Advertisement

Tanot Mata: ತನೋಟ್ ಮಾತಾ ದೇವಾಲಯ… ಇದರ ಹೆಸರು ಕೇಳಿದರೆ ಪಾಕಿಸ್ತಾನಿಗಳೂ ಹೆದರುತ್ತಾರಂತೆ

05:29 PM Oct 07, 2023 | ಸುಧೀರ್ |

ದೇಶದಲ್ಲಿ ಎಲ್ಲ ಧರ್ಮಗಳು ಪೂಜಿಸಲ್ಪಡುವ ಆರಾಧನಾ ಕೇಂದ್ರಗಳಿವೆ, ಕೆಲವೊಂದು ಆರಾಧನಾ ಕೇಂದ್ರಗಳು ಇತಿಹಾಸ ಪ್ರಸಿದ್ದಿಯನ್ನು ಪಡೆದಿರುತ್ತವೆ, ಅದರ ಹಿಂದಿರುವ ಶಕ್ತಿ ಕೆಲವೊಂದು ಕೌತುಕತೆಗೆ ಸಾಕ್ಷಿಯಾಗಿರುತ್ತದೆ ಅದೇ ರೀತಿ ರಾಜಸ್ಥಾನದಲ್ಲಿರುವ ಈ ಒಂದು ದೇವಾಲಯ ಹಲವು ಪವಾಡಗಳನ್ನೇ ಹೊಂದಿದೆ. ಅಷ್ಟು ಮಾತ್ರವಲ್ಲದೆ ಒಂದು ಕಾಲದಲ್ಲಿ ಪಾಕಿಸ್ತಾನದ ಸೇನೆಯ ಬೆವರಿಳಿಸಿದ ಇತಿಹಾಸವೂ ಈ ದೇವಿಗಿದೆ ಎಂದು ಹೇಳಲಾಗಿದೆ. ಬನ್ನಿ ಹಾಗಾದರೆ ಯಾವುದು ಈ ದೇವಾಲಯ, ಎಲ್ಲಿದೆ, ಏನು ಇದರ ಹಿಂದಿನ ಶಕ್ತಿ ಎಂಬುದನ್ನು ತಿಳಿದುಬರೋಣ.

Advertisement

ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ಮತ್ತು ಜೈಸಲ್ಮೇರ್‌ನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ತನೋಟ್ ಮಾತಾ ದೇವಾಲಯವು ಅನೇಕ ಭಕ್ತರ ಪೂಜ್ಯ ಕೇಂದ್ರವಾಗಿದೆ.

ತಾನಾ ಮಾತಾ ದೇವಾಲಯವು ತನೋಟ್‌ನಲ್ಲಿದೆ, ಭಾಟಿ ರಜಪೂತ್ ರಾವ್ ತನುಜಿಯಿಂದ ನೆಲೆಗೊಂಡ ಈ ದೇವಾಲಯವನ್ನು ಈಗ ತನೋತ್ರೈ ಮಾಟೇಶ್ವರಿ ಎಂದೂ ಕರೆಯುತ್ತಾರೆ. ದೇವಾಲಯದ ಪೂಜೆಯ ಜವಾಬ್ದಾರಿ ಇಲ್ಲಿನ ಭದ್ರತಾ ಪಡೆಗಳ ಸಿಬ್ಬಂದಿಯ ಮೇಲಿದೆ. ನವರಾತ್ರಿಯ ಸಮಯದಲ್ಲಿ ಈ ದೇವಿ ದೇವಸ್ಥಾನದಲ್ಲಿ ಹೆಚ್ಚಿನ ಜನಸಂದಣಿ ಕಂಡುಬರುತ್ತದೆ.

ದೇವಾಲಯದ ಇತಿಹಾಸದ ಬಗ್ಗೆ:
ತನೋಟ್ ದೇವಿಯೆಂದೇ ಕರೆಯಲಾಗುವ ಭಗವತಿ ಶ್ರೀ ದೇವಿ ಹುಟ್ಟಿದ್ದು ಕ್ರಿ.ಶ. 752 ರ ವಿಕ್ರಮ ಸಂವತ್ಸರದಲ್ಲಿ. ಮಾಂಡಿಯಾ ಜಿ ದಂಪತಿಯ ಜ್ಯೇಷ್ಠ ಪುತ್ರಿಯಾಗಿ ಜನಿಸಿದ ಭಗವತಿ ಶ್ರೀ ದೇವಿ ಬಾಲ್ಯದಲ್ಲೇ ತನ್ನ ಆಧ್ಯಾತ್ಮಿಕ ಗುಣಗಳಿಂದ ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿದ್ದಳು. ಆಕೆ ಇಹಲೋಕ ತ್ಯಜಿಸಿದ ನಂತರ ಆಕೆಯನ್ನು ಸ್ಥಳೀಯರು ದೇವಿಯ ಅವತಾರವೆಂದೇ ಭಾವಿಸಿ ಪೂಜಿಸತೊಡಗಿದರು. 888 ವಿಕ್ರಮ ಸಂವತ್ಸರದಲ್ಲಿ ತನೋಟ್ ಕೋಟೆ ಹಾಗೂ ಭಗವತಿ ಶ್ರೀ ದೇವಿಯ ದೇವಾಲಯಕ್ಕೆ ಶಂಕುಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ತನೋಟ್ ದೇವಿಯನ್ನು ಅಲ್ಲಿನ ಸ್ಥಳೀಯರು ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ದೇವಾಲಯ ಸೈನಿಕರಿಗೂ ಸಹ ಪೂಜನೀಯವಾಗಿದೆ.

Advertisement

1965 ರ ಯುದ್ಧದ ವೇಳೆ ಪವಾಡ:
1965 ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಯುದ್ಧ ಸಾರಿತ್ತು, ಆದರೆ ಭಾರತೀಯ ಸೈನಿಕರ ಬಳಿ ಪಾಕಿಸ್ತಾನದ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡುವಷ್ಟು ಶಸ್ತ್ರಾಸ್ತ್ರಗಳಿಲ್ಲದ ಕಾರಣ ಭಾರತೀಯ ಸೇನೆಯು ಅಪಾರ ಒತ್ತಡಕ್ಕೆ ಒಳಗಾಗಿತ್ತು. ಇದರ ಲಾಭವನ್ನು ಪಡೆದ ಪಾಕಿಸ್ತಾನಿ ಸೇನೆಯು ಸಾದೇವಾಲಾ ಪೋಸ್ಟ್ ಬಳಿಯ ಕಿಶನ್‌ಗಢ ಸೇರಿದಂತೆ ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು ಈ ವೇಳೆ ಪಾಕಿಸ್ತಾನಿ ಸೇನೆ ತನೋಟ್ ಮಾತಾ ದೇವಸ್ಥಾನದ ಪ್ರದೇಶಕ್ಕೆ ಬಂದಿದೆ. ಇಲ್ಲಿಗೆ ಬಂದಾಗ ಪಾಕ್ ಸೇನೆ ದೇವಾಲಯವನ್ನು ಕಂಡಿದೆ ಪ್ರತಿಯಾಗಿ ಪಾಕ್ ಸೇನೆ ದೇವಾಲಯಕ್ಕೆ ಗುರಿಯಾಗಿಸಿ 450 ಶೆಲ್ ಗಳಿಂದ ದಾಳಿ ನಡೆಸಿತ್ತು ಅದೃಷ್ಟವಶಾತ್ ದೇವಸ್ಥಾನದ ಮೇಲೆ ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಒಂದೂ ಕೂಡ ಸಿಡಿಯಲಿಲ್ಲವಂತೆ. ಅಷ್ಟುಮಾತ್ರವಲ್ಲದೆ ತಾನೋಟ್ ಮಾತಾ ದೇವಾಲಯಕ್ಕೆ ಒಂದು ಗೀರು ಕೂಡ ಉಂಟಾಗಲಿಲ್ಲವಂತೆ ಇದಾದ ಬಳಿಕ ಪಾಕಿಸ್ತಾನ ತನ್ನೆಲ್ಲಾ ಶಸ್ತ್ರಾಸ್ತಗಳನ್ನು ಖಾಲಿ ಮಾಡಿ ಭಾರತಕ್ಕೆ ಶರಣಾಗಿದೆ.

ಇದಾದ ಬಳಿಕ ಇಲ್ಲಿನ ದೇವಳದ ದೇವಿಯೇ ಸೈನಿಕರ ಕನಸಿನಲ್ಲಿ ಬಂದು ದೇವಾಲಯದ ಸುತ್ತಲೂ ನಾನಿದ್ದೇನೆ ಜೊತೆಗೆ ನಿಮ್ಮನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದಳಂತೆ.

1971 ರಲ್ಲಿ ಇಲ್ಲಿ ಮತ್ತೊಂದು ಚಕಿತ ನಡೆದಿದೆ, ಅದೇನೆಂದರೆ 1971 ಡಿಸೆಂಬರ್ 4 ರಂದು ಪಾಕಿಸ್ಥಾನ ಭಾರತದ ಲಾಂಗೆವಾಲಾದ ಮೇಲೆ ಏಕಾಏಕಿ ದಾಳಿ ಮಾಡಿದೆ, ಆದರೆ ಈ ಭಾರಿ ಪಾಕಿಸ್ತಾನದ 2 ಸಾವಿರ ಶತ್ರುಗಳ ತಂಡ ದಾಳಿಗೆ ಬರುತ್ತಿದ್ದರೆ ಭಾರತದ ಬಳಿ ಇದ್ದಿದ್ದು ಬರಿ ನೂರಿಪ್ಪತ್ತು ಸೈನಿಕರು ಮಾತ್ರ, ತನೋಟ್ ದೇವಿಯ ಪ್ರೇರಣೆಯಿಂದ ಯುದ್ಧಕ್ಕೆ ಮುಂದಾದ ಭಾರತೀಯ ಸೇನೆ ಪಾಕಿಸ್ತಾನದ ಎರಡು ಸಾವಿರ ಸೈನಿಕರ ತಂಡವನ್ನು ಸುಲಭವಾಗಿ ಹಿಮ್ಮೆಟ್ಟಿಸಿದ್ದೆ ಒಂದು ರೋಚಕ ಸಂಗತಿ ಇಲ್ಲಿ ಪಾಕಿಸ್ತಾನದ ಟ್ಯಾಂಕ್ ಗಳು ಯುದ್ಧಕ್ಕೆ ಬರುತ್ತಿದ್ದಂತೆ ದೇವಿಯ ಶಕ್ತಿಯಿಂದ ಎಲ್ಲ ಟ್ಯಾಂಕ್ ಗಳು ಮರಳಿನಲ್ಲಿ ಹೂತು ಹೋಗಿ ಪರಾಜಿತಗೊಂಡಿತ್ತಂತೆ.

ದೇವಾಲಯದ ಜವಾಬ್ದಾರಿ ಬಿಎಸ್ಎಫ್ ಯೋಧರಿಗೆ:
1965 ರಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಬಿಎಸ್ಎಫ್ ದೇವಾಲಯದ ಸಂಕೀರ್ಣದೊಳಗೆ ಒಂದು ಕೇಂದ್ರ ಸ್ಥಾಪಿಸಿತು ಮತ್ತು ಅಂದಿನಿಂದ ತಾನೋಟ್ ಮಾತಾ ದೇವಿಯನ್ನು ಪೂಜಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ದೇವಾಲಯವನ್ನು ಇಲ್ಲಿಯವರೆಗೆ ಬಿಎಸ್ಎಫ್ ನಿರ್ವಹಿಸಿಕೊಂಡೆ ಬರುತ್ತಿದೆ.

1971 ರ ನಂತರ ನಿರ್ಮಿಸಲಾದ ದೇವಾಲಯ:
1971 ರ ಯುದ್ಧದ ನಂತರ, ತನೋಟ್ ಮಾತಾ ದೇವಿಯ ಪವಾಡ ದೇಶದ ಉದ್ದ ಅಗಲಕ್ಕೂ ವ್ಯಾಪಿಸಿತು ಇದರಿಂದ ಪ್ರಭಾವಿತರಾದ ಭಾರತೀಯ ಸೈನಿಕರು 1965 ರಲ್ಲಿ ಪಾಕಿಸ್ತಾನ ದಾಳಿ ನಡೆಸಿದ ಜಾಗದಲ್ಲಿ ದೊಡ್ಡ ದೇವಾಲಯವನ್ನು ನಿರ್ಮಾಣ ಮಾಡಿ, ಇಲ್ಲೇ ಒಂದು ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ ಇಲ್ಲಿ ನೀವು 1965 ಮತ್ತು 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಬಳಸಿದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಪ್ರದರ್ಶನವನ್ನು ನೋಡಬಹುದು.

ವಿಜಯ್ ದಿವಸ್ ಆಚರಣೆ:

ಲೊಂಗೆವಾಲಾದ ನಡೆದ ಯುದ್ಧದಲ್ಲಿ ವಿಜಯ ಸಾಧಿಸಿದ ನೆನಪಿಗಾಗಿ ಭಾರತೀಯ ಸೇನೆಯು ದೇವಾಲಯದ ಸಂಕೀರ್ಣದೊಳಗೆ ವಿಜಯ ಸ್ತಂಭವನ್ನು ನಿರ್ಮಿಸಿದೆ. ಪ್ರತಿ ವರ್ಷ ಡಿಸೆಂಬರ್ 16 ರಂದು ಪಾಕಿಸ್ತಾನದ ವಿರುದ್ಧದ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ‘ವಿಜಯ್ ದಿವಸ್’ ಅನ್ನು ಆಚರಣೆ ಮಾಡಲಾಗುತ್ತದೆಯಂತೆ.

ಇಲ್ಲಿಗೆ ತಲುಪುವುದು ಹೇಗೆ :
ಈ ದೇವಾಲಯವು ಜೈಸಲ್ಮೇರ್‌ನಿಂದ 123 ಕಿಲೋಮೀಟರ್ ದೂರದಲ್ಲಿದೆ. ನಗರದಿಂದ ಎರಡು ಗಂಟೆಗಳ ಪ್ರಯಾಣದ ದೂರದಲ್ಲಿರುವ ದೇವಾಲಯಕ್ಕೆ ಭಕ್ತರು ಮತ್ತು ಪ್ರವಾಸಿಗರನ್ನು ಕರೆದೊಯ್ಯಲು ಟ್ಯಾಕ್ಸಿಗಳು ಪ್ರತಿ ಗಂಟೆಗೆ ಓಡುತ್ತವೆ.

– ಸುಧೀರ್ ಎ.

Advertisement

Udayavani is now on Telegram. Click here to join our channel and stay updated with the latest news.

Next