Advertisement

ಮುಂಬಯಿ ದಾಳಿ ವೇಳೆ ಟಾರ್ಗೆಟ್‌ ಹಿಂದೂ

08:48 AM Feb 20, 2020 | Team Udayavani |

ಮುಂಬಯಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ 2008ರ ನವೆಂಬರ್‌ 26ರ ಮುಂಬಯಿ ದಾಳಿ ಪ್ರಕರಣದಲ್ಲಿ ಹಿಂದೂಗಳನ್ನೇ ಸಿಕ್ಕಿ ಹಾಕಿಸಲು ಪಾಕಿಸ್ಥಾನದ ಐಎಸ್‌ಐ ಮತ್ತು ಲಷ್ಕರ್‌- ಎ-ತಯ್ಯಬಾ ವ್ಯವಸ್ಥಿತವಾಗಿ ಸಂಚು ರೂಪಿಸಿತ್ತು…!

Advertisement

ಇದು ಮುಂಬಯಿ ಮಹಾನಗರದ ನಿವೃತ್ತ ಪೊಲೀಸ್‌ ಆಯುಕ್ತ ರಾಕೇಶ್‌ ಮರಿಯಾ ಬಹಿರಂಗಗೊಳಿಸಿದ ಆಘಾತಕಾರಿ ಮಾಹಿತಿ. ಒಂದು ವೇಳೆ ಈ ದಾಳಿ ವೇಳೆ ಅಜ್ಮಲ್‌ ಕಸಬ್‌ ಏನಾದರೂ ಜೀವಂತವಾಗಿ ಸಿಗದಿದ್ದರೆ, ಮುಂಬಯಿ ದಾಳಿಗೆ ಹಿಂದೂ ಉಗ್ರರೇ ಕಾರಣ ಎಂದು ಬಿಂಬಿಸಲಾಗುತ್ತಿತ್ತು ಎಂದು ರಾಕೇಶ್‌ ಮರಿಯಾ ಹೇಳಿಕೊಂಡಿದ್ದಾರೆ. 1993ರ ಸರಣಿ ಸ್ಫೋಟ, ಮುಂಬಯಿ ದಾಳಿ, ಶೀನಾ ಬೋರಾ ಸಹಿತ ಪ್ರಮುಖ ಪ್ರಕರಣಗಳ ತನಿಖೆಯ ನೇತೃತ್ವ ವಹಿಸಿಕೊಂಡಿದ್ದ ರಾಕೇಶ್‌ ಮರಿಯಾ ಅವರು, ಈಗ “ಲೆಟ್‌ ಮಿ ಸೇ ಇಟ್‌ ನೌ’ ಎಂಬ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಈ ಎಲ್ಲ ಸಂಗತಿಗಳಿವೆ.

ಬೆಂಗಳೂರು ನಂಟು!
ವಿಚಿತ್ರವೆಂದರೆ ಮುಂಬಯಿ ದಾಳಿಗೂ ಬೆಂಗಳೂರಿಗೂ ನಂಟು ಹಾಕಲು ಐಎಸ್‌ಐ ಮತ್ತು ಲಷ್ಕರ್‌ ಸಂಘಟನೆಗಳು ಸಂಚು ರೂಪಿಸಿದ್ದವು. ಹೀಗಾಗಿಯೇ ಭಾರತದೊಳಗೆ ನುಸುಳಿದ್ದ ಉಗ್ರರು ನಕಲಿ ವಿಳಾಸ ಇರಿಸಿಕೊಂಡು ಬಂದಿದ್ದರು. ಅದರಲ್ಲಿ ಅಜ್ಮಲ್‌ ಕಸಬ್‌ ವಿಳಾಸ ಬೆಂಗಳೂರಿನದ್ದಾಗಿತ್ತು.
ಅಂದರೆ, ಸಮೀರ್‌ ದಿನೇಶ್‌ ಚೌಧರಿ, ಅರುಣೋದಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜು, ಬೆಂಗಳೂರಿನ ವಿಳಾಸ ನೀಡಲಾಗಿತ್ತು. ಜತೆಗೆ ಕಸಬ್‌ ಹಿಂದೂ ಎಂದು ನಿರೂಪಿಸುವ ಸಲುವಾಗಿ ಆತನ ಕೈಗೆ ಕೆಂಪುದಾರವೊಂದನ್ನೂ ಕಟ್ಟಲಾಗಿತ್ತು ಎಂಬುದನ್ನೂ ರಾಕೇಶ್‌ ಮರಿಯಾ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ಸಂಚು ವಿಫ‌ಲ
ಸಂಚಿನ ಪ್ರಕಾರ, ದಾಳಿಯಾದ ಮೇಲೆ ಈ ಉಗ್ರರ ಹಿನ್ನೆಲೆ ಪರೀಕ್ಷಿಸಲಾಗುತ್ತದೆ. ಆಗ ಇವರ ಹಿಂದೂ ಗುರುತು ಸಿಕ್ಕಿ, ಎಲ್ಲ ಸುದ್ದಿವಾಹಿನಿಗಳು, ಪ್ರಮುಖ ಪತ್ರಕರ್ತರು ಬೆಂಗಳೂರಿನ ವಿಳಾಸಕ್ಕೆ ಹೋಗಿ ಸಂದರ್ಶನ ಮಾಡುತ್ತಾರೆ. ಆಗ ಎಲ್ಲೆಡೆ ಹಿಂದೂ ಉಗ್ರರಿಂದ ಮುಂಬಯಿ ದಾಳಿ ಎಂಬ ಸುದ್ದಿ ಬರುತ್ತದೆ ಎಂದೇ ಪಾಕಿಸ್ಥಾನದ ಐಎಸ್‌ಐ ಮತ್ತು ಎಲ್‌ಇಟಿ ಅಂದು ಕೊಂಡಿದ್ದವು.

ಆದರೆ, ಆಗಿದ್ದೇ ಬೇರೆ. ಅಜ್ಮಲ್‌ ಕಸಬ್‌ನನ್ನು ಜೀವಂತವಾಗಿ ಹಿಡಿದ ಮೇಲೆ ಎಲ್ಲವೂ ಬದಲಾಯಿತು.

Advertisement

ಆತ ಬೆಂಗಳೂರು ಮೂಲದವನಲ್ಲ, ಬದಲಾಗಿ ಪಾಕ್‌ ಮೂಲದವನು ಎಂಬುದು ಗೊತ್ತಾಯಿತು.

ಮಸೀದಿಗಳಿಗೆ ಬೀಗ
ಕಸಬ್‌ ಪ್ರಕಾರ, ಭಾರತದಲ್ಲಿ ಮಸೀದಿಗಳಿಗೆ ಜಾಗವೇ ಇಲ್ಲ. ಇದ್ದ ಎಲ್ಲ ಮಸೀದಿಗಳಿಗೆ ಬೀಗ ಹಾಕಲಾಗಿದೆ. ನಮಾಜ್‌ಗೆ ಅವಕಾಶವೇ ಇಲ್ಲ. ಈ ರೀತಿ ತರಬೇತುದಾರರು ಆತನ ತಲೆಗೆ ತುಂಬಿಸಿ ಕಳುಹಿಸಿದ್ದರು. ಆದರೆ, ಕ್ರೈಂ ಬ್ರಾಂಚ್‌ನ ಜೈಲಿನಲ್ಲಿದ್ದಾಗ ದಿನಕ್ಕೆ ಐದು ಬಾರಿ ಆಜಾನ್‌ ಶಬ್ದ ಕೇಳುತ್ತಿದ್ದ ಕಸಬ್‌ಗ ಅಚ್ಚರಿಯುಂಟಾಗಿತ್ತು. ಒಮ್ಮೆ ಮಸೀದಿಯನ್ನು ನೋಡಲೂ ಅಧಿಕಾರಿ ಜತೆ ಕಸಬ್‌ನನ್ನು ಹೊರಗೆ ಕಳುಹಿಸಲಾಗಿತ್ತು.

ಹಣಕ್ಕಾಗಿ ಕೆಲಸ
ಲಷ್ಕರ್‌ ಗುಂಪಿಗೆ ಕಸಬ್‌ ಸೇರಿಕೊಂಡಿದ್ದೇ ಹಣಕ್ಕಾಗಿ. ತನ್ನಿಂದ ದರೋಡೆ, ಕಳ್ಳತನದಂಥ ಕೆಲಸ ಮಾಡಿಸಬಹುದು ಎಂದು ಆತ ಅಂದುಕೊಂಡಿದ್ದನಂತೆ. ಭಾರತಕ್ಕೆ ಕಳುಹಿಸುವ ಮೊದಲು ಕುಟುಂಬದ ಜತೆ ಕಳೆಯಲು ಒಂದು ವಾರ ರಜೆ ಮತ್ತು 1,25,000 ರೂ. ನೀಡಲಾಗಿತ್ತಂತೆ. ಇದನ್ನು ಕಸಬ್‌ ತನ್ನ ಸಹೋದರಿಯ ವಿವಾಹಕ್ಕೆ ಬಳಸಿದ್ದ ಎಂದು ರಾಕೇಶ್‌ ಮರಿಯಾ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next