ಚೆನ್ನೈ: ಖ್ಯಾತ ಕಾಲಿವುಡ್ ನಿರ್ಮಾಪಕ (Tamil producer) ದಿಲ್ಲಿ ಬಾಬು(Dilli Babu) ಸೋಮವಾರ(ಸೆ.9ರಂದು) ನಿಧನರಾಗಿದ್ದಾರೆ.
ಅವರ ಕುಟುಂಬದ ಮೂಲಗಳ ಪ್ರಕಾರ, ಅವರು ಸುಮಾರು ರಾತ್ರಿ 12.30ಕ್ಕೆ ನಿಧನರಾದರು ಮತ್ತು ಅವರ ಅಂತ್ಯಕ್ರಿಯೆ ಇಂದು (ಸೆಪ್ಟೆಂಬರ್ 9 ರಂದು) ನಡೆಯಲಿದೆ.
ದಿಲ್ಲಿ ಬಾಬು ಅವರಿಗೆ 50 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.
ಕಾಲಿವುಡ್‌ನಲ್ಲಿ ನಿರ್ಮಾಪಕರಾಗಿ ಅನೇಕ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ಆಕ್ಸೆಸ್ ಫಿಲ್ಮ್ ಫ್ಯಾಕ್ಟರಿ ಮೂಲಕ, ʼರಾತ್ಸಾಸನ್ʼ ಮತ್ತು ʼಮರಗಧ ನಾನಯಂʼ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಬಂಡವಾಳ ಹಾಕಿದ್ದರು.
ಅವರು 2015 ರಲ್ಲಿ ʼಉರುಮೀನ್ʼ ಚಿತ್ರದ ಮೂಲಕ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದರು. ʼಮರಗಧ ನನಯಂʼ, ʼಇರವುಕ್ಕು ಆಯಿರಂ ಕಂಗಲ್ʼ, ʼರಾತ್ಸಾಸನ್ʼ, ʼಓ ಮೈ ಕಡವುಲೆʼ, ʼಬ್ಯಾಚುಲರ್ʼ, ʼಮಿರಲ್ʼ, ʼಕಲ್ವನ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಪಕರಾಗಿ ಬಂಡವಾಳ ಹಾಕಿದ್ದರು.
ʼಮರಗಧ ನನಯಂʼ ಚಿತ್ರದ ನಿರ್ದೇಶಕ ಎಆರ್ ಕೆ ಸರವಣ್, ನಿರ್ಮಾಪಕ ಜಿ ಧನಂಜಯನ್, ನಿರ್ಮಾಪಕ ಎಸ್ ಆರ್ ಪ್ರಭು ಸೇರಿದಂತೆ ಹಲವರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ದಿಲ್ಲಿ ಬಾಬು ಅವರ ಪಾರ್ಥಿವ ಶರೀರವನ್ನು ಚೆನ್ನೈನ ಪೆರುಂಗಲತ್ತೂರ್ ಮನೆಗೆ ತಂದು ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 4.30 ರ ಸುಮಾರಿಗೆ ನಡೆಯಲಿದೆ ಎನ್ನಲಾಗಿದೆ.