ಚೆನ್ನೈ:ಕಳೆದ ವರ್ಷ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ನಂತರ ಭೌತಶಾಸ್ತ್ರ(31ವರ್ಷ) ಶಿಕ್ಷಕನನ್ನು ಕೊಯಮತ್ತೂರಿನಲ್ಲಿ ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಶಿಕ್ಷಕ ಮತ್ತಿಬ್ಬರು ವಿದ್ಯಾರ್ಥಿನಿಯರಿಗೂ ಕೂಡಾ ಲೈಂಗಿಕ ಸಂಪರ್ಕಕಕ್ಕೆ ಬರುವಂತೆ ಸಲಹೆ ನೀಡುತ್ತಿರುವ ಮಾತಿನ ಸಂಭಾಷಣೆಯ ಆಡಿಯೋ ತುಣುಕು ಮತ್ತು ವಾಟ್ಸಪ್ ಚಾಟ್ (ಇದನ್ನು ವೈಯಕ್ತಿಕವಾಗಿ ಪರಿಶೀಲಿಸಿಲ್ಲ ಎಂದು ಎನ್ ಡಿಟಿವಿ ವರದಿ ತಿಳಿಸಿದೆ) ಬಹಿರಂಗವಾದ ನಂತರ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವರ್ಷದ ಆರಂಭದಲ್ಲಿ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ನಡೆದಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಎನ್ ಡಿಟಿವಿಗೆ ತಿಳಿಸಿದ್ದಾರೆ. ವಿದ್ಯಾರ್ಥಿನಿ ಪೋಷಕರು ದೂರನ್ನು ನೀಡಿದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದ ಆರೋಪದಡಿ ಖಾಸಗಿ ಶಾಲೆಯ ಮುಖ್ಯಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, 31ವರ್ಷದ ಭೌತಶಾಸ್ತ್ರ ಶಿಕ್ಷಕ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ನಂತರ ಸೆಪ್ಟೆಂಬರ್ ನಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಕೋವಿಡ್ ಸಂದರ್ಭದಲ್ಲಿ ಈ ಶಿಕ್ಷಕ ವಿಶೇಷ ತರಗತಿ ಇದೆ ಎಂದು ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ದೂರನ್ನು ನೀಡಿದ್ದರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಾಗಿತ್ತು ಎಂದು ತಿಳಿಸಿದ್ದಾರೆ.
ಗುರುವಾರ ಸಂಜೆ ವಿದ್ಯಾರ್ಥಿನಿಯ ತಾಯಿ ಮತ್ತು ಸಹೋದರಿ ಮದುರೈಗೆ ಕುಟುಂಬದ ಸಮಾರಂಭಕ್ಕೆ ತೆರಳಿದ್ದರು. ತಂದೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ಬಂದ ತಂದೆಗೆ ಮನೆಯ ಬಾಗಿಲು ಲಾಕ್ ಆಗಿತ್ತು. ಕರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸ್ಥಳೀಯರ ನೆರವಿನೊಂದಿಗೆ ಬಾಗಿಲು ಒಡೆದು ಒಳ ಹೋದಾಗ ಮಗಳು ನೇಣಿಗೆ ಶರಣಾಗಿದ್ದಳು. ಕೂಡಲೇ ಕೊಯಮತ್ತೂರು ಮೆಡಿಕಲ್ ಕಾಲೇಜ್ ಗೆ ಕರೆದೊಯ್ದಿದ್ದರು ಕೂಡಾ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.