ರಾಮದುರ್ಗ: ತಾಲೂಕಿನ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿದ್ದ ಕ್ರೀಡಾಂಗಣ ನಿರ್ಮಾಣಕ್ಕೆ ಈಗ ಕಾಲ ಕೂಡಿ ಬಂದಿದ್ದು, 14 ಕೋಟಿ ಅನುದಾನದಲ್ಲಿ 10 ಏಕರೆ ವಿಸ್ತೀರ್ಣದಲ್ಲಿ ಬೃಹತ್ ತಾಲೂಕು ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ತಾಲೂಕಾ ಕ್ರೀಡಾಂಗಣ ಸ್ಥಳದಲ್ಲಿ ನರೇಗಾ ಯೋಜನೆಯಡಿ 20 ಲಕ್ಷ ಅನುದಾನಲ್ಲಿ ಸ್ವಚ್ಛತಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
2004ರಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ತಾವು ಶಾಸಕರಾಗಿದ್ದಾಗ ಕಂಕಣವಾಡಿ ಗ್ರಾಮದಲ್ಲಿ ಮನೆಗಳ ನಿರ್ಮಾಣಕ್ಕೆ ಮುಂದಾಗಿ ಹೌಸಿಂಗ್ ಬೋರ್ಡ್‌ದಿಂದ ಭೂಮಿ ಖರೀದಿಸಲಾಗಿತ್ತು. ಇದು ಪ್ರವಾಹ ಪೀಡಿತ ಪ್ರದೇಶವಾಗಿದ್ದು, ಅಲ್ಲಿ ಮನೆಗಳ ನಿರ್ಮಾಣ ತಡೆಹಿಡಿಯಲಾಯಿತು. ಈಗ ತಾಲೂಕಾ ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಿ 15 ಏಕರೆಯಲ್ಲಿ 10 ಏಕರೆ ಭೂಮಿಯನ್ನು ಕ್ರೀಡಾ ಇಲಾಖೆ ಖರೀದಿಸಿ ಸುಸಜ್ಜಿತ ತಾಲೂಕಾ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕ್ರೀಡಾಂಗಣ ನಿರ್ಮಾಣದಿಂದ ತಾಲೂಕಿನಲ್ಲಿ ನಡೆಯುವ ಪ್ರತಿಯೊಂದು ಕ್ರೀಡಾಕೂಟಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಬರುವ ದಿನಗಳಲ್ಲಿ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿ ಹೆಚ್ಚಿನ ಕ್ರೀಡಾಪಟುಗಳನ್ನು ತಯಾರು ಮಾಡುವಂತೆ ಕರೆ ನೀಡಿದರು. ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಹಾಗೂ ತಾ.ಪಂ ಇಒ ಪ್ರವೀಣಕುಮಾರ ಸಾಲಿ ಮಾತನಾಡಿ, ಶಾಸಕ ಮಹಾದೇವಪ್ಪ ಯಾದವಾಡ ಅವರು ಸಾಕಷ್ಟು ಶ್ರಮಪಟ್ಟು ಹೌಸಿಂಗ್ ಬೋರ್ಡ ಅಧೀ ನದಲ್ಲಿದ್ದ
ಭೂಮಿಯನ್ನು ಕ್ರೀಡಾ ಇಲಾಖೆಗೆ ಖರೀದಿಸಲು ಶ್ರಮಿಸಿದ್ದಾರೆ. ಜನರ ಬೇಡಿಕೆಯಂತೆ ಕ್ರೀಡಾಂಗಣ ನಿರ್ಮಿಸಲು ಮೊದಲ ಹಂತವಾಗಿ ಈಗ 20 ಲಕ್ಷದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುವದು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ 14 ಕೋಟಿ ಅನುದಾನದಲ್ಲಿ ಕ್ರೀಡಾಂಗಣದ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಉಪಾಧ್ಯಕ್ಷ ರಾಘವೇಂದ್ರ ದೊಡಮನಿ, ಸದಸ್ಯರಾದ ನಾಗರಾಜ ಕಟ್ಟಿಮನಿ, ಶಾನೂರ ಯಾದವಾಡ, ಚಂದ್ರಕಾಂತ ಹೊಸಮನಿ, ಜಗದೀಶ ಅಳಗೋಡಿ, ಈರಬಸಯ್ಯ ಬನ್ನೂರಮಠ, ನರೇಗಾ ಯೋಜನೆಯ ಸಹಾಯಕ ನಿದೇರ್ಶಕ ಆರ್.ಬಿ. ರಕ್ಕಸಗಿ, ಮುಖಂಡ ಪ್ರಶಾಂತ ಯಾದವಾಡ, ಸುನ್ನಾಳ ಗ್ರಾ.ಪಂ ಸದಸ್ಯ ಫಕೀರಪ್ಪ ಬನ್ನೂರ, ಮಾಜಿ ಅಧ್ಯಕ್ಷ ವಿಜಯಕುಮಾರ ರಾಠೊಡ, ಪಿಡಿಓ ಶೇಖರ ಹಿರೇಸೋಮನ್ನವರ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.