Advertisement

ಜಮ್ಮು-ಕಾಶ್ಮೀರದಲ್ಲೀಗ ಟಾರ್ಗೆಟ್‌ ಕಿಲ್ಲಿಂಗ್‌

12:42 AM Oct 20, 2021 | Team Udayavani |

ಇನ್ನೇನು ಜಮ್ಮು ಕಾಶ್ಮೀರದಲ್ಲಿ ಎಲ್ಲವೂ ಸರಿಹೋಗುತ್ತಿದೆ ಎನ್ನುವಾಗಲೇ ಭಯೋತ್ಪಾದಕರ ಹೊಸ ಆಟ ಶುರುವಾಗಿದೆ. ಅದೇ “ಟಾರ್ಗೆಟ್‌ ಕಿಲ್ಲಿಂಗ್‌…’. ಕಣಿವೆ ರಾಜ್ಯದಲ್ಲಿರುವ ಅಲ್ಪಸಂಖ್ಯಾಕರನ್ನು ಗುರುತಿಸಿ, ಅವರನ್ನು ಒಂದಷ್ಟು ದಿನ ಫಾಲೋ ಮಾಡಿ ಹತ್ಯೆ ಮಾಡುವುದು. ಇದರಲ್ಲಿ ಪ್ರಮುಖವಾಗಿ ಬೇರೆ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರು, ಕಾಶ್ಮೀರಿ ಪಂಡಿತರು ಮತ್ತು ಬಿಜೆಪಿ ಪರ ಒಲವುಳ್ಳ ಹಾಗೂ ಪೊಲೀಸರಿಗೆ ಬಾತ್ಮೀದಾರರಾಗಿರುವಂಥ ಸ್ಥಳೀಯ ಮುಸ್ಲಿಮರನ್ನು ಗುರುತಿಸಿ ಹತ್ಯೆ ಮಾಡಲಾಗುತ್ತಿದೆ. ವಿಚಿತ್ರವೆಂದರೆ ಈಗ ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆಗಳು ನೇರವಾಗಿ ಪಾಲ್ಗೊಳ್ಳುವುದಕ್ಕಿಂತ ಹೊಸ ಉಗ್ರ ಸಂಘಟನೆಗಳನ್ನು ಕಟ್ಟಿಕೊಂಡು, ಸ್ಥಳೀಯ ಯುವಕನ್ನು ಸೇರ್ಪಡೆ ಮಾಡಿಕೊಂಡು ಈ ಹತ್ಯೆ ನಡೆಸಲಾಗುತ್ತಿದೆ. ಹಾಗಾದರೆ ಈ ಟಾರ್ಗೆಟ್‌ ಕಿಲ್ಲಿಂಗ್‌ ಎಂದರೇನು? ಕಾಶ್ಮೀರದ ಅಲ್ಪಸಂಖ್ಯಾಕರೇ ಏಕೆ ಇವರ ಟಾರ್ಗೆಟ್‌?

Advertisement

ಏನಿದು ಟಾರ್ಗೆಟ್‌ ಕಿಲ್ಲಿಂಗ್‌?
ಉಗ್ರರ ಹೊಸ ಅವತಾರವಿದು. ಮೊದಲಿಗೆ ಸಾಫ್ಟ್ ಟಾರ್ಗೆಟ್‌ ಅನ್ನಿಸಿದವರ ಚಲನವಲನಗಳ ಬಗ್ಗೆ ನಿಗಾ ಇಡುವುದು. ಅಂದರೆ ಎಷ್ಟು ಹೊತ್ತಿಗೆ ಕೆಲಸಕ್ಕೆ ಹೊರಡುತ್ತಾರೆ? ಎಲ್ಲಿಗೆ ಹೋಗುತ್ತಾರೆ ಎಂದೆಲ್ಲ ಮಾಹಿತಿಗಳನ್ನು ತಿಳಿದುಕೊಳ್ಳುವುದು. ಬಳಿಕ ದಾಳಿ ಮಾಡಲು ನಿಖರವಾದ ಸಮಯ ಗುರುತಿಸಿ, ಶೂಟ್‌ ಮಾಡಿ ಹತ್ಯೆ ಮಾಡುವುದು. ಜಮ್ಮು ಕಾಶ್ಮೀರದಲ್ಲೂ ಇದೇ ರೀತಿಯಲ್ಲೇ 11 ನಾಗರಿಕರನ್ನು ಹತ್ಯೆ ಮಾಡಲಾಗಿದೆ.

ನಾಗರಿಕರೇ ಏಕೆ ಟಾರ್ಗೆಟ್‌?
ಭಯೋತ್ಪಾದಕರು ಇದುವರೆಗೆ ಭದ್ರತಾ ಪಡೆಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರು. ಆದರೆ ಭದ್ರತಾ ಪಡೆಗಳು ಮತ್ತು ಪೊಲೀಸರ ಬಳಿ ಶಸ್ತ್ರಾಸ್ತ್ರಗಳು ಇದ್ದಿದ್ದರಿಂದ ಪ್ರತಿ ದಾಳಿ ನಡೆಸಿ ತಮ್ಮನ್ನು ಹತ್ಯೆ ಮಾಡುವ ಭೀತಿಯೂ ಭಯೋತ್ಪಾದಕರಿಗೆ ಇದೆ. ಹೀಗಾಗಿ ಭದ್ರತಾ ಪಡೆಗಳನ್ನು ಎದುರಿಸುವ ಸಾಮರ್ಥ್ಯ ಕಳೆದುಕೊಂಡಿರುವ ಉಗ್ರರು, ಶಸ್ತ್ರಾಸ್ತ್ರ ರಹಿತವಾಗಿರುವ ನಾಗರಿಕರು, ಅದರಲ್ಲೂ ಬೇರೆ ರಾಜ್ಯಗಳಿಂದ ಬಂದವರನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಈ ಮೂಲಕ ಕಣಿವೆ ರಾಜ್ಯದಲ್ಲಿ ನಾವಿನ್ನೂ ಇದ್ದೇವೆ ಎಂಬುದನ್ನು ತೋರಿಸುವುದೂ ಉಗ್ರರ ತಂತ್ರಗಾರಿಕೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಟಾರ್ಗೆಟ್‌ ಕಿಲ್ಲಿಂಗ್‌ ಎಂಬುದು ಉಗ್ರರ ಪಾಲಿಗೆ ಬಹು ಸರಳವಾದ ಕಾರ್ಯಾಚರಣೆ ಮಾರ್ಗವಾಗಿದೆ. ಇಲ್ಲಿ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳೂ ಬೇಕಾಗಿಲ್ಲ.

ಮುಸ್ಲಿಮೇತರರನ್ನು ಗುರುತಿಸಿ ಕೊಲ್ಲಿ
ಇದು ಪಾಕಿಸ್ಥಾನ ಮೂಲಕ ಭಯೋತ್ಪಾದಕ ಸಂಘಟನೆಗಳಿಂದ ಸ್ಥಳೀಯ ಉಗ್ರರಿಗೆ ಬಂದಿರುವ ಸಂದೇಶ. ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿರುವಂತೆ ಕಾಶ್ಮೀರದಲ್ಲಿರುವ ಮುಸ್ಲಿಮೇತರರು ಮತ್ತು ಹೊರಗಿನವರನ್ನು ಹುಡುಕಿ ಕೊಲ್ಲಬೇಕಂತೆ. ಈ ಬಗ್ಗೆ ಭದ್ರತಾ ಪಡೆಗಳ ಮೂಲಗಳೇ ಹೇಳಿವೆ. ಈಗ ಸೇಬುವಿನ ಕೊಯ್ಲು ಕಾಲವಾಗಿರುವುದರಿಂದ ಸುಮಾರು 3 ರಿಂದ 4 ಲಕ್ಷ ಹೊರಗಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರನ್ನು ಹೆಸರಿನ ಮೂಲಕ ಗುರುತಿಸಿ ಹತ್ಯೆ ಮಾಡುವಂತೆ ಸೂಚಿಸಲಾಗಿದೆ. ಇದಕ್ಕೆ ಸ್ಥಳೀಯ ಕೆಲವು ಯುವಕರೂ ಸಹಾಯ ಮಾಡುತ್ತಿದ್ದಾರೆ.

ಹೊಸ ಹೊಸ ಉಗ್ರ ಸಂಘಟನೆಗಳು!
ಸದ್ಯ ಕಣಿವೆ ರಾಜ್ಯದಲ್ಲಿನ ನಾಗರಿಕರ ಹತ್ಯೆ ಹೊಣೆಯನ್ನು ಹಿಂದಿನ ಉಗ್ರ ಸಂಘಟನೆಗಳಾದ ಜೈಷ್‌ ಎ ಮೊಹಮ್ಮದ್‌, ಲಷ್ಕರ್‌ ಎ ತಯ್ಯಬಾನಂಥ ಸಂಘಟನೆಗಳು ಹೊರುತ್ತಿಲ್ಲ. ಇದಕ್ಕೆ ಬದಲಾಗಿ ಇವುಗಳದ್ದೇ ಆದ ದಿ ರೆಸಿಸ್ಟೆನ್ಸ್‌ ಫ್ರಂಟ್‌

Advertisement

(ಟಿಆರ್‌ಎಫ್) ಎಂಬ ಸಂಘಟನೆ ಹೊರುತ್ತಿದೆ. ಈ ಸಂಘಟನೆಯನ್ನು 2019ರಲ್ಲಿ ರಚಿಸಲಾಗಿದೆ. ಇದರಲ್ಲಿ ಎಲ್‌ಇಟಿ, ಜೆಇಎಂ ಮತ್ತು ಹಿಜ್ಬುಲ್‌ ಮುಜಾಹೀದ್ದೀನ್‌ ಸಂಘಟನೆಯ ಉಗ್ರರು ಸೇರಿ ಕಟ್ಟಿಕೊಂಡಿದ್ದಾರೆ. ಇವುಗಳಿಗೆ ಗಡಿಯಾಚೆಗಿನ ಉಗ್ರರು, ಡ್ರೋನ್‌ಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದಾರೆ.

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಏನಿದು ಟಿಆರ್‌ಎಫ್?
ವಿಚಿತ್ರವೆಂದರೆ, ಇದು ತೀರಾ ತರಬೇತಿ ಪಡೆಯದ, ಕಚ್ಚಾ ಸಂಘಟನೆ. ಉಗ್ರರಿಗೆ ನೀಡಿದ ಹಾಗೆ ಇದಕ್ಕೆ ಪಾಕಿಸ್ಥಾನದ ಐಎಸ್‌ಐ ಕಡೆಯಿಂದ ಸರಿಯಾದ ರೀತಿಯಲ್ಲಿ ತರಬೇತಿ ಸಿಕ್ಕಿರುವುದಿಲ್ಲ. ಸ್ಥಳೀಯ ಯುವಕರೂ ಸೇರಿ, ಪಾಕ್‌ನಿಂದ ಒಳನುಸುಳಿರುವವರನ್ನು ಸೇರಿಸಿಕೊಂಡು ಈ ಫ್ರಂಟ್‌ ರೂಪಿಸಲಾಗಿದೆ. ಇವರಿಗೆ ಮಿಲಿಟರಿ ತರಬೇತಿ ಕೊಡುವುದಕ್ಕಿಂತ ಹೆಚ್ಚಾಗಿ, ಶೂಟೌಟ್‌ ಬಗ್ಗೆ ಹೇಳಿಕೊಡಲಾಗುತ್ತದೆ. ಸದ್ಯ ಈ ಉಗ್ರ ಸಂಘಟನೆಗೆ ಸಾಜಿದ್‌ ಸೈಫ‌ುಲ್ಲಾ ಜಲ್‌ ಎಂಬ ಲಷ್ಕರ್‌ ಎ ತಯ್ಯಬಾ ಕಮಾಂಡರ್‌ ಮುಖ್ಯಸ್ಥನಾಗಿದ್ದಾನೆ.

ಅಭಿವೃದ್ಧಿ ಯೋಜನೆಗಳ ಬಗ್ಗೆ ಅಸಹನೆ
ಕೇಂದ್ರ ಸರಕಾರದ ಮೂಲಗಳ ಪ್ರಕಾರ, ನಾಗರಿಕರ ಹತ್ಯೆ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆ ಕೈಗೆತ್ತಿಕೊಂಡಿದೆ. ಎನ್‌ಐಎ ಮೂಲಗಳು ಹೇಳುವಂತೆ ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಭಯೋತ್ಪಾದಕ ಸಂಘಟನೆಗಳಿಗೆ ತೀರಾ ಅಸಹನೆ ಇದೆಯಂತೆ. ಹೀಗಾಗಿಯೇ ಈ ಯೋಜನೆಗಳನ್ನು ಹಳಿತಪ್ಪಿಸುವ ಸಲುವಾಗಿ ನಾಗರಿಕರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ವಿಚಿತ್ರವೆಂದರೆ, ಸೆಪ್ಟಂಬರ್‌ ಕಡೇ ವಾರದಲ್ಲಿ ಉಗ್ರರೇ ಬರೆದಿದ್ದ ಬ್ಲಾಗ್‌ವೊಂದರ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ನಡೆಸಬೇಕಾದ ವಿಧ್ವಂಸಕ ಕೃತ್ಯಗಳ ಬಗ್ಗೆ ವಿವರಣೆ ಕೊಡಲಾಗಿದೆ. ಇದರ ಭಾಗವಾಗಿಯೇ ನಾಗರಿಕರನ್ನು ಹತ್ಯೆ ಮಾಡುವುದು, ಇಲ್ಲಿಗೆ ಹೊರಗಿನಿಂದ ಯಾರೂ ಬರದಂತೆ ತಡೆಯುವುದು ಅವರ ಯೋಜನೆಯಾಗಿದೆ. ಸದ್ಯ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸೂಚನೆ ಮೇರೆಗೆ ಈ ಬ್ಲಾಗ್‌ ಅನ್ನು ತಡೆಹಿಡಿಯಲಾಗಿದೆ.  ಅಲ್ಲದೆ ಬೇರೆ ರಾಜ್ಯಗಳಿಂದ ಉದ್ಯಮಿಗಳು ಬಂದು ಸ್ಥಳೀಯರ ಜತೆ ಸೇರಿ ಇಲ್ಲಿ ಯಾವುದೇ ಕೈಗಾರಿಕೆಗಳು ಅಥವಾ ಉದ್ಯಮಗಳನ್ನು ಸ್ಥಾಪಿಸದಂತೆ ತಡೆಯುವುದೂ ಇದರಲ್ಲಿ ಸೇರಿದೆ. ಅಲ್ಲದೆ ಎನ್‌ಐಎ ಮತ್ತು ಪೊಲೀಸ್‌ ಅಧಿಕಾರಿಗಳನ್ನೂ ಟಾರ್ಗೆಟ್‌ ಮಾಡುವುದು ಅವರ ಪ್ಲಾನ್‌ ಆಗಿದೆ.

ಈ ಯೋಜನೆಗೆ ಪ್ರತಿಯಾಗಿ ಭದ್ರತಾ ಪಡೆಗಳೂ ದಾಳಿ ಮುಂದುವರಿಸಿವೆ. ಕಳೆದ 10 ದಿನಗಳಲ್ಲಿ 13 ಭಯೋತ್ಪಾದಕರನ್ನು ವಿವಿಧ ಎನ್‌ಕೌಂಟರ್‌ಗಳಲ್ಲಿ ಹೊಡೆದುರುಳಿಸಲಾಗಿದೆ. ಅಲ್ಲದೆ ಎನ್‌ಐಎ ಕೂಡ 9 ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸಿದೆ.

ಸ್ಥಳೀಯ ನಾಗರಿಕರ ಆಕ್ರೋಶ
ಕಾಶ್ಮೀರದಲ್ಲಿ ಈ ರೀತಿ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಉಗ್ರರ ವಿರುದ್ಧ ಕಣಿವೆ ರಾಜ್ಯದಲ್ಲಿ ತೀವ್ರ ಆಕ್ರೋಶವೂ ವ್ಯಕ್ತವಾಗುತ್ತಿದೆ. ಉಗ್ರಗಾಮಿ ಸಂಘಟನೆಗಳ ವಿರುದ್ಧ ಪ್ರತಿಭಟನೆಗಳೂ ನಡೆದಿವೆ.

ದಾಳಿ Vs ಪ್ರತಿ ದಾಳಿ

ಸ್ಥಳೀಯರ ಮೇಲೆ ದಾಳಿ ಹೆಚ್ಚಾಗುತ್ತಿದ್ದಂತೆ ಭದ್ರತಾ ಪಡೆಗಳು ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡಲು ಶುರು ಮಾಡಿದ್ದಾರೆ. ಪೂಂಛ… ಮತ್ತು ರಜೌರಿ ವಲಯದಲ್ಲಿ ಎನ್‌ಕೌಂಟರ್‌ ನಡೆಯುತ್ತಿದೆ. ಭದ್ರತಾ ಪಡೆಯ ಒಂಭತ್ತು ಯೋಧರೂ ಹುತಾತ್ಮರಾಗಿದ್ದಾರೆ. ಈ ಕಾರ್ಯಾಚರಣೆ ಬಗ್ಗೆ ಇನ್ನೊಂದು ಉಗ್ರ ಸಂಘಟನೆಯಾದ ಪೀಪಲ್‌ ಆ್ಯಂಟಿ ಫ್ಯಾಸಿಸ್ಟ್‌ ಫ್ರಂಟ್‌(ಪಿಎಎಫ್ಎಫ್)ನ ಉಗ್ರನೊಬ್ಬ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾನೆ. ಇದರಲ್ಲಿ ಯೋಧರ ಮೇಲಿನ ದಾಳಿಯ ಹೊಣೆ ಹೊತ್ತಿರುವ  ಈ ಸಂಘಟನೆ, ಸೇನೆಯ ಚಲನವಲನಗಳನ್ನು ಟ್ರ್ಯಾಕ್‌ ಮಾಡುವುದು, ದಾಳಿ ಮಾಡುವ ತಂತ್ರಗಾರಿಕೆ ಬಗ್ಗೆ ಹೇಳಿಕೊಂಡಿದ್ದಾನೆ.

ಆತಂಕದಲ್ಲಿ ವಲಸೆ ಕಾರ್ಮಿಕರು
ಕಣಿವೆ ರಾಜ್ಯದಲ್ಲಿ ಹೊರಗಿನವರ ಮೇಲೆ ದಾಳಿ ಹೆಚ್ಚಾಗುತ್ತಿದ್ದಂತೆ ಬಿಹಾರದಿಂದ ಬಂದವರೂ ಸೇರಿ ವಿವಿಧ ವಲಸೆ ಕಾರ್ಮಿಕರು ರಾಜ್ಯ ಬಿಟ್ಟು ತೆರಳಲು ಸಿದ್ಧರಾಗುತ್ತಿದ್ದಾರೆ. ಈಗಾಗಲೇ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ತಮ್ಮ ಕ್ಯಾಂಪ್‌ಗಳಲ್ಲಿ ವಲಸೆ ಕಾರ್ಮಿಕರಿಗೆ ಆಸರೆ ಕೊಟ್ಟಿವೆ. ಆದರೂ ಪ್ರತಿದಿನವೂ ಈ ಕಾರ್ಮಿಕರಿಗೆ ರಕ್ಷಣೆ ಕೊಡುವುದು ಆಗದ ಕೆಲಸ. ಅಲ್ಲದೆ ಈಗ ಸೇಬು ಕಟಾವಿನ ಕೆಲಸವೂ ಜೋರಾಗಿದ್ದು, ಸ್ಥಳೀಯರಿಗೆ ಹೊರಗಿನ ಕಾರ್ಮಿಕರ ಅಗತ್ಯವೂ ಹೆಚ್ಚಾಗಿದೆ. ಇಷ್ಟೆಲ್ಲ ಸಂಗತಿಗಳಿದ್ದರೂ ವಲಸೆ ಕಾರ್ಮಿಕರು ಜೀವ ಉಳಿಸಿಕೊಳ್ಳುವ ಸಲುವಾಗಿ ರಾಜ್ಯ ಬಿಟ್ಟು ಹೊರಡಲು ನಿಂತಿದ್ದಾರೆ.

1990ರಿಂದಲೂ ಹಿಂದೂ, ಸಿಕ್ಖರೇ ಟಾರ್ಗೆಟ್‌
ಇತಿಹಾಸವನ್ನು ಒಮ್ಮೆ ಗಮನಿಸಿದರೆ, 1990ರಿಂದಲೂ ಇಲ್ಲಿವರೆಗೆ ಹಿಂದೂಗಳು ಮತ್ತು ಸಿಕ್ಖರೇ ಕಾಶ್ಮೀರದಲ್ಲಿ ಟಾರ್ಗೆಟ್‌ ಆಗಿರುವುದು ಕಂಡಿದೆ. 2000ನೇ ಇಸವಿಯಲ್ಲಿ ಸುಮಾರು 34 ಸಿಕ್ಖರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗಿತ್ತು. ಇದು ಅತ್ಯಂತ ದೊಡ್ಡ ನರಮೇಧವಾಗಿದೆ. ಇದಾದ ಅನಂತರದಲ್ಲಿ 12ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನೂ ಹತ್ಯೆ ಮಾಡಲಾಗಿದೆ.

ಅಕ್ಟೋಬರ್‌ನಲ್ಲೇ 11 ಮಂದಿ ಹತ್ಯೆ
ಅ.2         : ಮೊಹಮ್ಮದ್‌ ಶಫಿ ದರ್‌ – ಭದ್ರತಾ ಪಡೆಗಳ ಜತೆಗಿನ ನಂಟು
ಅ.2         : ಮಾಜಿದ್‌ ಅಹ್ಮದ್‌ ಗೋಜ್ರಿ – ಭದ್ರತಾ ಪಡೆಗಳಿಗೆ ಸಹಾಯ
ಅ.5         : ಮಖಾನ್‌ ಲಾಲ್‌ ಬಿಂದ್ರೂ – ಕಾಶ್ಮೀರಿ ಪಂಡಿತ ಮತ್ತು ಫಾರ್ಮಾಸಿಸ್ಟ್‌
ಅ.5         : ವೀರೇಂದರ್‌ ಪಾಸ್ವಾನ್‌ – ಬೀದಿ ಬದಿ ವ್ಯಾಪಾರಿ
ಅ.5         : ಮೊಹಮ್ಮದ್‌ ಶಫಿ ಲೋನ್‌ – ಟ್ಯಾಕ್ಸಿ ಸ್ಟಾಂಡ್‌ನ‌ ಅಧ್ಯಕ್ಷ
ಅ.7         : ಸೂಪಿಂದರ್‌ ಕೌರ್‌ – ಸರಕಾರಿ ಶಾಲೆಯ ಪ್ರಾಂಶುಪಾಲೆ
ಅ.7         : ದೀಪಕ್‌ ಚಾಂದ್‌ – ಕೌರ್‌ ಅವರ ಶಾಲೆಯ ಶಿಕ್ಷಕ
ಅ.16       : ಸಾಗೀರ್‌ ಅಹ್ಮದ್‌ – ಉತ್ತರ ಪ್ರದೇಶ
ಅ.16       : ಅರವಿಂದ್‌ ಕುಮಾರ್‌ ಶಾ – ಬಿಹಾರ ಮೂಲದ‌ ಗೋಲ್‌ಗಪ್ಪ ವ್ಯಾಪಾರಿ
ಅ. 17      : ರಾಜಾ ರೇಶ್‌ ದೇವ್‌ – ಬಿಹಾರ ಮೂಲದ ಕಾರ್ಮಿಕ
ಅ.17       : ಜೋಗಿಂದರ್‌ ರೇಶ್‌ ದೇವ್‌ – ಬಿಹಾರ ಮೂಲದ ಕಾರ್ಮಿಕ

Advertisement

Udayavani is now on Telegram. Click here to join our channel and stay updated with the latest news.

Next