“ತಾರಕಾಸುರ’ ಚಿತ್ರದಲ್ಲಿ ವಿದೇಶಿ ನಟ ಡ್ಯಾನಿ ಸಪಾನಿ ವಿಲನ್ ಆಗಿ ನಟಿಸಿರುವ ವಿಷಯ ಗೊತ್ತೇ ಇದೆ. ಆದರೆ, ಆ ಚಿತ್ರಕ್ಕೆ ಅವರಿಗೆ ಸಂಭಾವನೆ ಕೊಡಲಾಗಿದೆ ಎಂಬ ವಿಷಯ ಇದುವರೆಗೂ ಬಹಿರಂಗವಾಗಿರಲಿಲ್ಲ. ಸುದ್ದಿಯ ಪ್ರಕಾರ, 24 ದಿನಗಳ ಕಾಲ್‌ಶೀಟ್‌ಗೆ ಡ್ಯಾನಿ ಸಪಾನಿಗೆ ಒಂದೂವರೆ ಕೋಟಿ ರೂಪಾಯಿಗಳ ಸಂಭಾವನೆ ನೀಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಚಂದ್ರಶೇಖರ್ ಭಂಡಿಯಪ್ಪ.
ದೊಡ್ಡ ಹೀರೋಗೆ ಕೋಟಿಗಟ್ಟಲೆ ಸಂಭಾವನೆ ಕೊಡುವುದು ಸಹಜ. ಆದರೆ, ವಿಲನ್ ಪಾತ್ರ ಮಾಡುವವರಿಗೆ ಇಷ್ಟೊಂದು ಸಂಭಾವನೆ ಕೊಟ್ಟ ಉದಾಹರಣೆಗಳಿರಲಿಲ್ಲ. ಈಗ ಡ್ಯಾನಿ ಸಪಾನಿ ಅಂಥದ್ದೊಂದು ದಾಖಲೆ ಮಾಡಿದ್ದಾರೆ. ಕನ್ನಡ ಚಿತ್ರವೊಂದರಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಕ್ಕೆ ಅತೀ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “ಡ್ಯಾನಿ ಹಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದವರು.
ಇತ್ತೀಚೆಗೆ ಬಿಡುಗಡೆಯಾದ “ಬ್ಲಾಕ್ ಪ್ಯಾಂಥರ್’ ಎಂಬ ಬ್ಲಾಕ್‌ಬಸ್ಟರ್ ಚಿತ್ರದಲ್ಲೂ ನಟಿಸಿದವರು. ಅಂತಹ ನಟರೊಬ್ಬರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ವಿಲನ್ ಪಾತ್ರ ರಾಕ್ಷಸನಂತ ಬಲಿಷ್ಠವಾದ ಪಾತ್ರ. ಆ ಪಾತ್ರಕ್ಕೆ ಅಷ್ಟೇ ಖಡಕ್ ಆದ ಹಾಗೂ ಕಟ್ಟುಮಸ್ತಾದ ವಿಲನ್ ಬೇಕಿತ್ತು. ಆಗ ನಮ್ಮ ಕಣ್ಣಿಗೆ ಬಿದ್ದಿದ್ದು ಡ್ಯಾನಿ. ಅವರನ್ನು ಸಂಪರ್ಕಿಸಿ, ಅವರ ಪಾತ್ರದ ಬಗ್ಗೆ ವಿವರಿಸಿದಾಗ ಅವರು ಖುಷಿಯಿಂದ ಒಪ್ಪಿಕೊಂಡರು’ ಎನ್ನುತ್ತಾರೆ ಚಂದ್ರಶೇಖರ್ ಭಂಡಿಯಪ್ಪ.
“ತಾರಕಾಸುರ’ದಲ್ಲಿ ವೈಭವ್ ನಾಯಕರಾಗಿ ನಟಿಸುತ್ತಿದ್ದು, ನರಸಿಂಹಲು ಈ ಸಿನಿಮಾದ ನಿರ್ಮಾಪಕರು. “ತಾರಕಾಸುರ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈ ಚಿತ್ರದಲ್ಲಿ ವೈಭವ್ ನಾಯಕರಾಗಿ ನಟಿಸಿದ್ದು, ಅವರ ತಂದೆ ನರಸಿಂಹಲು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇಲ್ಲಿ ಅಳಿವಿನಂಚಿನಲ್ಲಿರುವ ಜಾನಪದ ಕಲೆಯೊಂದರ ಸುತ್ತ ಚಿತ್ರ ಸಾಗಲಿದೆ.
ಹೀರೋ ಇಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಶೇಡ್‌ನಲ್ಲಿ ಗಡ್ಡ ಬಿಟ್ಟು ಸಖತ್ ರಗಡ್ ಆಗಿ ಕಾಣಿಸಿಕೊಂಡರೆ, ಎರಡನೇ ಶೇಡ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು, ಮೂರನೇ ಶೇಡ್‌ನಲ್ಲಿ ಹೈಸ್ಕೂಲ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವೈಭವ್, ಆ ಪಾತ್ರಕ್ಕಾಗಿ 15 ಕೆ.ಜಿ. ತೂಕ ಕೂಡಾ ಇಳಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ನಟಿಸಿದ್ದು, ಮಿಕ್ಕಂತೆ ಸಾಧು ಕೋಕಿಲ, ಕರಿಸುಬ್ಬು ಮುಂತಾದವರು ನಟಿಸಿದ್ದಾರೆ.