ಬಣ್ಣ ಹಚ್ಚಿದ್ದು, ಸಿನಿಮಾ ಕನಸು ಕಂಡಿದ್ದು ಬಾಲಿವುಡ್ನಲ್ಲಿ. ನಾಯಕಿಯಾಗುವ ಕನಸು ಈಡೇರುತ್ತಿರೋದು ಕನ್ನಡದಲ್ಲಿ. ಇಲ್ಲಿ ಹೇಳುತ್ತಿರೋದು ತನ್ವಿ ರಾವ್ ಎಂಬ ನಟಿಯ ಬಗ್ಗೆ. ತನ್ವಿ ಈಗಷ್ಟೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನ್ಯೂಫೇಸ್. ಸದ್ಯ “ರಂಗ್ಬಿರಂಗಿ’ ಧ್ಯಾನದಲ್ಲಿರುವ ಹುಡುಗಿ. ಹೌದು, ತನ್ವಿ “ರಂಗ್ಬಿರಂಗಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದು ಇವರು ನಾಯಕಿಯಾಗಿ ನಟಿಸಿರುವ ಮೊದಲ ಚಿತ್ರ.
ಈಗಷ್ಟೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಉಳಿದ ಕೆಲಸಗಳಲ್ಲಿ ತೊಡಗಿಕೊಂಡಿದೆ. ತನ್ವಿ ಮೂಲತಃ ಮಂಗಳೂರು ಹುಡುಗಿ. ಆದರೆ, ಓದುತ್ತಿರೋದು ಬೆಂಗಳೂರಿನಲ್ಲಿ. ಕ್ರೈಸ್ಟ್ ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವ ತನ್ವಿ ಮೊದಲು ಬಣ್ಣ ಹಚ್ಚಿದ್ದು ಹಿಂದಿ ಸಿನಿಮಾ ಮೂಲಕ. ಸಿನಿಮಾ ಆಸಕ್ತಿ ಹೊಂದಿದ್ದ ತನ್ವಿಗೆ ಮೊದಲ ಅವಕಾಶ ಸಿಕ್ಕಿದ್ದು “ಗುಲಾಬ್ ಗ್ಯಾಂಗ್’ ಚಿತ್ರದಲ್ಲಿ.
ಮಾಧುರಿ ದೀಕ್ಷಿತ್ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ತನ್ವಿ ನಟಿಸಿದ್ದಾರೆ. ಚಿಕ್ಕ ಪಾತ್ರವಾದರೂ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ ಖುಷಿ ತನ್ವಿಗಿದೆ. ಇದಲ್ಲದೇ, ತನ್ವಿ “ಗನ್ಸ್ ಆಫ್ ಬನಾರಸ್’ ಸಿನಿಮಾದಲ್ಲೂ ನಟಿಸಿದ್ದಾರೆ. ಹೀಗಿರುವಾಗಲೇ ತನ್ವಿಗೆ ಸಿಕ್ಕಿದ್ದು “ರಂಗ್ಬಿರಂಗಿ’ ಚಿತ್ರ. ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ ಹೊಸ ಮುಖಗಳಿಗಾಗಿ ಆಡಿಷನ್ ಮಾಡಿದಾಗ ಆಯ್ಕೆಯಾದವರು ತನ್ವಿ.
ಈ ಚಿತ್ರದಲ್ಲಿ ಮೂವರು ನಾಯಕರು. ಅವರಿಗೆ ತನ್ವಿ ನಾಯಕಿ. ಅಂದಹಾಗೆ, ತನ್ವಿ ಒಳ್ಳೆಯ ಡ್ಯಾನ್ಸರ್ ಕೂಡಾ. ಭರತನಾಟ್ಯ ಸೇರಿದಂತೆ ಎಲ್ಲಾ ಪ್ರಾಕಾರಗಳಲ್ಲೂ ತನ್ವಿ ಎತ್ತಿದ ಕೈ. ಇಂತಿಪ್ಪ ತನ್ವಿಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು, ತನ್ನ ಪ್ರತಿಭೆ ತೋರಿಸಬೇಕೆಂಬ ಆಸೆ ಇದೆ. ಆ ನಿಟ್ಟಿನಲ್ಲೇ ಪಾತ್ರಗಳ ಆಯ್ಕೆ ಮಾಡುತ್ತಾರಂತೆ.
* ರವಿ ರೈ