ಬೆಳಗಾವಿ: ಪ್ರತಿ ತಾಲೂಕಾ ಆಸ್ಪತ್ರೆ ಮಟ್ಟದಲ್ಲಿ ಏ.18ರಿಂದ 30ರವರೆಗೆ ಆರೋಗ್ಯ ಮೇಳ ಆಯೋಜಿಸಲಾಗುತ್ತಿದ್ದು ಮೊದಲ ಆರೋಗ್ಯ ಮೇಳವನ್ನು ದಿ. 18 ರಂದು ಬೈಲಹೊಂಗಲ ತಾಲೂಕಾ ಆಸ್ಪತ್ರೆ ಮಟ್ಟದಲ್ಲಿ ನಡೆಸಲಾಗುವುದು ತಾಲೂಕಿನ ಪ್ರತಿ ಗ್ರಾಮದ ನಾಗರಿಕರು ಈ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಮೇಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಂತರ್ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಿಂದ ಜಿಲ್ಲೆಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಏ.18 ರಂದು ಬೈಲಹೊಂಗಲ, ದಿ.19ರಂದು ರಾಯಬಾಗ, 20 ರಂದು ಚಿಕ್ಕೋಡಿ ಹಾಗೂ ಏ.29 ರಂದು ರಾಮದುರ್ಗ ತಾಲೂಕಾ ಆಸ್ಪತ್ರೆ ಮಟ್ಟದಲ್ಲಿ ಆರೋಗ್ಯ ಮೇಳವನ್ನು ನಡೆಸಲಾಗುವುದು. ಅದೇ ರೀತಿ ಉಳಿದ ತಾಲೂಕುಗಳ ಆರೋಗ್ಯಮೇಳದ ದಿನಾಂಕವನ್ನು ನಿಗದಿಪಡಿಸಿದ ಬಳಿಕ ಪ್ರಕಟಿಸಲಾಗುವುದು ಎಂದು ಹೇಳಿದರು.
ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡುವುದರೊಂದಿಗೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತವಾಗಿ ತಪಾಸಣೆ ಕೈಗೊಳ್ಳುತ್ತಿದ್ದು, ಸಾಧ್ಯತೆ ಇದ್ದರೆ ಅಲ್ಲಿಯೇ ಸೂಕ್ತ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಹೃದ್ರೋಗ, ಸಕ್ಕರೆ ಕಾಯಿಲೆ, ಮೂಳೆ, ಹಲ್ಲು, ಚರ್ಮ, ಕಣ್ಣು, ಕಿವಿ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಗಳ ಬಗ್ಗೆಯೂ ಜಾಗೃತಿ ಮೂಡಿಸುವ ಜೊತೆಗೆ ವ್ಯವಸ್ಥಿತ ತಪಾಸಣೆ ನಡೆಸಲಾಗುವುದು ಎಂದು ಹೇಳಿದರು.
ಮೇಳವನ್ನು ಯಶಸ್ವಿಯಾಗಿ ನಡೆಸಲು ತಾಲೂಕಾ ವೈದ್ಯಾಧಿಕಾರಿ, ತಹಶೀಲ್ದಾರ್ ಅವರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿ ವ್ಯವಸ್ಥಿತ ಆರೋಗ್ಯ ಮೇಳ ಆಯೋಜನೆ ಮಾಡಬೇಕು. ಅಗತ್ಯಕ್ಕೆ ಅನುಸಾರವಾಗಿ ಸರ್ಕಾರಿ ವೈದ್ಯರು, ಸಿಬ್ಬಂದಿ ಜೊತೆಗೆ ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗಳನ್ನೂ ಮೇಳದಲ್ಲಿ ಭಾಗವಹಿಸುವುದಕ್ಕೆ ಆಹ್ವಾನಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ| ಎಸ್. ವ್ಹಿ.ಮುನ್ಯಾಳ, ಜಿಲ್ಲಾ ಸಮೀಕ್ಷಾ ತಂಬಾಕು ನಿಯಂತ್ರಣಾಧಿಕಾರಿ ಡಾ| ಬಿ.ಎನ್.ತುಕ್ಕಾರ, ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಸ್.ಎಸ್.ಗಡೆದ ಉಪಸ್ಥಿತರಿದ್ದರು.