ನವದೆಹಲಿ: ಚೆನ್ನೈನಲ್ಲಿರುವ ಸರವಣ ಸ್ಟೋರ್ಸ್ (ಚಿನ್ನದ ವ್ಯಾಪಾರ ಸಂಸ್ಥೆ) ಹಾಗೂ ತಮಿಳುನಾಡಿನ “ಲಾಟರಿ ಕಿಂಗ್’ ಖ್ಯಾತಿಯ ಸ್ಯಾಂಟಿಯಾಗೊ ಮಾರ್ಟಿನ್ ಕಂಪನಿಗಳಿಗೆ ಸೇರಿದ ಒಟ್ಟು 408.22 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ.
ಸರವಣ ಸ್ಟೋರ್ಸ್ ಸಂಸ್ಥೆಗೆ ಪ್ರಕರಣದಲ್ಲಿ 234.74 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದರೆ, ಮತ್ತೂಂದು ಪ್ರಕರಣದಲ್ಲಿ ಮಾರ್ಟಿನ್ ಕಂಪನಿಗೆ ಸೇರಿದ 173.48 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇವೆರಡೂ ಕಂಪನಿಗಳ ವಿರುದ್ಧ ಮೊದಲು ಸಿಬಿಐನಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆನಂತರ, ಈ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ಕಂಡುಬಂದಿದ್ದರಿಂದ ಈ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿತ್ತು.
ಈಗ ಜಪ್ತಿ ಮಾಡಿರುವ ಆಸ್ತಿಗಳಲ್ಲಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳಿವೆ. ಇವುಗಳಲ್ಲಿ ಬ್ಯಾಂಕ್ ಖಾತೆಗಳು, ತಮಿಳುನಾಡಿನ ನಾನಾ ಕಡೆ ಇರುವ ಭೂಮಿಯ ದಾಖಲೆಗಳು ಸೇರಿವೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ನೀಡಿದೆ.