ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿ ಫರ್ಹಾನ್ ಪಾಷಾ, ವಾರದ ಹಿಂದೆ ಮುಡಾ ಬಳಿಯೂ ಕಾಣಿಸಿಕೊಂಡಿದ್ದ ಎಂಬ ಸಂಗತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಒಂದೊಂದಾಗಿ ಸ್ಫೋಟಕ ಮಾಹಿತಿಗಳು ಗೊತ್ತಾಗುತ್ತಿವೆ.
ಇದರಲ್ಲಿ ಆತ ಈ ಹಿಂದೆಯೂ ತನ್ವೀರ್ ಸೇಠ್ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಲು ಹೊಂಚು ಹಾಕಿದ್ದ ಎಂಬ ಅಂಶವೂ ಸೇರಿದೆ. ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೋರಿ ಮುಡಾ ಬಳಿ ತನ್ವೀರ್ ಸೇಠ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಪ್ರತಿಭಟನೆ ಸ್ಥಳದಲ್ಲಿ ಫರ್ಹಾನ್ ಪಾಷಾ ಹಾಜರಿದ್ದು, ಹತ್ಯೆಗೆ ಹೊಂಚು ಹಾಕುತ್ತಿದ್ದ. ಜೊತೆಗೆ ಮಿಲಾದ್ ಪಾರ್ಕ್ ಹಾಗೂ ಸಾಕಷ್ಟು ಸ್ಥಳಗಳಲ್ಲಿ ಫರ್ಹಾನ್ ಪಾಷಾ ಹೊಂಚು ಹಾಕಿದ್ದನೆಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಮತ್ತೆ ಐವರ ಬಂಧನ: ಬಂಧಿತ ಆರೋಪಿ ಫರ್ಹಾನ್ ಪಾಷಾ ನೀಡಿದ ಮಾಹಿತಿ ಮೇರೆಗೆ ಮತ್ತೆ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ವಿಶೇಷ ತನಿಖಾ ತಂಡ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಕ್ರಂ, ಅಬೀದ್ ಪಾಷಾ, ನೂರ್ ಖಾನ್, ಮುಜೀಬ್ ಹಾಗೂ ಮುಜಾಮಿಲ್ ಎಂಬುವವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಬಳಿಕ ನ್ಯಾಯಾಧೀಶರು ಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಒಬ್ಟಾತ ರಾಜು ಹತ್ಯೆಯಲ್ಲೂ ಭಾಗಿ: ಬಂಧಿತ ಐವರು ಆರೋಪಿಗಳ ಪೈಕಿ ಅಬೀದ್ ಪಾಷಾ ಎಂಬಾತ 3 ವರ್ಷಗಳ ಹಿಂದೆ ಬಿಜೆಪಿ ಕಾರ್ಯ ಕರ್ತ ಕ್ಯಾತಮಾರನಹಳ್ಳಿ ರಾಜು ಹತ್ಯೆಯಲ್ಲೂ ಭಾಗಿಯಾಗಿದ್ದ ಎಂಬ ಸ್ಫೋಟಕ ಮಾಹಿತಿ ತಿಳಿದುಬಂದಿದ್ದು, ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಪ್ರಮುಖ ಆರೋಪಿ ಫರ್ಹಾನ್ ಪಾಷಾನ ಮೊಬೈಲ್ ಕರೆಗಳ ಜಾಡು ಹಿಡಿದು ತನಿಖೆ ಕೈಗೊಂಡಿರುವ ಪೊಲೀಸರು, ಪದೇ ಪದೆ ಫೋನ್ ಕರೆ ಮಾಡಿದ ಹಾಗೂ ಹೆಚ್ಚಿನ ಸಮಯ ಮಾತನಾಡಿರುವವರ ಸಂಖ್ಯೆ ಪತ್ತೆ ಹಚ್ಚಿ ಅನುಮಾನ ಬಂದವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಗುಪ್ತದಳದ ನೆರವು: ಘಟನೆಯ ಸಂಪೂರ್ಣ ಹಾಗೂ ವೈಜ್ಞಾನಿಕ ತನಿಖೆಗೆ ಕೇಂದ್ರ ಗುಪ್ತ ದಳ ಅಧಿಕಾರಿಗಳು ಮೈಸೂರಿಗೆ ಆಗಮಿಸಿದ್ದು, ಮೈಸೂರು ಪೊಲೀಸರಿಗೆ ಪ್ರಕರಣ ಸಂಬಂಧ ತನಿಖೆಗೆ ನೆರವು ನೀಡುತ್ತಿದ್ದಾರೆ. 3 ದಿನಗಳಿಂದ ಮೈಸೂರಿನಲ್ಲಿ ಬೀಡು ಬಿಟ್ಟಿರುವ ಕೇಂದ್ರ ಗುಪ್ತ ದಳದ ಅಧಿಕಾರಿಗಳ ತಂಡದಲ್ಲಿ ಓರ್ವ ಡಿಸಿಪಿ ಹಾಗೂ ಎಸ್‌ಪಿ ದರ್ಜೆಯ ಅಧಿಕಾರಿ ಸೇರಿದಂತೆ ಮೂವರನ್ನೊಳಗೊಂಡ ತಂಡ ಠಿಕಾಣಿ ಹೂಡಿದೆ. ತನ್ವೀರ್ ಸೇಠ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿರುವ ಕೇಂದ್ರ ಗುಪ್ತದಳದ ತಂಡ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.