Advertisement

ಟ್ಯಾಂಕರ್‌ ದುರಂತ: ಚಾಲಕ ಸಾವು ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

02:12 PM Jun 21, 2018 | Team Udayavani |

ಕಡೂರು: ಚಿಕ್ಕಮಗಳೂರು ಜಿಲ್ಲೆ ಗಿರಿಯಾಪುರದಲ್ಲಿ ಮಂಗಳವಾರಸಂಭವಿಸಿದ್ದ ಟ್ಯಾಂಕರ್‌ ದುರಂತದಲ್ಲಿ 
ಗಾಯಗೊಂಡಿದ್ದ ಚಾಲಕ ಮೃತಪಟ್ಟಿದ್ದಾನೆ. ಬೆಂಕಿ ಆರಿಸಿದ ನಂತರ ಬುಧವಾರ ಟ್ಯಾಂಕರ್‌ನ್ನು ಮೇಲಕ್ಕೆತ್ತಿ
ಅದರಲ್ಲಿ ಉಳಿದಿದ್ದ ಪೆಟ್ರೋಲ್‌ನ್ನುಹೊರತೆಗೆಯಲಾಗಿದೆ.

Advertisement

ರಸ್ತೆ ಬದಿ ಪಲ್ಟಿಯಾದ ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಟ್ಯಾಂಕರ್‌ನ ಚಾಲಕ ಕೊನೆಗೂ ಮೃತಪಟ್ಟಿದ್ದಾನೆ. ಮೈಗೆ ಬೆಂಕಿ ಹೊತ್ತಿಕೊಂಡಿದ್ದರೂ ಟ್ಯಾಂಕರ್‌ನಿಂದ ಜಿಗಿದಿದ್ದ ದಾವಣಗೆರೆ ಮೂಲದ ಚಾಲಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವೃವಾಗಿ ಗಾಯಗೊಂಡಿದ್ದ ಈತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಲಾರಿಯಲ್ಲಿದ್ದ ಕೀನ್ಲರ್‌ ಸಜೀವವಾಗಿ ದಹನಗೊಂಡಿದ್ದ ಎಂದು ಶಂಕಿಸಲಾಗಿತ್ತು. ಆದರೆ ಟ್ಯಾಂಕರ್‌ನಲ್ಲಿ ಚಾಲಕ ಓರ್ವನೇ ಇದ್ದ ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ ಟ್ಯಾಂಕರ್‌ನ್ನು ಕ್ರೇನ್‌ ಮೂಲಕ ಬೇರ್ಪಡಿಸಿ ದೂರಕ್ಕೆ ಸಾಗಿಸಲಾಗಿದೆ. ಟ್ಯಾಂಕರ್‌ ಸಂಪೂರ್ಣ ಸುಟ್ಟಿದೆ. ಟ್ಯಾಂಕರ್‌ನ ನಾಲ್ಕು ಕಂಪಾರ್ಟ್ನಲ್ಲಿದ್ದ ಸುಮಾರು 15 ಸಾವಿರ ಲೀಟರ್‌ ಡೀಸೆಲ್‌ ಮತ್ತು 5 ಸಾವಿರ ಲೀಟರ್‌ ಪೆಟ್ರೊಲ್‌ನಲ್ಲಿ ಸುಮಾರು 4 ಸಾವಿರ ಲೀಟರ್‌ ಪೆಟ್ರೋಲ್‌ ಮಾತ್ರ ಉಳಿದಿದೆ. ಅದನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಲಾಗಿದೆ. ಉಳಿದ ಸುಮಾರು 15 ಸಾವಿರ ಲೀಟರ್‌ ಬೆಂಕಿಗಾಹುತಿಯಾಗಿದೆ.

ಘಟನೆಯಲ್ಲಿ ಮೂರು ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇವುಗಳಲ್ಲಿ 2 ವಾಹನದ ಗುರುತು ತಿಳಿದಿದ್ದು ಹಾಗೂ ಇನ್ನೊಂದು ಯಾರಿಗೆ ಸೇರಿದ್ದೆಂಬುದು ತಿಳಿದಿಲ್ಲ. ಬೆಂಕಿ ಜ್ವಾಲೆಯಿಂದ ವಿದ್ಯುತ್‌ ಲೈನ್‌ ಗಳೆಲ್ಲ ಸುಟ್ಟಿರುವ ಕಾರಣ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಹೊಸ ತಂತಿ ಅಳವಡಿಸಿದರು.

ಟ್ಯಾಂಕರ್‌ನ ಮಾಲೀಕರು ದಾವಣಗೆರೆವರು ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಘಟನೆಯ ಸಮಗ್ರ ಮಾಹಿತಿ ಪಡೆದಿದ್ದು, ದುರಂತದಿಂದ ಹಾನಿಗೊಳಗಾದ ನಷ್ಟವನ್ನು ಕಂದಾಯ ಅಧಿಕಾರಿಗಳು ಲೆಕ್ಕಹಾಕುತ್ತಿದ್ದಾರೆ. ಹಾನಿಗೊಳಗಾದ ಮನೆ ಮಾಲೀಕರಿಗೆ ಪರಿಹಾರ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Advertisement

ಅಗ್ನಿ ಶಾಮಕ ದಳದವರು ಮತ್ತು ಗ್ರಾಮಸ್ಥರ ಸಹಕಾರದಿಂದ ಆಗುವ ಹೆಚ್ಚಿನ ಹಾನಿ ತಪ್ಪಿದೆ. ಶಿವಮೊಗ್ಗ, ತರೀಕೆರೆ, ಚನ್ನಗಿರಿ, ಹೊಸದುರ್ಗ, ಅರಸೀಕೆರೆ, ಚಿಕ್ಕಮಗಳೂರು ಮತ್ತು ಕಡೂರು ಅಗ್ನಿ ಶಾಮಕ ದಳದ 59 ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಎರಡು ದಿನಗಳಿಂದ ಸ್ಥಳದಲ್ಲೇ ಬೀಡು ಬಿಟ್ಟಿರುವ ಸುಮಾರು 200ಕ್ಕೂ ಹೆಚ್ಚಿನ ಪೊಲೀಸ್‌ ಮತ್ತು ಅಗ್ನಿ ಶಾಮಕ ದಳದವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಹೇಮರಡ್ಡಿ ಸಮುದಾಯ ಭವನದಲ್ಲಿ ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next