Advertisement

TamilNadu: ಅಕ್ರಮ ಮದ್ಯ ಸೇವನೆ, ಮೃತರ ಸಂಖ್ಯೆ 34ಕ್ಕೆ ಏರಿಕೆ-ಸಿಐಡಿ ತನಿಖೆ

04:47 PM Jun 20, 2024 | Team Udayavani |

ಚೆನ್ನೈ:  ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ (ಕಳ್ಳಭಟ್ಟಿ) ಸೇವಿಸಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. 60ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಈ ದುರಂತದ ಬಗ್ಗೆಯ ತನಿಖೆಯನ್ನು ಸಿಬಿ ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆದೇಶಿಸಿದ್ದಾರೆ.

Advertisement

ಮೆಥಾನಲ್‌ ಮಿಶ್ರಿತ ‘ಅರಕ್ʼ ಮದ್ಯ ಪ್ಯಾಕೆಟ್ ಸೇವಿಸಿ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  “ಕಲ್ಲಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿರುವ ಸುದ್ದಿ ಕೇಳಿ ನನಗೆ ಆಘಾತ ಮತ್ತು ದುಃಖವಾಗಿದೆ. ಈ ಪ್ರಕರಣದ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಇದನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಸಮಾಜ ಹಾಳುಗೆಡುವ ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದುʼ ಎಂದು ಸಿಎಂ ಸ್ಟಾಲಿನ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ನಾಲ್ವರ ಬಂಧನ:

ಕಲ್ಲಕುರುಚಿ ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಇಂತಹ ದುರ್ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ, ಸಾವಿನ ಹಿಂದಿರುವ ಕಾರಣ ಅರಿಯಲು ಮದ್ರಾಸ್‌ ಹೈ ಕೋರ್ಟ್‌ ನಿವೃತ್ತ ನ್ಯಾ.ಬಿ.ಗೋಕುಲ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗ ರಚಿಸಲು ಅಧಿಕಾರಿಗಳಿಗೆ ಸಿಎಂ ಸ್ಟಾಲಿನ್‌ ಸೂಚನೆ ನೀಡಿದ್ದಾರೆ.

ಪರಿಹಾರ ಘೋಷಣೆ:

Advertisement

ಅಕ್ರಮ ಮದ್ಯ ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ 50 ಸಾವಿರ ಪರಿಹಾರವನ್ನು ತಮಿಳುನಾಡು ಸರ್ಕಾರ ಘೋಷಿಸಿದೆ.

ಸರ್ಕಾರದ ವಿರುದ್ಧ ಬಿಜೆಪಿ, ಎಐಎಡಿಎಂಕೆ ಟೀಕೆ

ಅಕ್ರಮ ಮದ್ಯದ ಬಗ್ಗೆ ಈ ಮೊದಲು ಮಾಹಿತಿ ನೀಡಿದ್ದರೂ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಕೆ.ಪಳನಿಸ್ವಾಮಿ ಟೀಕಿಸಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾತನಾಡಿ, ಕಳೆದ ವರ್ಷ ಅಕ್ರಮ ಮದ್ಯ ಸೇವಿಸಿ 22 ಮಂದಿ ಮೃತಪಟ್ಟಿದ್ದರೂ  ಇದರಿಂದ ಸರ್ಕಾರ ಪಾಠ ಕಲಿತಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next