡತಗಳು ಎಲ್ಲಿವೇ? ಅನುದಾನವನ್ನು ಕ್ರೋಢೀಕರಿಸದೇ ಏಕೆ ಕಟ್ಟಡ ಕಟ್ಟಲು ಅನುಮತಿ ನೀಡಿದಿರಿ ಎಂದು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡವನ್ನು ಪುರಸಭೆ ಆರಂಭಸಿದೆ. ಪ್ರತಿವರ್ಷ ಅನುದಾನ ನೀಡಿದ್ದರೆ ಕಟ್ಟಡ ಪೂರ್ಣಗೊಳ್ಳುತ್ತಿತ್ತು. ಪುರಸಭೆಯ ಅನುದಾನದಿಂದ ಕಟ್ಟಡ ಕಟ್ಟಿಸಬೇಕೆಂದು ಸೂಚನೆ ನೀಡಿದರು.

ಜನರ ಸಮಸ್ಯೆ ಅರಿಯಲು ಪಟ್ಟಣದ ವಾರ್ಡ್‌ಗಳಲ್ಲಿ ಅಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಲಾಗುವುದು. ಸ್ಥಳದಲ್ಲಿಯೇ ಜನರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ವಾರ್ಡ್‌ ಸಭೆ ನಡೆಸಲು ದಿನಾಂಕ ನಿಗದಿಪಡಿಸಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ದೇವರಾಜ್‌, ನೀರು ಸರಬರಾಜು ಮಂಡಳಿ ಎಇಇ ಭಾಸ್ಕರ್‌, ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next