ಚೆನ್ನೈ:”ತಮಿಳು’ ಭಾಷೆ ಹಾಗೂ ಪ್ರದೇಶ ವ್ಯಾಖ್ಯಾನ ವಿಚಾರದಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ವಾಗ್ವಾದ ಬುಧವಾರ ಹೊಸ ಮಜಲು ಪ್ರವೇಶಿಸಿದೆ.
ಹಳೆಯ ಕಾಲದಲ್ಲಿ ತಮಿಳುನಾಡು ಎಂಬ ಹೆಸರೇ ಇರಲಿಲ್ಲ. ಅದರ ಬದಲಾಗಿ “ತಮಿಳಗಂ’ ಎಂದು ಪ್ರಸ್ತಾಪವಿತ್ತು. ಅದನ್ನು ಐತಿಹಾಸಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಇತ್ತೀಚೆಗೆ ಪ್ರಸ್ತಾಪಿಸಿದ್ದೆ. ತಮ್ಮ ಭಾಷಣ ಅರ್ಥ ಮಾಡಿಕೊಳ್ಳದೆ ಕೆಲವರು ವಿನಾ ಕಾರಣ ತರ್ಕ ಮಾಡುತ್ತಿದ್ದಾರೆ. ಅದರ ಹೊರತಾಗಿ ತಮಿಳುನಾಡಿನ ಹೆಸರು ಬದಲಿಸಬೇಕು ಎಂದು ಹೇಳಿಲ್ಲ ಎಂದು ರಾಜ್ಯಪಾಲ ಆರ್.ಎನ್.ರವಿ ಸ್ಪಷ್ಟಪಡಿಸಿದ್ದಾರೆ.
ಜ.4ರಂದು ಚೆನ್ನೈನ ರಾಜಭವನದಲ್ಲಿ ಭಾಷಣ ಮಾಡುವಾಗ ರಾಜ್ಯಪಾಲರು ತಮಿಳುನಾಡನ್ನು “ತಮಿಳಗಂ’ ಎಂದು ಉಲ್ಲೇಖಿಸಿದ್ದರು. ಬಳಿಕ ರಾಜಭವನವು ಪೊಂಗಲ್‌ಗೆ ನೀಡಿದ್ದ ಆಹ್ವಾನ ಪತ್ರಿಕೆಯಲ್ಲೂ ಅದೇ ಪದ ಬಳಕೆ ಮಾಡಲಾಗಿತ್ತು. ಅಲ್ಲದೇ, ತಮಿಳುನಾಡು ಸರ್ಕಾರದ ಲಾಂಛನದ ಬದಲಿಗೆ ಕೇಂದ್ರ ಸರ್ಕಾರದ ಲಾಂಛನವನ್ನು ಬಳಸಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.