Advertisement

ನಕಲಿ ಸಾಗುವಳಿ ಚೀಟಿ ನೀಡಿದರೆ ಕ್ರಮ

06:33 PM Oct 13, 2020 | Suhan S |

ಕೊಪ್ಪ: ತಾಲೂಕಿನಲ್ಲಿ ನಕಲಿ ಸಾಗುವಳಿ ಚೀಟಿಯನ್ನು ಸೃಷ್ಟಿಸಿ, ಸಾವಿರಾರು ರೂ.ಪಡೆದು ಜನರನ್ನು ಯಾಮಾರಿಸಿರುವ ಘಟನೆ ಗಮನಕ್ಕೆ ಬಂದಿದೆ. ಇದರಲ್ಲಿ ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರೊಬ್ಬರು ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. ಮೋಸ ಹೋದವರು ದೂರು ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

Advertisement

ಬಾಳಗಡಿಯಲ್ಲಿರುವ ತಾಪಂ ಸಭಾಂಗಣದಲ್ಲಿ ನಡೆದ ತ್ರೆ„ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಭಾಗದ ಜನರು ಮುಗ್ಧರಿದ್ದು, ಅವರಿಗೆ ಅಧಿಕಾರಿಗಳು ಮೋಸ ಮಾಡುವುದು ಸರಿಯಲ್ಲ. ಒಂದು ವೇಳೆ ಜನರಿಂದ ಅಧಿಕಾರಿಗಳ ವಿರುದ್ಧ ದೂರು ಬಂದರೆ ಯಾವುದೇ ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸರ್ಕಾರದ ಸಂಬಳ ಪಡೆದು ಜನರಿಗೆ ಅನ್ಯಾಯ ಎಸಗುವುದು ಸರಿಯಲ್ಲ ಎಂದು ಹರಿಹಾಯ್ದರು.

ಈ ವೇಳೆ ತಹಶೀಲ್ದಾರ್‌ ಪರಮೇಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ 94ಸಿ ಅಡಿ ಹೆಚ್ಚು ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಬಾಕಿ ಇರುವ ಹಕ್ಕುಪತ್ರಗಳನ್ನು ಶೀಘ್ರದಲ್ಲಿ ವಿತರಣೆ ಮಾಡಲಾಗುತ್ತದೆ. ಹಲವು ಹಕ್ಕುಪತ್ರಗಳು ಗೋಮಾಳ ಹಾಗೂ ಅರಣ್ಯ ಪ್ರದೇಶದಲ್ಲಿವೆ. ಇವುಗಳಿಗೆ ಜಂಟಿಯಾಗಿ ಸರ್ವೇ ಆಗಬೇಕಿದೆ. ಆ ಕಾರಣದಿಂದ ವಿಳಂಬವಾಗುತ್ತಿದೆ ಎಂದರು.

ಆಗ ಶಾಸಕರು ಮಾತನಾಡಿ, ಪಹಣಿಯಲ್ಲಿ ಗೋಮಾಳ ಎಂದು ನಮೂದು ಇದ್ದರೇ ತಹಶೀಲ್ದಾರ್‌ ಹಕ್ಕುಪತ್ರವನ್ನು ನೀಡಬಹುದು. ಯಾವುದನ್ನೂ ಬಾಕಿ ಉಳಿಸಬೇಡಿ, ಶೀಘ್ರವಾಗಿ ವಿಲೇ ಮಾಡಿ ಎಂದು ತಿಳಿಸಿದರು. ಅಂತ್ಯಸಂಸ್ಕಾರದ 109 ಅರ್ಜಿಗಳು ಬಂದಿದ್ದು, ಅವರಿಗೆ ನೀಡಲು ಹಣ ಇಲ್ಲ. ಸರ್ಕಾರ ಅನುದಾನ ಬಿಡುಗಡೆಗೊಳಿಸಿಲ್ಲ ಎಂದು ತಹಶೀಲ್ದಾರ್‌ ಸಭೆಯ ಗಮನಕ್ಕೆ ತಂದರು. ಶಾಸಕರು ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಹಣ ಬಿಡುಗಡೆಗೊಳಿಸುವ ಬಗ್ಗೆ ಪ್ರಯತ್ನಿಸಲಾಗುತ್ತದೆ ಎಂದರು.

ಕೆಡಿಪಿ ನಾಮನಿರ್ದೇಶಿತ ಸದಸ್ಯ ಮಣಿಕಂಠ ಕಂದಸ್ವಾಮಿ ಮಾತನಾಡಿ, ವೃದ್ಧಾಪ್ಯ ವೇತನ, ವಿಧವಾ ವೇತನಗಳು ಹಲವರಿಗೆ ಸರ್ಕಾರದಿಂದ ಬರುತ್ತಿಲ್ಲ ಎಂದರು. ಆಗ ತಹಶೀಲ್ದಾರ್‌ ಮಾತನಾಡಿ, ಕೆಲವರ ಬ್ಯಾಂಕ್‌ ಖಾತೆ ಮತ್ತು ಅಧಾರ್‌ ಸಂಖ್ಯೆ ವ್ಯತ್ಯಾಸದಿಂದ ಈಸಮಸ್ಯೆಯಾಗಿದೆ. ಅಂತಹವರು ತಾಲೂಕು ಕಚೇರಿಗೆ ಬಂದರೆ ಸರಿಪಡಿಸಲಾಗುತ್ತದೆಎಂದರು. ಆಗ ಇನ್ನೋರ್ವ ಸದಸ್ಯ ಉದಯ್‌ ಕುಮಾರ್‌ ಮಾತನಾಡಿ, ಗ್ರಾಮ ಲೆಕ್ಕಿಗರು ತಪ್ಪು ಮಾಹಿತಿ ನೀಡಿದ್ದರಿಂದ ಈ ಸಮಸ್ಯೆಯಾಗಿದೆ. ಗ್ರಾಮಲೆಕ್ಕಿಗರಿಗೆ ಸರಿಯಾಗಿ ಸೂಚನೆ ನೀಡಿ, ತಪ್ಪು ಮಾಹಿತಿ ನೀಡದಂತೆ ಜಾಗ್ರತೆ ವಹಿಸಲು ಹೇಳಿ ಎಂದರು.

Advertisement

ಭೂಮಾಪನ ಇಲಾಖೆಯ ಸಿಬ್ಬಂದಿಗೆ ಟಾರ್ಗೆಟ್‌ ನೀಡಿ ಕೆಲಸ ಕೊಡಬೇಕು. ಹಲವು ಹಕ್ಕುಪತ್ರಗಳು ವಿತರಣೆ ಮಾಡಲು ಭೂಮಾಪನ ಇಲಾಖೆಯವರು ಸರ್ವೇ ಮಾಡದೇ ಸಮಸ್ಯೆ ಆಗಿದೆ. ಗ್ರಾಪಂವಾರು ಫಲಾನುಭವಿಗಳ ಮನೆಗೆ  ತೆರಳಿ ಸರ್ವೇ ನಡೆಸಲು ಒಂದು ಟೈಂ ಟೇಬಲ್‌ ರೂಪಿಸಿಕೊಡಿ. ಗ್ರಾಮ ಲೆಕ್ಕಿಗರು ಸಹ ಇವರಿಗೆಸಹಕಾರ ನೀಡಬೇಕು ಎಂದು ಶಾಸಕರು ತಹಶೀಲ್ದಾರ್‌ಗೆ ಸೂಚಿಸಿದರು.

ಗ್ರಾಪಂವಾರು ಕೋವಿಡ್ ಪರೀಕ್ಷೆ: ಕೋವಿಡ್

ತಾಲೂಕಿನಲ್ಲಿ ಸಾಮೂಹಿಕವಾಗಿ ಹರಡಿದೆ. ಜನರು ಇನ್ನಷ್ಟು ಜಾಗೃತರಾಗಿ ಇರಬೇಕು. ನಮ್ಮಲ್ಲಿ ಎ ಕೆಟಗೆರೆಯಲ್ಲಿ ವೈರಾಣು ಕಾಣಿಸಿಕೊಂಡಿದ್ದು, ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ಸೋಂಕು ತಗುಲಿರುತ್ತದೆ. ಆದ್ದರಿಂದ, ಪ್ರತಿಯೊಬ್ಬರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ, ಯಾರು ಸಹ ಮುಂದೆ ಬಂದು ಪರೀಕ್ಷೆ ಮಾಡಿಕೊಳ್ಳುವುದಿಲ್ಲ. ಇಲಾಖೆಯಿಂದ ನಿತ್ಯ 200 ಜನರಿಗೆ ಪರೀಕ್ಷೆ ಮಾಡಲು ಟಾರ್ಗೆಟ್‌ ನೀಡಲಾಗಿದೆ ಎಂದು ತಾಲೂಕು ವೈದ್ಯಾ ಧಿಕಾರಿ ಮಹೇಂದ್ರ ಕಿರೀಠಿ ಹೇಳಿದರು.

ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್‌ ಮಾತನಾಡಿ, ಆರೋಗ್ಯ ಇಲಾಖೆಯೇ ಜನರ ಬಳಿ ಹೋಗಿ ಪರೀಕ್ಷೆ ನಡೆಸುವಂತಾಗಬೇಕು. ಅಂತಹ ಯೋಜನೆ ಮಾಡಿ ಎಂದು ಸಲಹೆ ನೀಡಿದರು.

ಈ ವೇಳೆ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಮತ್ತುಆರೋಗ್ಯ ಇಲಾಖೆ ಒಟ್ಟುಗೂಡಿ ಒಂದು  ಯೋಜನೆಯನ್ನು ರೂಪಿಸಿಕೊಂಡು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ತೆರಳಿ ಪ್ರತಿಯೊಬ್ಬರ ಪರೀಕ್ಷೆ ಮಾಡಿ ಎಂದರು. ಆಗ ತಾಪಂ ಇಒ ನವೀನ್‌ ಕುಮಾರ್‌ ಮಾತನಾಡಿದರು. ಕೆಡಿಪಿ ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಜೆ.ಎಸ್‌. ಲಲಿತಾ, ನಾಮ ನಿರ್ದೇಶಿತ ಸದಸ್ಯರಾದ ಪೂರ್ಣಚಂದ್ರ, ಸಂತೋಷ್‌ ಅರನೂರು, ಪದ್ಮಾವತಿ ರಮೇಶ್‌, ವೆಂಕಟೇಶ್‌, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next