Advertisement

ತಾಲೂಕು ಮಟ್ಟಕ್ಕೂ ಬಂತು “ಸಮನ್ವಯ’ವ್ಯವಸ್ಥೆ 

12:30 AM Feb 16, 2019 | |

ಬೆಂಗಳೂರು: ಆಡಳಿತ ಮತ್ತು ಅಭಿವೃದ್ಧಿಯ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಮತ್ತು ಅಧಿಕಾರಿಗಳ ನಡುವೆ “ಸಮನ್ವಯ’ ಸಾಧಿಸಿ ಆಡಳಿತ ಯಂತ್ರ ಚುರುಕುಗೊಳಿಸುವ ಹಾಗೂ ಅಭಿವೃದ್ಧಿ  ಕಾಮಗಾರಿಗಳಿಗೆ ವೇಗ ನೀಡುವ ಹೆಚ್ಚುವರಿ ಹೊಣೆಗಾರಿಕೆ ಇದೀಗ ಉಪ ವಿಭಾಗಾಧಿಕಾರಿಗಳ ಹೆಗಲಿಗೆ ಬಿದ್ದಿದೆ.

Advertisement

ಇಲ್ಲಿವರೆಗೆ ಈ “ಸಮನ್ವಯ’ ವ್ಯವಸ್ಥೆ ಜಿಲ್ಲಾಮಟ್ಟದಲ್ಲಿ ಮಾತ್ರ ಇತ್ತು. ಇದೀಗ ಉಪ ವಿಭಾಗಾಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡುವ ಮೂಲಕ ಅದನ್ನು ತಾಲೂಕು ಮಟ್ಟದಲ್ಲೂ ತರಲಾಗಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮಧ್ಯೆ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಸಮನ್ವಯ ಸಾಧಿಸುತ್ತಾರೆ. ಅದಲ್ಲದೇ ಅವರ ಅಧೀನದಲ್ಲಿ ಬರುವ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಮಾಡುತ್ತಾರೆ.

ತಾಲೂಕು ಮಟ್ಟದಲ್ಲಿ ಪಂಚಾಯತ್‌ ಸಿಇಒ, ನಗರ ಪಾಲಿಕೆ, ನಗರಸಭೆ, ಪುರಸಭೆ ಮುಖ್ಯಾಧಿಕಾರಿ ಹಾಗೂ ಆಯುಕ್ತರು, ತಹಶೀಲ್ದಾರ್‌, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕ್ಷೇತ್ರ ಶಿಕ್ಷಣಾಧಿಕಾರಿ ಮುಂತಾದ ಅಧಿಕಾರಿಗಳು ಸಮಾನ ಶ್ರೇಣಿಯ ಅಧಿಕಾರಿಗಳಾಗಿರುವುದರಿಂದ ಅವರ ನಡುವೆ ಉದ್ಭವಿಸಬಹುದಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿ ಅಥವಾ ಜಿ.ಪಂ. ಸಿಇಒ ಗಮನಕ್ಕೆ ತರಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಮನ್ವಯದ ಕೊರತೆಯಿಂದಾಗಿ ಸಮಸ್ಯೆಯ ಇತ್ಯರ್ಥ ವಿಳಂಬವಾಗುತ್ತದೆ.

ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅವುಗಳ ಪ್ರಗತಿ ತೀವ್ರಗೊಳಿಸುವ ಕುರಿತು ಸೂಚನೆ ನೀಡಲು, ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ತಪಾಸಣೆ ಮಾಡಲು ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಮಧ್ಯೆ ಸಮನ್ವಯ ಸಾಧಿಸಿ,ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಅಧಿಕಾರ ನೀಡುವುದು ಸೂಕ್ತ ಎಂಬ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಇತ್ತು. ಇದೀಗ ಆ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 2019ರ ಜ.31ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. “ಸಮಾನ ಶ್ರೇಣಿ’ ಅಡ್ಡಿ ಆಗಿತ್ತಾ?: ತಾಲೂಕು ಮಟ್ಟದಲ್ಲಿ ಆಡಳಿತ ಮತ್ತು ಅಭಿವೃದಿಟಛಿ ದೃಷ್ಟಿಯಿಂದ ಹೆಚ್ಚು ಮಹತ್ವ ಹೊಂದಿರುವ ಮತ್ತು ಜನಸಾಮಾನ್ಯರಿಗೆ ತೀರಾ ಹತ್ತಿರ ಇರುವ ಹಲವಾರು ಇಲಾಖೆಗಳಿದ್ದು, ಆ ಇಲಾಖೆಗಳ ಹಿರಿಯ ಅಧಿಕಾರಿಗಳೆಲ್ಲರೂ ಸಮಾನ ಶ್ರೇಣಿ ಹೊಂದಿದವರಾಗಿರುತ್ತಾರೆ.

ಹಾಗಾಗಿ, ಒಬ್ಬ ಅಧಿಕಾರಿಯು ತನ್ನಷ್ಟೇ ಸಮಾನ ಶ್ರೇಣಿ ಹೊಂದಿದ ಮತ್ತೂಬ್ಬ ಅಧಿಕಾರಿಯ ಜೊತೆಯಲ್ಲಿ ವ್ಯವಹರಿಸಬೇಕಾದರೆ ಸಮನ್ವಯದ ಕೊರತೆ ಸಹಜವಾಗಿ ಬರುತ್ತದೆ. ಎಲ್ಲರೂ ಸಮಾನ ಶ್ರೇಣಿಯವರಾಗಿರುವುದರಿಂದ ಯಾರಿಗೆ ಯಾರು ಉತ್ತರಿಸಬೇಕು ಎಂಬ “ಉತ್ತರದಾಯಿತ್ವದ’ ಆಡಳಿತಾತ್ಮಕ ಸಮಸ್ಯೆಯೂ ಎದುರಾಗುತ್ತದೆ.

Advertisement

ಕೆಲವೊಂದು ಸಂದರ್ಭಗಳಲ್ಲಿ ಸಮಾನ ಶ್ರೇಣಿ ಎಂಬ ಪ್ರತಿಷ್ಠೆಯೂ ಅಡ್ಡಿ ಬರುತ್ತಿತ್ತು. ಇದು ತಾಲೂಕು ಮಟ್ಟದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಿ ಆಡಳಿತ ಮತ್ತು ಅಭಿವೃದಿಟಛಿ ವಿಚಾರಗಳಲ್ಲಿ ಸಾಕಷ್ಟು ಗೊಂದಲಗಳು ನಿರ್ಮಾಣವಾಗುತ್ತಿದ್ದವು. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ಉಪ ವಿಭಾಗಾಧಿಕಾರಿಗಳಿಗೆ “ಸಮನ್ವಯ’ದ ಹೊಣೆ ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

“ಸಮನ್ವಯ’ಕ್ಕೆ ಹೆಚ್ಚುವರಿ ಹೊಣೆ ಏನು?
ತಾಲೂಕು ಮಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಸಮಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕಾಲಮಿತಿಯೊಳಗೆ ಪರಿಹಾರ ಕಂಡುಕೊಳ್ಳಲು ತಾಲೂಕು ಪಂಚಾಯತ್‌ ಸಿಇಒ,ನಗರ ಪಾಲಿಕೆ, ನಗರಸಭೆ, ಪುರಸಭೆ ಮುಖ್ಯಾಧಿಕಾರಿ ಹಾಗೂ ಆಯುಕ್ತರು, ತಹಶೀಲ್ದಾರ್‌, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕ್ಷೇತ್ರ ಶಿಕ್ಷಣಾಧಿಕಾರಿ ಮುಂತಾದ ಅಧಿಕಾರಿಗಳ ನಡುವೆ ಕನಿಷ್ಠ ತಿಂಗಳಿಗೊಮ್ಮೆ ಉಪವಿಭಾಗಾಧಿಕಾರಿಗಳು ಸಮನ್ವಯ ನಡೆಸಬೇಕು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾರಿಯಾಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುವುದು ಹಾಗೂ ವಿವಿಧ ಅಭಿವೃದ್ಧಿ  ಕಾರ್ಯಕ್ರಮಗಳು, ಯೋಜನೆಗಳ ಪ್ರಗತಿ ತೀವ್ರಗೊಳಿಸುವುದರ ಜೊತೆಗೆ ಅದರಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ತಪಾಸಣೆ ಮತ್ತು ಮೇಲುಸ್ತುವಾರಿ ನೋಡಿಕೊಳ್ಳುವ ಹೆಚ್ಚುವರಿ ಹೊಣೆಯನ್ನು ಉಪ ವಿಭಾಗಾಧಿಕಾರಿಗಳಿಗೆ ಕೊಡಲಾಗಿದೆ.

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next