ಕನ್ನಡದ ಬಹುತೇಕ ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು ಬಾಲಿವುಡ್ ಗಾಯಕರತ್ತ ಮುಖ ಮಾಡುತ್ತಿದ್ದರು. ಈಗೀಗ ಆ ಟ್ರೆಂಡ್ ಕೊಂಚ ಕಡಿಮೆಯಾಗುವ ಲಕ್ಷಣ ಕಾಣುತ್ತಿದೆ. “ಟಗರು’ ಮೂಲಕ ಆ್ಯಂಟೋನಿ ದಾಸನ್ ಸುದ್ದಿಯಾಗಿದ್ದೇ ತಡ, ಒಬ್ಬೊಬ್ಬರೇ ತಮಿಳು ಗಾಯಕರತ್ತ ಮುಖ ಮಾಡುತ್ತಿದ್ದಾರೆ. ಆ ಸಾಲಿಗೆ ಈಗ ಮೋಹನ್ ಕಾಮಾಕ್ಷಿ ನಿರ್ದೇಶನದ “ಆದಿ ಪುರಾಣ’ ಚಿತ್ರವೂ ಸೇರಿದೆ.
ಹೌದು, ಈ ಚಿತ್ರದ ಹಾಡಿಗೆ ತಮಿಳು ಗಾಯಕ ಗಾನಬಾಲ ಧ್ವನಿಯಾಗಿದ್ದಾರೆ. ಗಾನಬಾಲ ತಮಿಳು ಚಿತ್ರರಂಗ ಅತ್ಯುತ್ತಮ ಗಾಯಕರಲ್ಲೊಬ್ಬರು. ತಮಿಳು ಚಿತ್ರರಂಗದಲ್ಲಿ ಇನ್ನು ಮುಂದೆ ನಾನು ಹಾಡುವುದೇ ಇಲ್ಲ ಎಂದು ಘೋಷಣೆ ಮಾಡಿದ್ದರು ಗಾನಬಾಲ. ಕಳೆದ ಒಂದೂವರೆ ವರ್ಷದಿಂದ ಹಾಡುವುದನ್ನೇ ನಿಲ್ಲಿಸಿದ್ದ ಗಾನಬಾಲ, ಕನ್ನಡದ “ಆದಿ ಪುರಾಣ’ ಚಿತ್ರದ ಹಾಡಿಗೆ ಧ್ವನಿಯಾಗುವ ಮೂಲಕ ಮತ್ತೆ ಹಾಡಿದ್ದಾರೆ.
ಸಂಗೀತ ನಿರ್ದೇಶಕ ವಿಕ್ರಮ್ ವಸಿಷ್ಠ ಬರೆದ “ಕುದುರೆ ಕುದುರೆ ರೇಸ್ ಕೋರ್ಸ್ ಕುದುರೆ ಹೆಂಗೆಂಗೋ ಆಡುತ್ತಿದೆ…’ ಎಂಬ ಗೀತೆಗೆ ಗಾನಬಾಲ ಹಾಡಿದ್ದಾರೆ. ಅಂದಹಾಗೆ, ಜನಪದ ಶೈಲಿಯ ಹಾಡಾಗಿರುವುದರಿಂದ ನಿರ್ದೇಶಕ ಮೋಹನ್ ಕಾಮಾಕ್ಷಿ ಮತ್ತು ನಿರ್ಮಾಪಕ ಶಮಂತ್ ಅವರು ಸಂಗೀತ ನಿರ್ದೇಶಕ ವಿಕ್ರಮ್ ವಸಿಷ್ಠ ಅವರೊಂದಿಗೆ ಚೆನ್ನೈಗೆ ತೆರಳಿ, ಗಾನಬಾಲ ಅವರಿಗೆ ಹಾಡುವಂತೆ ಮನವಿ ಮಾಡಿದ್ದಾರೆ.
ಕೊನೆಗೆ ಹಾಡಿನ ಸಾಹಿತ್ಯ ಕೇಳಿದ ಗಾನಬಾಲ, ನಾಯಕ ಶಶಾಂಕ್ ಪರಿಚಯಿಸುವ ಹಾಡನ್ನು ಹಾಡುವ ಮೂಲಕ ಮತ್ತೆ ತಮ್ಮ ಗಾಯನವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಈಗಾಗಲೇ ತಮಿಳು ಚಿತ್ರರಂಗದಲ್ಲಿ ಗಾನಬಾಲ ಬಹುತೇಕ ಸ್ಟಾರ್ ನಟರ ಚಿತ್ರಗಳಿಗೆ ಹಾಡಿದ್ದಾರೆ. ಆ್ಯಂಟೋನಿ ದಾಸನ್ ಮತ್ತು ಗಾನಬಾಲ ಇಬ್ಬರೂ ಸಹ ಚಿತ್ರವೊಂದರಲ್ಲಿ ಹಾಡಿದ ಹಾಡು ಸೂಪರ್ ಹಿಟ್ ಕೂಡ ಆಗಿದೆ.
ಸದ್ಯಕ್ಕೆ, “ಆದಿಪುರಾಣ’ಕ್ಕೆ ಹಾಡಿರುವ ಗಾನಬಾಲ ಹಾಡು, ಕನ್ನಡದಲ್ಲಿ ಹೊಸಬಗೆಯ ಹಾಡಾಗಲಿದೆ ಎಂಬುದು ಚಿತ್ರತಂಡದ ಮಾತು. “ಇದೊಂದು ಯೂತ್ಸ್ಗೆ ಸಂಬಂಧಿಸಿದ ಚಿತ್ರ. ರೊಮ್ಯಾಂಟಿಕ್ ಕಾಮಿಡಿ ಚಿತ್ರದ ಹೈಲೈಟ್. ಕನ್ನಡಕ್ಕೆ ಹೊಸತನ ಬೇಕೆಂಬ ಕಾರಣಕ್ಕೆ ಫ್ರೆಶ್ ಎನಿಸುವ ಕಥೆಯೊಂದಿಗೆ ಬರುತ್ತಿರುವುದಾಗಿ ಹೇಳುವ ಶಮಂತ್, ಇಷ್ಟರಲ್ಲೇ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವುದಾಗಿ ಹೇಳುತ್ತಾರೆ. ಚಿತ್ರದಲ್ಲಿ ಮೋಕ್ಷ, ಅಹಲ್ಯ ನಾಯಕಿಯರು. ಗುರು ಛಾಯಾಗ್ರಹಣವಿದೆ.