Advertisement

ನಮ್ಮವರ ಬಿಡುಗಡೆ ಮಾಡಿ : ಇರಾನ್‌ಗೆ ಭಾರತ ಮನವಿ

09:18 AM Jul 22, 2019 | sudhir |

ಲಂಡನ್‌/ಹೊಸದಿಲ್ಲಿ: ಹದಿನೆಂಟು ಮಂದಿ ಭಾರತೀಯರು ಸೇರಿ ಒಟ್ಟು ಇಪ್ಪತ್ತಮೂರು ಸಿಬಂದಿ ಇದ್ದ ತೈಲ ಟ್ಯಾಂಕರ್‌ ಅನ್ನು ಇರಾನ್‌ ವಶಪಡಿಸಿಕೊಂಡಿದೆ. ಹೀಗಾಗಿ, ಅಮೆರಿಕ ಮತ್ತು ಇರಾನ್‌ ನಡುವಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಹೋರ್‌ಮುಝ್ ಎಂಬಲ್ಲಿ ‘ಸ್ಟೆನಾ ಇಂಪೆರೆಯೋ’ ಎಂಬ ತೈಲ ಹಡಗನ್ನು ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಬ್ರಿಟನ್‌ ಧ್ವಜ ಹೊಂದಿದ್ದ ಈ ಹಡಗು ಇರಾನ್‌ನ ಮೀನುಗಾರಿಕಾ ಬೋಟ್‌ಗೆ ಢಿಕ್ಕಿ ಹೊಡೆಯುವುದರಲ್ಲಿ ಇತ್ತು ಎಂದು ಆ ದೇಶದ ಸುದ್ದಿ ಸಂಸ್ಥೆ ಇರ್ನಾ ವರದಿ ಮಾಡಿದೆ.

Advertisement

ಹಡಗಿನ ಕ್ಯಾಪ್ಟನ್‌ ಭಾರತೀಯ ವ್ಯಕ್ತಿ ಆಗಿದ್ದಾರೆ. ಅದರಲ್ಲಿ ಲಾತ್ವಿಯಾ, ರಷ್ಯಾ, ಫಿಲಿಪ್ಪೀನ್ಸ್‌ನ ಪ್ರಜೆಗಳ ಜತೆಗೆ 18 ಮಂದಿ ಭಾರತೀಯರೂ ಇದ್ದಾರೆ. ಈ ಬೆಳವಣಿಗೆಯನ್ನು ಹೊಸದಿಲ್ಲಿಯಲ್ಲಿ ವಿದೇಶಾಂಗ ಇಲಾಖೆ ಕೂಡ ಖಚಿತಪಡಿಸಿಕೊಂಡಿದೆ. ಇರಾನ್‌ ಸರಕಾರದ ಜತೆಗೆ ಈ ಬಗ್ಗೆ ಸಂಪರ್ಕ ಸಾಧಿಸಲಾಗುತ್ತಿದೆ. ಜತೆಗೆ ಹೆಚ್ಚಿನ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಅವರ ವಶದಲ್ಲಿರುವ ಭಾರತೀಯರ ಬಿಡುಗಡೆಗೆ ಪ್ರಯತ್ನಗಳು ನಡೆದಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಶ ಮಾಡಿದ್ದು ಹೌದು: ಯುನೈಟೆಡ್‌ ಕಿಂಗ್‌ಡಮ್‌ ಧ್ವಜ ಹೊಂದಿರುವ ತೈಲ ಹಡಗನ್ನು ವಶಪಡಿಸಿಕೊಂಡದ್ದು ಹೌದು. ಎರಡು ವಾರಗಳ ಹಿಂದೆ ಬ್ರಿಟನ್‌ ನಮ್ಮ ತೈಲ ಟ್ಯಾಂಕರ್‌ ಅನ್ನು ತಡೆದಿರುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್‌ನ ಗಾರ್ಡಿಯನ್‌ ಕೌನ್ಸಿಲ್ನ ಅಬ್ಟಾಸ್‌ ಅಲಿ ಖಡಖೋಡಯ್‌ ಹೇಳಿದ್ದಾರೆ. ಈ ಬೆಳವಣಿಗೆಯಿಂದಾಗಿ ಅಮೆರಿಕ ಮತ್ತು ಇರಾನ್‌ ನಡುವಿನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಅಂತಾರಾಷ್ಟ್ರೀಯ ನಿಯಮಗಳನ್ನು ಗಮನಿಸಿಯೇ ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

‘ಸ್ಟೆನಾ ಇಪೆರೋ ಎಂಬ ತೈಲ ಹಡಗು ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆಯಿತು ಎಂಬ ಮಾಹಿತಿ ಸಿಕ್ಕಿದೆ. ಅದರ ಕ್ಯಾಪ್ಟನ್‌ ಜತೆಗೆ ಸಂಪರ್ಕ ಸಾಧಿಸಲು ಯತ್ನಿ ಮಾಡಿದರೂ ಸಿಗ್ನಲ್ ತೊಂದರೆಯಿಂದ ಸಾಧ್ಯವಾಗಲಿಲ್ಲ.

ಅನಾಮಧೇಯ ಬೋಟ್ ಅದಕ್ಕೆ ತಾಗಿದಾಗ ಹೆಲಿಕಾಪ್ಟರ್‌ ಮತ್ತು ನೌಕೆಯೊಂದು ಕಾಣಿಸಿಕೊಂಡಿತು. ಸ್ಟ್ರೈಟ್ ಆಫ್ ಹೊರ್ಮುಜ್‌ನಲ್ಲಿ ಈ ಘಟನೆ ನಡೆದಿದೆ. ಹಡಗು ಏಕಾಏಕಿ ಇರಾನ್‌ನತ್ತ ತೆರಳುತ್ತಿರುವುದು ಕಂಡುಬಂತು’ ಎಂದು ಹಡಗಿನ ಸ್ವಾಮಿತ್ವ ಹೊಂದಿರುವ ಸಂಸ್ಥೆ ಸ್ಟೆನಾ ಬಲ್ಕ್ ತಿಳಿಸಿದೆ. ಯುನೈಟೆಡ್‌ ಕಿಂಗ್‌ಡಮ್‌, ಸ್ವೀಡನ್‌ ಸರಕಾರಗಳ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದೇವೆ ಎಂದು ಅದು ಹೇಳಿದೆ.

Advertisement

ರಾಯಭಾರಿಗೆ ಕರೆ: ಹಡಗು ವಶಪಡಿಸಿಕೊಂಡ ವಿಚಾರ ಗೊತ್ತಾಗುತ್ತಲೇ ಬ್ರಿಟನ್‌ನ ವಿದೇಶಾಂಗ ಸಚಿವಾಲಯ ಇರಾನ್‌ ರಾಯಭಾರಿಯನ್ನು ಕರೆಯಿಸಿಕೊಂಡು ಆಕ್ಷೇಪ ವ್ಯಕ್ತಪಡಿಸಲಾಗಿದೆ ಮತ್ತು ಶೀಘ್ರವೇ ಅದನ್ನು ಬಿಟ್ಟುಕೊಡುವಂತೆ ತಾಕೀತು ಮಾಡಲಾಗಿದೆ.

ಅಪಾಯದ ದಾರಿ: ಬ್ರಿಟನ್‌ನ ವಿದೇಶಾಂಗ ಸಚಿವ ಜೆರ್ಮಿ ಹಂಟ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿ ಇರಾನ್‌ ಅಪಾಯಕಾರಿ ದಾರಿ ಹಿಡಿಯುತ್ತಿದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next