Advertisement

ತಣ್ಣೀರುಬಾವಿ ಬ್ಲೂಫ್ಲ್ಯಾಗ್‌ ಬೀಚ್‌ ಅಭಿವೃದಿ: ಸಚಿವ ಸುನಿಲ್‌

11:48 AM Aug 16, 2022 | Team Udayavani |

ಸ್ಟೇಟ್‌ಬ್ಯಾಂಕ್‌: ಕೇಂದ್ರ ಸರಕಾರದ ಬೀಮ್ಸ್‌ ಕಾರ್ಯಕ್ರಮದಡಿ ಬ್ಲೂ ಫ್ಲ್ಯಾಗ್‌ ಬೀಚ್‌ ಅಭಿವೃದ್ಧಿಗಾಗಿ ದೇಶದ 3 ಸಮುದ್ರ ತೀರಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಮಂಗಳೂರು ಸಮೀಪದ ತಣ್ಣೀರು ಬಾವಿ ಕಡಲ ತೀರವು ಆಯ್ಕೆಯಾಗಿದ್ದು, ಇಲ್ಲಿ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ನಗರದ ನೆಹರೂ ಮೈದಾನದಲ್ಲಿ ಸೋಮ ವಾರ ನಡೆದ ಜಿಲ್ಲಾಮಟ್ಟದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಅವರು, ದ.ಕ. ಜಿಲ್ಲೆಯ ಪ್ರವಾಸೋದ್ಯಮ ಆಕರ್ಷಣೆಗಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಹ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಅಭಿವೃದ್ಧಿಗೊಳಿಸಲಾಗುತ್ತಿದೆ. ಅಂದಾಜು 23.60 ಕೋ.ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯರಸ್ತೆ ಹಾಗೂ ಸೇತುವೆ ಅಭಿವೃದ್ಧಿಗಾಗಿ 50 ಕೋ.ರೂ. ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಮುಖ್ಯಮಂತ್ರಿಗಳು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಜಿಲ್ಲೆಯಲ್ಲಿ 3 ಕಡೆ ಶಿಶುಪಾಲನಾ ಕೇಂದ್ರ ಸ್ಥಾಪಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ 2 ಕಡೆ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹವನ್ನು ಪ್ರಾರಂಭಿಸಲಾಗಿದೆ ಎಂದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಪಥ ಸಂಚಲದಲ್ಲಿ ತೆರೆಸಾ ಶಾಲೆಯ ಆರ್‌ಎಸ್‌ಪಿ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಹಾಗೂ ಮೂಲ್ಕಿಯ ವ್ಯಾಸಮಹರ್ಷಿ ಶಾಲೆಯ ಗೈಡ್ಸ್‌ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.

Advertisement

ಆಕರ್ಷಕ ಪಥಸಂಚಲನ

ಮಂಗಳೂರು ನಗರ ಸಂಚಾರ ಉಪ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಕವಾಯತು ದಂಡನಾಯಕರಾಗಿ, ಸಿಎಆರ್‌ ಮೀಸಲು ಪೊಲೀಸ್‌ ಪೊಲೀಸ್‌ ನಿರೀಕ್ಷಕರಾದ ಸುಬ್ರಹ್ಮಣ್ಯ ಎಂ. ಕವಾಯತು ಉಪ ದಂಡನಾಯಕರಾಗಿದ್ದರು.

ಮಂಗಳೂರು ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ದ.ಕ. ಜಿಲ್ಲಾ ಪೊಲೀಸ್‌ ತುಕಡಿ, ಮಂಗಳೂರು ನಗರ ಸಿವಿಲ್‌ ಪೊಲೀಸ್‌ ತುಕಡಿ, ಮಂಗಳೂರು ನಗರ ಸಂಚಾರ ಪೊಲೀಸ್‌ ತುಕಡಿ, ಮಂಗಳೂರು ನಗರ ಮಹಿಳಾ ಪೊಲೀಸ್‌ ತುಕಡಿ, ರಾಜ್ಯ ಅಗ್ನಿಶಾಮಕ ದಳ, ರಾಜ್ಯ ಅಬಕಾರಿ ಇಲಾಖೆ, ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳು, ಮೂಲ್ಕಿ ವ್ಯಾಸ ಮಹರ್ಷಿ ಶಾಲೆಯ ಬಾಲಕಿಯರು, ಬಾಲಕರು, ಸೈಂಟ್‌ ತೆರೆಸಾ ಸ್ಕೂಲ್‌ನ ಬಾಲಕಿಯರು, ಬಾಲಕರು ಹಾಗೂ ಪೊಲೀಸ್‌ ವಾದ್ಯ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು.

ಸಾರ್ಟ್‌ಸಿಟಿ; 523 ಕೋ.ರೂ ಕಾಮಗಾರಿ ಪೂರ್ಣ

ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇಂದ್ರ, ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ 1 ಸಾವಿರ ಕೋ.ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಿಸಲಾಗುತ್ತಿದೆ. ಈ ಪೈಕಿ ಈಗಾಗಲೇ 523 ಕೋ.ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಪೂರ್ಣವಾಗಿದೆ. ಮುಖ್ಯಮಂತ್ರಿಗಳ ಅಮೃತ್‌ ನಗರೋತ್ಥಾನ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 130 ಕೋ.ರೂ. ಅನುದಾನ ಮಂಜೂರು ಮಾಡಲಾಗಿದೆ. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 35 ಮನೆಗಳು ಪೂರ್ಣವಾಗಿದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next