Advertisement

Forest Department; 2.43 ಲಕ್ಷ ಸಸಿಗಳ ವಿತರಣೆ ಗುರಿ

02:28 PM Jun 07, 2023 | Team Udayavani |

ಕುಂದಾಪುರ: ಕುಂದಾಪುರ ಅರಣ್ಯ ಉಪ ವಿಭಾಗ ವತಿಯಿಂದ ಹಸುರುಕರಣ ಯೋಜನೆ ಉದ್ದೇಶದಿಂದ ವನ ಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಅರಣ್ಯ ಇಲಾಖೆ 2.43 ಲಕ್ಷ ಸಸಿ ವಿತರಿಸಿ ಅರಣ್ಯ ಬೆಳೆಸುವ ಗುರಿ ಹೊಂದಿದೆ. ಜಿಲ್ಲೆಯ ಎಂಟು ಸಸ್ಯ ಕ್ಷೇತ್ರಗಳಲ್ಲಿ ಸಸಿಗಳು ಸಿದ್ಧವಾಗಿದ್ದು, ಸಾರ್ವ ಜನಿಕರು, ಸಂಘಸಂಸ್ಥೆಯವರು ಭೇಟಿ ನೀಡಿ ಸಸಿ ಗಳನ್ನು ಖರೀದಿಸಬಹುದು.

Advertisement

ಪ್ರತೀ ವರ್ಷದಂತೆ ಈ ಬಾರಿಯೂ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ ಆಚರಿಸಲಿದೆ. ಬಿತ್ತನೆ ಬೀಜ ಜತೆಗೆ ಮನೆಗೊಂದು ಮರವಲ್ಲದೆ ಮಗುವಿಗೊಂದು ಮರ, ಶಾಲೆಗೊಂದು ವನ, ಹಸುರು ಕರ್ನಾಟಕ ಯೋಜನೆಯಡಿ ಸರಕಾರಿ ಸ್ಥಳಗಳಲ್ಲಿ ಸಸಿ ನೆಡಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಮತ್ತಷ್ಟು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸುವುದು ಇಲಾಖೆ ಪಟ್ಟಿಯಲ್ಲಿದೆ.

ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ
8 ಕ್ಷೇತ್ರಗಳಲ್ಲಿ 50ಕ್ಕೂ ಅಧಿಕ ಮಂದಿ ಕಾರ್ಮಿಕರು, ಸಿಬಂದಿ ಸಸ್ಯಗಳನ್ನು ಬೆಳೆಸಲು ಸಾಕಷ್ಟು ತಿಂಗಳಿನಿಂದ ಶ್ರಮಿಸಿದ್ದಾರೆ. ಬೈಂದೂರಿನ ಸರ್ಪನಮನೆ, ಕುಂದಾಪುರ ಮಾವಿನಗುಳಿ, ಶಂಕರನಾರಾಯಣ ಮೆಟ್ಕಲ್‌ಗ‌ುಡ್ಡೆ, ಬ್ರಹ್ಮಾವರ ಬೈಕಾಡಿ, ಹೆಬ್ರಿಯ ಮಡಾಮಕ್ಕಿ, ಕಾರ್ಕಳದ ಶಿರ್ಲಾಲು, ಮೂಡುಬಿದಿರೆ ಕುತ್ಲೂರು, ವೇಣೂರಿನ ಆಳದಂಗಡಿ ಸಸ್ಯಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಿಡಲಾಗಿದ್ದು ಇಲ್ಲಿಗೆ ಸಾರ್ವಜನಿಕರು ಭೇಟಿ ನೀಡಿ ಫಾರಂ ಭರ್ತಿ ಮಾಡಿ ಗಿಡಗಳನ್ನು ಪಡೆಯಬಹುದು.

ಯಾವೆಲ್ಲ ಜಾತಿಯ ಸಸಿಗಳು ?
ನೇರಳೆ, ಬೆತ್ತ, ಸಾಗುವಾನಿ, ರಕ್ತಚಂದನ, ಮಹಾಗನಿ, ದಾಲಿcನ್ನಿ, ಹಲಸು, ಬಾದಾಮಿ, ಕಿರಾಲು ಭೋಗಿ, ರಾಂಪತ್ರೆ, ಹೆಬ್ಬೇವು, ಅಂಟುವಾಳ, ಬೇಂಗ, ಹೊಂಗೆ, ನಾಗಲಿಂಗ ಪುಷ್ಪ, ಹೊಳೆ ದಾಸವಾಳ, ಕಕ್ಕೆ, ಬೀಟೆ, ಮಾವು, ಅಶೋಕ, ಬಿಲ್ವಪತ್ರೆ, ನೆಲ್ಲಿ, ಪುನರ್ಪುಳಿ, ಶ್ರೀಗಂಧ, ಸಂಪಿಗೆ, ರೆಂಜ ಸಹಿತ ವಿವಿಧ ಜಾತಿಯ ಸಸಿಗಳಿವೆ.

ಸಸಿಗಳು ಉಚಿತವಿಲ್ಲ,
ದರ ಏರಿಕೆ ಬಿಸಿ
ಅರಣ್ಯ ಇಲಾಖೆಯು ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವ ಯೋಜನೆ (ಆರ್‌ಎಸ್‌ಪಿಡಿ) ಅಡಿಯಲ್ಲಿ ವಿತರಿಸುವ ಗಿಡಗಳಿಗೆ ಈ ವರ್ಷ ರಿಯಾಯಿತಿ ದರವನ್ನು ಕಡಿತಗೊಳಿಸಿದೆ. ಸಸಿಗಳಿಗೆ ಶೇ. 80ರಿಂದ 90 ಇದ್ದ ರಿಯಾಯಿತಿ ದರವನ್ನು ಈಗ ಶೇ. 50ಕ್ಕೆ ಇಳಿಸಲಾಗಿದೆ. ವಿವಿಧ ಅಳತೆಗೆ ಸಂಬಂಧಿಸಿ 1 ರೂ., 3 ರೂ. ದರಕ್ಕೆ ಸಿಗುತ್ತಿದ್ದ ಗಿಡಗಳಿಗೆ ಇನ್ನೂ 5 ರೂ., 6 ರೂ., 23 ರೂ. ನೀಡಿ ಖರೀದಿಸಬೇಕಿದೆ. ಸಸಿಗಳಿಗೆ ರಿಯಾಯಿತಿ ದರವನ್ನು ಕಡಿಮೆ ಮಾಡಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಈ ಹಿಂದೆ ಅತ್ಯಂತ ಕಡಿಮೆ ದರ ಇದ್ದ ಹಿನ್ನೆಲೆಯಲ್ಲಿ ಕೆಲವು, ಸಂಘ-ಸಂಸ್ಥೆಗಳಿಗೆ ಅರಣ್ಯ ಇಲಾಖೆ ಸಹಕಾರದಲ್ಲಿ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತಿತ್ತು. ಇದೀಗ ದರ ಏರಿಕೆಯಿಂದಾಗಿ ಅದಕ್ಕೂ ಬ್ರೇಕ್‌ ಬಿದ್ದಂತಾಗಿದೆ. ಹಣವನ್ನು ಪಾವತಿಸಿ ಸಸಿ ಖರೀದಿಸಬೇಕು ಎಂದು ಅರಣ್ಯ ಇಲಾಖೆ ಸಿಬಂದಿ, ಅಧಿಕಾರಿಗಳು ಹೇಳಿದ್ದಾರೆ.

Advertisement

ಕುಂದಾಪುರ ಉಪ ವಿಭಾಗ ವ್ಯಾಪ್ತಿ ಎಲ್ಲ ಎಂಟು ನರ್ಸರಿಗಳಲ್ಲಿ ಸಸಿಗಳನ್ನು ಸಿದ್ಧವಾಗಿದೆ. ಈ ವರ್ಷ ಗರಿಷ್ಠ ಪ್ರಮಾಣದಲ್ಲಿ ಹಸುರುಕರಣ ಉದ್ದೇಶದಿಂದ ಸಸಿಗಳನ್ನು ನೆಡಲಾಗುತ್ತದೆ. ಸಾರ್ವಜನಿಕರು ಸಮೀಪದ ಸಸ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಸಸಿಗಳನ್ನು ಪಡೆದುಕೊಳ್ಳಬಹುದು.
-ಉದಯ ನಾಯ್ಕ, ಡಿಎಫ್ಒ, ಅರಣ್ಯ ಇಲಾಖೆ, ಕುಂದಾಪುರ ಉಪ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next