ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಸದ್ಯ ಸಸ್ಪೆಂಡ್ ಆಗಿರುವ ಡಿಎಂಕೆ ಕಾರ್ಯಕರ್ತ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಚೆನ್ನೈನ ಸ್ಥಳೀಯ ನ್ಯಾಯಾಲಯವೊಂದರಲ್ಲಿ ರಾಜ್ಯಪಾಲರ ಪರ ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ದೇವರಾಜನ್ ಈ ಕ್ರಮ ಕೈಗೊಂಡಿದ್ದಾರೆ. ಸಸ್ಪೆಂಡ್ ಆಗಿರುವ ಶಿವಾಜಿ ಕೃಷ್ಣಮೂರ್ತಿ ಅವರು “ಸಂವಿಧಾನದ ಹೆಸರಲ್ಲಿ ನೀವು ಪ್ರಮಾಣ ವಚನ ಸ್ವೀಕರಿಸಿಲ್ಲವೇ? ಅಂಬೇಡ್ಕರ್ ಅವರ ಹೆಸರನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಸಾಧ್ಯವಾಗದಿದ್ದರೆ ಕಾಶ್ಮೀರಕ್ಕೆ ಹೋಗಿ. ನಾವೇ ಅಲ್ಲಿಗೆ ಉಗ್ರರನ್ನು ಕಳುಹಿಸಿ ರಾಜ್ಯಪಾಲರಿಗೆ ಗುಂಡು ಹಾರಿಸುತ್ತೇವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಬಗ್ಗೆ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದ ರಾಜ್ಯಪಾಲರ ಡೆಪ್ಯುಟಿ ಸೆಕ್ರೆಟರಿ ಹೇಳಿಕೆಯಿಂದ ರಾಜ್ಯಪಾಲರಿಗೆ ನೋವಾಗಿದೆ. ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿರುವ ವಿಡಿಯೋದಿಂದ ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎಂಕೆ ನಾಯಕನ ವಿರುದ್ಧ ಕೇಸು ದಾಖಲಿಸಲು ರಾಜ್ಯಪಾಲರು ತೀರ್ಮಾನಿಸಿದ್ದಾರೆ ಎಂದು ಉಲ್ಲೇಖೀಸಿದ್ದರು.