ಚೆನ್ನೈ : ಕೋವಿಡ್ ಎಂಬ ಮಹಾಮಾರಿಯ ಅಟ್ಟಹಾಸ ಪ್ರಪಂಚವನ್ನೇ ನಲುಗಿಸಿಬಿಟ್ಟಿದೆ. ಎಷ್ಟೋ ಜನರ ಕೂಳನ್ನೇ ಕಿತ್ತುಕೊಂಡಿದೆ, ಮನೆಯಿಲ್ಲದೆ ಬೀದಿಗೆ ಬೀಳುವಂತೆ ಮಾಡಿದೆ. ಅಷ್ಟೇ ಯಾಕೆ ಲಕ್ಷಾಂತರ ಮಂದಿಯ ಪ್ರಾಣವನ್ನೇ ಕಸಿದುಕೊಂಡಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದ ಜನರಿಗೆ ಕೆಲವರು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇದ್ದಾರೆ ತಮಿಳುನಾಡಿನ ಈ ದಂಪತಿ.
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಎಷ್ಟೋ ಹಸಿದ ಹೊಟ್ಟೆಗಳಿಗೆ ಈ ದಂಪತಿ ಆಹಾರವನ್ನು ನೀಡಿದ್ದಾರೆ. ಈಗಲೂ ಕೂಡ ನೀಡುತ್ತಲೇ ಇದ್ದಾರೆ. ತಮಿಳುನಾಡಿನ ಪುಷ್ಪರಾಣಿ ಮತ್ತು ಪತಿ ಚಂದ್ರಶೇಖರ್ ಲಾಕ್ ಡೌನ್ ವೇಳೆಯಲ್ಲಿ ಕೇವಲ 1 ರೂಪಾಯಿಗೆ ತಿಂಡಿ ಮತ್ತು 5 ರೂಪಾಯಿಗೆ ಊಟವನ್ನು ನೀಡಿ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಷ್ಪರಾಣಿ ಸಿ, ಲಾಕ್ ಡೌನ್ ವೇಳೆ ಎಷ್ಟೋ ಜನ ಊಟವಿಲ್ಲದೆ ಹಸಿದುಕೊಂಡಿದ್ದನ್ನು ನಾವು ನೋಡಿದ್ದೇವೆ. ರಸ್ತೆ ಬದಿಯಲ್ಲಿ ಇರುವ ಜನರಿಗೆ, ದಿನಗೂಲಿ ಮಾಡುವವರಿಗೆ, ಕೆಲಸ ಕಳೆದುಕೊಂಡ ಅದೆಷ್ಟೋ ಜನರನ್ನು ನಾವು ಗಮನಿಸಿದ್ದೇವೆ. ಇಂತಹ ಮಂದಿಯನ್ನೇ ಗಮನದಲ್ಲಿ ಇಟ್ಟುಕೊಂಡು ನಾವು 1 ರೂಪಾಯಿಗೆ ಇಡ್ಲಿ ಮತ್ತು ಚಟ್ನಿಯನ್ನು ನೀಡುತ್ತಿದ್ದೇವೆ ಎಂದಿದ್ದಾರೆ.
ಲಾಕ್ ಡೌನ್ ಆಗುವುದಕ್ಕಿಂತ ಮುಂಚೆ ಪುಷ್ಪರಾಣಿ ಪತಿ ಚಂದ್ರಶೇಖರ್ ವೆಲ್ಡರ್ ಕೆಲಸ ಮಾಡುತ್ತಿದ್ದು ನಂತರದ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಆ ಕೆಲಸವನ್ನು ಬಿಟ್ಟು ಹೋಟೆಲ್ ಶುರು ಮಾಡಿದ್ರಂತೆ. ಬ್ಯಾಂಕಿನಲ್ಲಿ 50,000 ಸಾಲ ಪಡೆದ ಈ ದಂಪತಿ ಬಡ ಜನರಿಗೆ ಸಹಾಯವಾಗುವಂತೆ ಊಟವನ್ನು ನೀಡುತ್ತಿದ್ದಾರೆ.
ಪ್ರತಿ ದಿನ ಸುಮಾರ 400 ಮಂದಿ ಇವರ ಬಳಿ ಬಂದು ಊಟ ಮಾಡಿ ಹೋಗ್ತಾರೆ. ಪ್ರತಿನಿತ್ಯ ಮುಂಜಾನೆ 4 ಗಂಟೆಗೆ ಇವರ ಅಡುಗೆ ಕೆಲಸ ಶುರುವಾಗುತ್ತದೆ. ಮನೆಯ ಮಕ್ಕಳು ಕೂಡ ಇದಕ್ಕೆ ಸಹಾಯ ಮಾಡುತ್ತಿದ್ದು, ತರಕಾರಿ ಕತ್ತರಿಸುವ ಕೆಲಸ ಮಾಡುತ್ತಾರೆ ಎಂದು ಪುಷ್ಪ ಹೇಳಿದ್ದಾರೆ. ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ತಿಂಡಿ ಮಾರಾಟ ಮಾಡಿದರೆ, ಮಧ್ಯಾಹ್ನ ಮೂರು ಗಂಟೆಯವರೆಗೆ ಊಟವನ್ನು ಮಾರಾಟ ಮಾಡ್ತಾರಂತೆ.