ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕೊನೆ ಬಜೆಟ್ ಫೆ. 16 ಇಂದು ಮಂಡನೆಯಾಗಲಿದ್ದು, ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವವರೇ ಎಂದು ಕಾಯ್ದು ನೋಡಬೇಕಿದೆ.
ರಾಜ್ಯದಲ್ಲಿಯೇ ಚಿಕ್ಕ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಅನೇಕ ಜ್ವಲಂತ ಸಮಸ್ಯೆಗಳು ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಗುರುಮಠಕಲ್, ವಡಗೇರಾ, ಹುಣಸಗಿ ಮೂರು ನೂತನ ತಾಲೂಕು ಕೇಂದ್ರಗಳೆಂದು ಸರಕಾರದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಇನ್ನೂ ಹೊಸ ತಾಲೂಕುಗಳ ಕಾರ್ಯಾರಂಭವಾಗಿಲ್ಲ. ತಾಲೂಕುಗಳ ಮೂಲ ಸೌಕರ್ಯಕ್ಕೆ ಇನ್ನೂ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಲ್ಲ. ಈ ಬಜೆಟ್‌ನಲ್ಲಿ ಈ ಅನುದಾನ ಬಿಡುಗಡೆಗೊಳಿಸಬೇಕಾಗಿದೆ.
ಜಿಲ್ಲೆಯಲ್ಲಿ ಬೆಳೆದ ಹತ್ತಿಯನ್ನು ರಸ್ತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ರೈತರಿಗೆ ಅನುಕೂಲ ಆಗುವ ದೃಷ್ಟಿ ಯಿಂದ ಹತ್ತಿ ಸಂಸ್ಕರಣಾ ಘಟಕ ಮಂಜೂರು ಮಾಡಬೇಕು. ಜೊತೆಗೆ ಕೃಷಿ ಇಲಾಖೆಯ ಬಹು ಬೇಡಿಕೆ ಆಗಿರುವ ರೇಕ್ ಪಾಯಿಂಟ್ ಮಂಜೂರುಗೊಳಿಸಬೇಕು. ಸಹಕಾರಿ ಬ್ಯಾಂಕ್‌ಗಳ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂಬುದು ರೈತರ ಬೇಡಿಕೆಯಾಗಿವೆ. ಜಿಲ್ಲೆಯಲ್ಲಿ ಶಹಾಪುರ, ಸುರಪುರ ಮತ್ತು ಗುರುಮಠಕಲ್ ನಗರಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ಇಲ್ಲಿ ತಲಾ ಒಂದು ಸಂಚಾರಿ ಪೊಲೀಸ್ ಠಾಣೆಗಳು ಮಂಜೂರಾಗಬೇಕಾಗಿದೆ. ಯಾದಗಿರಿ ನಗರದಲ್ಲಿ ಇನ್ನೊಂದು ನಗರ ಪೊಲೀಸ್ ಠಾಣೆ ಮಂಜೂರು ಮಾಡಬೇಕು.
ಜಿಲ್ಲೆಯಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲು ರಂಗ ಮಂದಿರಗಳ ಸ್ಥಾಪನೆ, ಯಾದಗಿರಿ ಕೋಟೆ, ಬೋನಾಳ ಪಕ್ಷಿಧಾಮ, ಮಲಗಿರುವ ಬುದ್ಧ, ಮೈಲಾಪುರ ಮಲ್ಲಯ್ಯ ಕ್ಷೇತ್ರ, ತಿಂಥಣಿ ಮೌನೇಶ್ವರ, ಹತ್ತಿಕುಣಿ ಜಲಾಶಯ, ಛಾಯಾ ಭಗವತಿ ಅಭಿವೃದ್ಧಿಗೊಳಿಸಿ ಪ್ರೇಕ್ಷಣಿಕ ಸ್ಥಳಗಳನ್ನಾಗಿ ರೂಪಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಿಸಬೇಕು. ಗ್ರಾಮೀಣ ರಸ್ತೆಗಳ ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆಗೆ ಆದ್ಯತೆ ನೀಡಲಿದೆ ಎಂದು ಜನರು ನಿರೀಕ್ಷೆ ಹೊಂದಿದ್ದಾರೆ.
ಮುಖ್ಯವಾಗಿ ಜಿಲ್ಲೆಯಲ್ಲಿ ಪ್ರಭಾರಿ ಅಧಿಕಾರಿಗಳು ಹೆಚ್ಚಾಗಿರುವುದರಿಂದ ಸಮರ್ಪಕ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದ್ದು, ಅಧಿಕಾರಿಗಳ ಹುದ್ದೆ ಭರ್ತಿ ಮಾಡಬೇಕಾಗಿದೆ. ಜಿಲ್ಲಾದ್ಯಂತ ಸಾವಿರಾರು ಶಿಕ್ಷಕರ ಕೊರತೆಯಿಂದ ಪ್ರತಿ ವರ್ಷ ಎಸ್ ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆ ಹಿಂದುಳಿಯುತ್ತಿದೆ. ಶಿಕ್ಷಕರ, ಉಪನ್ಯಾಸಕರ ನೇಮಕಾತಿಗೆ ಸರಕಾರ
ಮುಂದಾಗಬೇಕಿದೆ. ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕರು ಬೆಂಗಳೂರು, ಮುಂಬೈ, ಹೈದ್ರಾಬಾದ್ ಮಹಾನಗರಕ್ಕೆ ಗೂಳೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಕೈಗಾರಿಕಾ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕಾಗಿದೆ. ಒಟ್ಟಾರೆ ಕಾಂಗ್ರೆಸ್ ಸರಕಾರದ ಕೊನೆ ಬಜೆಟ್ ಮೇಲೆ ಜನರು ನೂರಾರು ನಿರೀಕ್ಷೆಗಳನ್ನಿಟ್ಟಿದ್ದಾರೆ.
ವೈದ್ಯಕೀಯ ಕಾಲೇಜಿಗೆಸಿಕ್ಕಲ್ಲ ಇನ್ನೂ ಅನುದಾನ ಕಳೆದ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿದೆ. ಆದರೆ, ಅನುದಾನ ನೀಡದೇ ಇರುವುದರಿಂದ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ವೈದ್ಯಕೀಯ ಕಾಲೇಜಿಗೆ ಅನುದಾನ ಬಿಡುಗಡೆಗೊಳಿಸಬೇಕಿದ್ದು, ಜಿಲ್ಲೆಯಲ್ಲಿ 1,500ಕ್ಕೂ ಅಧಿಕ ಸರಕಾರಿ ಹುದ್ದೆಗಳು ಖಾಲಿಯಿದ್ದು, ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ರಾಜೇಶ ಪಾಟೀಲ್ ಯಡ್ಡಳ್ಳಿ