Advertisement

ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ತಾಲೂಕು ಮಟ್ಟದಲ್ಲೇ ಪ್ರಶ್ನೆ ಪತ್ರಿಕೆ

11:09 PM Feb 01, 2023 | Team Udayavani |

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಈ ಬಾರಿ ತಾಲೂಕು ಮಟ್ಟದಲ್ಲಿ ತಯಾರಾಗಲಿದೆ. ಈವರೆಗೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಪ್ರಶ್ನೆ ಪತ್ರಿಕೆ ತಯಾರಿಯ ಜವಾಬ್ದಾರಿಯನ್ನು 2022-23ರ ಸಾಲಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಈ ತಿಂಗಳು ಪರೀಕ್ಷೆ ನಡೆಯಲಿದ್ದು ವೇಳಾಪಟ್ಟಿ ಇನ್ನಷ್ಟೆ ಪ್ರಕಟಗೊಳ್ಳಬೇಕಿದೆ.

Advertisement

ಪೂರ್ವ ಸಿದ್ಧತಾ ಪರೀಕ್ಷೆಯನ್ನು ಬಿಇಒಗಳ ಹಂತದಲ್ಲೇ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಅನುಮೋದನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿಯಿಂದ ಮಾದರಿ ಪ್ರಶ್ನೆ ಪತ್ರಿಕೆಯನ್ನು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ಗೆ ಅಪ್‌ಲೋಡ್‌ ಮಾಡಲಾಗುವುದು. ಆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಅನುಸರಿಸಿ ಬಿಇಒಗಳು ತಮ್ಮ ಹಂತದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮುದ್ರಣ ಮಾಡಿ ತಾಲೂಕು ಹಂತದ ಸ್ಟ್ರಾಂಗ್‌ ರೂಂನಲ್ಲಿ ಗೌಪ್ಯತೆ ಮತ್ತು ಸುರಕ್ಷಿತವಾಗಿಡಬೇಕು. ಆಯಾ ವಿಷಯದ ಪರೀಕ್ಷಾ ದಿನದಂದು ಅವುಗಳನ್ನು ಬಿಗಿ ಭದ್ರತೆಯಲ್ಲಿ ಶಾಲೆಗಳಿಗೆ ವಿತರಣೆ ಮಾಡಬೇಕು. ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪರೀಕ್ಷೆ ನಡೆಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.

ಪರೀಕ್ಷಾ ಶುಲ್ಕವಾಗಿ ಪ್ರತೀ ವಿದ್ಯಾರ್ಥಿಗಳಿಂದ 60 ರೂ.ಗಳನ್ನು ಮಾತ್ರ ಸಂಗ್ರಹಿಸಲು ಸೂಚಿಸಿದೆ. ಈ ಶುಲ್ಕವನ್ನು ಶಾಲಾ ಮುಖ್ಯೋಪಾಧ್ಯಾಯರು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು. ಬಿಇಒಗಳು ಪರೀಕ್ಷಾ ಶುಲ್ಕ ಸ್ವೀಕರಿಸಿದ ಮತ್ತು ಪರೀಕ್ಷಾ ಖರ್ಚು ವೆಚ್ಚಗಳ ಕುರಿತು ಲೆಕ್ಕಪತ್ರ ನಿರ್ವಹಿಸಿ ತಪಾಸಣಾ ಸಮಯದಲ್ಲಿ ಹಾಜರುಪಡಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.

2018ಕ್ಕೆ ಮೊದಲು ಶಿಕ್ಷಕರ ಸಂಘದಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿತ್ತು. ನಂತರ ಅದನ್ನು ಶಿಕ್ಷಕರ ಒತ್ತಾಯದ ಮೇರೆಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲು ಕ್ರಮ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next